ಕಾರವಾರ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾದ ಜಲೀಲ್ ಮತ್ತು ನೌಶಿನ್ ಕುಟುಂಬಕ್ಕೆ ಸರ್ಕಾರ ತಲಾ 10 ಲಕ್ಷ ಪರಿಹಾರ ನೀಡಿರುವುದಕ್ಕೆ ಜಿಜ್ಞಾಸೆಯಿದೆ. ಇದು ಸತ್ಯ ಕೂಡ ಎಂದು ಬಂದರು ಹಾಗೂ ಮುಜರಾಯಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾರೋ ಗಲಭೆ ಮಾಡಿ, ಗುಂಡೇಟು ತಿಂದವರಿಗೆ ಪರಿಹಾರ ನೀಡುತ್ತೀರಾ ಎನ್ನುವ ಚರ್ಚೆ ಇದೆ. ಸಿದ್ದರಾಮಯ್ಯ, ಕುಮಾರಸ್ವಾಮಿ ಸರ್ಕಾರ ಇರುವಾಗ ರಾಜ್ಯದಲ್ಲಿ 24 ಜನ ದುರಂತದಲ್ಲಿ ಸಾವಿಗೀಡಾಗಿದ್ದಾರೆ. ಒಂದು ಪೈಸೆ ಸಹ ಕೊಟ್ಟಿಲ್ಲ ಈಗ ನೀವು ಯಾಕೆ ಕೊಡುತ್ತಿದ್ದೀರಿ ಎಂದು ಕೇಳುತ್ತಿದ್ದಾರೆ. ಸರ್ಕಾರ ಮಾನವೀಯತೆಯ ನೆಲೆಯಲ್ಲಿ ಕೆಲವು ವಿಚಾರಗಳನ್ನು ಗಮನಿಸಬೇಕಾದಂತಹ ಅನಿವಾರ್ಯತೆಯಿದೆ. ಹೀಗಾಗಿ ಪರಿಹಾರ ಘೋಷಣೆ ಮಾಡಿದ್ದಾರೆ ಎಂದರು.
ಯಾರೇ ತಪ್ಪು ಮಾಡಿದರೂ ಅವರನ್ನು ನಿಯಂತ್ರಣ ಮಾಡುವ ಶಕ್ತಿ ಸರ್ಕಾರಕ್ಕಿದೆ. ಯಾರೇ ತಪ್ಪು ಮಾಡಿದರೂ ಸರ್ಕಾರ ಸಹಿಸಿಕೊಳ್ಳುವುದಿಲ್ಲ. ಕುಮಾರಸ್ವಾಮಿ, ಸಿದ್ದರಾಮಯ್ಯನವರು ಸರ್ಕಾರವನ್ನು ಪ್ರಶಂಸೆ ಮಾಡುತ್ತಾರೆ ಎಂಬ ಭಾವನೆಯಲ್ಲಿ ಸರ್ಕಾರ ಇಲ್ಲ. ಅವರ ಟೀಕೆಗಳು ಅರ್ಥವಿಲ್ಲದವು ಎಂದು ಕಿಡಿಕಾರಿದರು.