ಉಡುಪಿ: ರಾಜ್ಯ ಬಿಜೆಪಿ ಸರ್ಕಾರ ಬೀಳುತ್ತದೆ. ತಾವು ಮತ್ತೆ ಸಿಎಂ ಆಗಬಹುದು ಎಂದು ಕನಸು ಕಾಣುವುದನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬಿಡಬೇಕು. ಇಷ್ಟು ಹೇಳಿದ್ದೇನೆ, ಇನ್ನು ಅವರ ವಿವೇಚನೆ ಬಿಡುತ್ತೇನೆ ಎಂದು ಮೀನುಗಾರಿಕೆ, ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ತರುಗೇಟು ನೀಡಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಬಿಜೆಪಿ ಮೂರುವರೆ ವರ್ಷಗಳ ಸಮೃದ್ಧವಾದ ಆಡಳಿತ ಕೊಡುತ್ತೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳನ್ನು ಗೆಲ್ಲುತ್ತೆ. ಅದರ ನೇತ್ರತ್ವವನ್ನು ನಳಿನ್ ಕುಮಾರ್ ಕಟೀಲ್ ಅವರೇ ವಹಿಸುತ್ತಾರೆ. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಾಂಗ್ರೆಸ್, ಎಚ್.ಡಿ.ದೇವೇಗೌಡರ ಜೆಡಿಎಸ್ ಪಕ್ಷಗಳು ಸಂಪೂರ್ಣ ಸೋಲುತ್ತೆ ಎಂದು ಸಚಿವರು ಭವಿಷ್ಯ ಹೇಳಿದರು.
ಶಾಸಕ ಜಿ.ಟಿ ದೇವೆಗೌಡ ಅವರಿಗೆ ಬಿಜೆಪಿಯ ಒಲವಿನ ಕುರಿತು ಪ್ರತಿಕ್ರಿಯಿಸಿದ ಸಚಿವರು, ಬಿಜೆಪಿಯಿಂದ ಸಮೃದ್ಧ, ವ್ಯವಸ್ಥಿತ ಆಡಳಿತ ಸಿಗುತ್ತೆ ಎಂಬುದಾಗಿ ಜಿ.ಟಿ.ದೇವೆಗೌಡ ಮಾತ್ರವಲ್ಲದೆ ಅನೇಕರಿಗೆ ಈ ಭಾವನೆ ಬಂದಿದೆ. ಹಲವು ಹಿರಿಯರು ಬಿಜೆಪಿ ಕಡೆ ವಾಲುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿಗೆ ಶುಭದಿನ ಆಗುವ ವಾತಾವರಣ ಹೆಚ್ಚಾಗಲಿದೆ ಎಂದರು.
ಬೆಳಗಾವಿ ಪ್ರವಾಹ ಸಭೆಯಲ್ಲಿ ದುಂದುವೆಚ್ಚ ಆಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಟೀ,ತಿಂಡಿ ಕೊಟ್ಟರೆ ಅದು ಬಾರಿ ದೊಡ್ಡ ಅಪರಾಧ ಅಲ್ಲ ಯಾವುದೇ ದುಂದುವೆಚ್ಚ ಆಗಿಲ್ಲ. ಕೇಂದ್ರ ಸಮೀಕ್ಷೆ ಮಾಡಿ ಹೋಗಿದೆ, ಹಣಕ್ಕೆ ತೊಂದರೆ ಇಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಅಚ್ಚರಿಯಾಗುವ, ಖುಷಿಯಾಗುವ ಮೊತ್ತ ಮುಂದಿನ ದಿನದಲ್ಲಿ ಹರಿದುಬರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.