Connect with us

Districts

ಆಮೆಗತಿಯಲ್ಲಿ ಸಾಗುತ್ತಿದೆ ಯುಜಿಡಿ ಕಾಮಗಾರಿ- ಶಾಸಕ ಸೈಲೆಂಟ್

Published

on

– ಶಾಸಕರ ವಿರುದ್ಧ ಸಾರ್ವಜನಿಕರು ಅಸಮಾಧಾನ

ಕೊಪ್ಪಳ: ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಒಳಚರಂಡಿ ನೀರು (ಯುಜಿಡಿ) ಸರಬರಾಜು ಕಾಮಗಾರಿಗೆ ಈಗ 20 ವರ್ಷ ತುಂಬಿದ್ದು, ನಗರಸಭೆ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಕಾಮಗಾರಿ ಪೂರ್ಣಗೊಳ್ಳಲು ಎರಡು ದಶಕಗಳೇ ಬೇಕಾಗಿದೆ. ಈ ಬಗ್ಗೆ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರಿಗೆ ಸಾರ್ವಜನಿಕರು ಸಾಕಷ್ಟು ಬಾರಿ ದೂರು ನೀಡಿದರು. ಆದರೆ ಶಾಸಕರು ಮಾತ್ರ ಸೈಲೆಂಟ್ ಆಗಿದ್ದಾರೆ. ಶಾಸಕರ ಈ ನಡೆ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ಸಾರ್ವಜನಿಕ ಆರೋಪ ಮಾಡುತ್ತಿದ್ದಾರೆ.

ಗಂಗಾವತಿ ನಗರದಲ್ಲಿ ಗುಂಡಿಬಿದ್ದು, ಸಾಕಷ್ಟು ಜನರು ಗಾಯ ಮಾಡಿಕೊಂಡಿದ್ದಾರೆ. ಕಾಮಗಾರಿ ಆಮೆ ಗತಿಯಲ್ಲಿ ನಡೆಯುತ್ತಿದೆ. ಯುಜಿಡಿ ಕೆಲಸ ಕಳೆಪೆ ಕಾಮಗಾರಿ ನಡೆಯುತ್ತಿದೆ. ಶಾಸಕ ಪರಣ್ಣ ಮಾತ್ರ ನನಗೆ ಸಂಬಂಧ ಇಲ್ಲದ ರೀತಿ ವರ್ತಿಸುತ್ತಿರುವುದು ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಕೋಟ್ಯಂತರ ರೂಪಾಯಿ ಅನುದಾನ ಹರಿದು ಬಂದರೂ ಇಲ್ಲಿಯವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ. ಯುಜಿಡಿ ಕುರಿತು 2001-02 ನೇ ಸಾಲಿನಲ್ಲಿ ಕಾಮಗಾರಿ ನಡೆಸುವ ಕುರಿತು ನಗರಸಭೆ ಯೋಜನೆಯನ್ನು ತಯಾರಿಸಿತು. 17.2 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರಾರಂಭಗೊಂಡಿರುವ ಯುಜಿಡಿ ಕಾಮಗಾರಿ ಇದುವರೆಗೂ ಪ್ರಗತಿ ಹಂತದಲ್ಲಿಯೇ ಸಾಗಿದೆ. ಕಾಮಗಾರಿ ಕುಂಟುತ್ತ ಸಾಗಿದರೂ ಯಾವೊಬ್ಬ ಅಧಿಕಾರಿಗಳು ಮತ್ತು ನಗರಸಭೆ ಆಡಳಿತ ಮಂಡಳಿಯು ತಲೆ ಕೆಡಿಸಿಕೊಳ್ಳದೇ ಇರುವುದು ವಿಪರ್ಯಾಸವಾಗಿದೆ.

ಈ ಹಿಂದೆ 44 ಕಿ.ಮೀ. ಆಳಗುಂಡಿಗಳ ಸಮೇತ ಸೀವರ್ ಕೊಳವೆ ಅಳವಡಿಸುವ ಕಾಮಗಾರಿ ಪ್ರಾರಂಭಿಸಲಾಗಿತ್ತು. ನಗರದ ಹಿರೇಜಂತಕಲ್ ಹೊರ ಭಾಗದಲ್ಲಿ 14 ದಶ ಲಕ್ಷ ಲೀಟರ್ ಸಾಮಥ್ರ್ಯದ ಮಲಿನ ನೀರು ಶುದ್ಧೀಕರಣ ಘಟಕ ನಿರ್ಮಾಣ ಮಾಡಲಾಗಿತ್ತು. ನಗರ ಪ್ರದೇಶದ 15 ವಾರ್ಡ್ ವ್ಯಾಪ್ತಿಯಲ್ಲಿರುವ 14,000 ಕುಟುಂಬಗಳಿಗೆ ಯುಜಿಡಿ ಸೌಕರ್ಯ ಒದಗಿಸುವ ಕಾಮಗಾರಿ, ಅಧಿಕಾರಿಗಳ ಬೇಜವಾಬ್ದಾರಿ, ಗುತ್ತಿಗೆದಾರರ ಮತ್ತು ಶಾಸಕರ ನಿರ್ಲಕ್ಷ್ಯದಿಂದ ಹಳ್ಳ ಹಿಡಿದಿದೆ.

50 ಕೋಟಿ ಅನುದಾನ ಬಿಡುಗಡೆ: ಕೇಂದ್ರ ಸರ್ಕಾರ 1 ಲಕ್ಷಗಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಿಗೆ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ 2015-16ನೇ ಸಾಲಿನಲ್ಲಿ ಅಮೃತ್ ನಗರ ಯೋಜನೆಯಡಿ ಒಳ ಚರಂಡಿ ಯೋಜನೆ ಕಾಮಗಾರಿಗೆ ಮೊದಲ ಹಂತದಲ್ಲಿ 36 ಕೋಟಿ ರೂ.ಬಿಡುಗಡೆ ಮಾಡಿತ್ತು. 2ನೇ ಹಂತದಲ್ಲಿ 14 ಕೋಟಿ ಅನುದಾನ ಬಿಡುಗಡೆಯಾಗಿದೆ.

ನಾಲ್ಕು ಹಂತದ ಕಾಮಗಾರಿ ನಡೆಸುವ ಮೂಲಕ ಶಾಶ್ವತವಾಗಿ ಒಳಚರಂಡಿ ಸಮಸ್ಯೆ ಪರಿಹರಿಸಬೇಕೆಂದು ನಿರ್ಣಯಿಸಲಾಗಿತ್ತು. ನಗರ ವ್ಯಾಪ್ತಿಯ 220 ಕಿ.ಮೀ. ವ್ಯಾಪ್ತಿಯ ಉದ್ದಕ್ಕೂ ಯುಜಿಡಿ ಪೈಪ್‍ಲೈನ್ ಅಳವಡಿಸುವ ಮೂಲಕ 20 ಸಾವಿರಕ್ಕೂ ಅಧಿಕ ಮನೆಗಳಿಗೆ ಸಂಪರ್ಕ ಕಲ್ಪಿಸಲು ಯೋಜಿಸಲಾಗಿತ್ತು. ಆದರೆ ಇಲ್ಲಿಯವರೆಗೆ ಶೇ.40 ರಷ್ಟು ಕಾಮಗಾರಿ ಮುಕ್ತಾಯಗೊಂಡಿದೆ. ಬಾಕಿ ಕಾಮಗಾರಿ ಆಮೆಗತಿಯಲ್ಲಿ ನಡೆದಿದೆ.

11 ಸಾವಿರ ಮನೆಗಳಿಗೆ ಕನೆಕ್ಷನ್: ಈಗಾಗಲೇ ಅಮೃತ್ ಸಿಟಿ ಯೋಜನೆಯಡಿಯಲ್ಲಿ ನಗರದ 15 ವಾರ್ಡ್ ಗಳಲ್ಲಿ ಯುಜಿಡಿ ಕಾಮಗಾರಿ ಕೆಲಸ ಮುಗಿದಿದ್ದು, ಮೊದಲ ಹಂತದ 39 ಕಿ.ಮೀ ನೆಟ್ವರ್ಕ್ ನಲ್ಲಿ ಸುಮಾರು 9,300 ಮನೆಗಳ ಪೈಕಿ 8,900 ಮನೆಗಳಿಗೆ ಕನೆಕ್ಷನ್ ಕೊಡಲಾಗಿದೆ. 14 ಕಿ.ಮೀ ನೆಟ್ವರ್ಕ್ ನಲ್ಲಿ 5 ಸಾವಿರ ಮನೆಗಳ ಪೈಕಿ 3 ಸಾವಿರ ಮನೆಗಳಿಗೆ ಕನೆಕ್ಷನ್ ನೀಡಲಾಗಿದ್ದು, 2 ಸಾವಿರ ಮನೆಗಳಿಗೆ ಕನೆಕ್ಷನ್ ಕೊಡುವುದು ಬಾಕಿ ಇದೆ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಅಧಿಕಾರಿಗಳು ಹೇಳುತ್ತಾರೆ.

ಹೊರ ರಾಜ್ಯದ ಕಂಪನಿಗೆ ಗುತ್ತಿಗೆ: ಈ ಕಾಮಗಾರಿಯನ್ನು ಅಹಮದಾಬಾದ್ ಮೂಲಕ ಪಿ.ಸಿ.ಸ್ನೇಹಲ್ ಕನ್ಸಷ್ಟ್ರಕ್ಷನ್‍ಗೆ ಟೆಂಡರ್ ನೀಡಲಾಗಿದೆ. ಇದರ ನಿರ್ವಹಣೆ ಜವಾಬ್ದಾರಿಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ (ಕೆಯುಡಬ್ಲೂಎಸ್)ಗೆ ವಹಿಸಲಾಗಿದೆ. ಆದರೆ, ಟೆಂಡರ್‍ದಾರರಿಂದ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು, ನಿಗದಿಪಡಿಸಿದ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳದೇ ವಿಳಂಬವಾಗುತ್ತಿದೆ.

ಸಂಚಾರಕ್ಕೆ ತೊಂದರೆ: ನಗರದ ಡಾಂಬರು, ಸಿಸಿ ರಸ್ತೆಗಳನ್ನು ಅಗೆದು ಪೈಪ್‍ಲೈನ್ ಮಾಡಲಾಗುತ್ತಿದೆ. ತಗ್ಗು, ಗುಂಡಿ ತೋಡಿ ಹಾಗೆಯೇ ಬಿಟ್ಟಿರುವುದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದೆ.

ಒಟ್ಟಿನಲ್ಲಿ ನಾನಾ ವಾರ್ಡ್, ಕಾಲೋನಿ, ಸ್ಲಂ ಏರಿಯಾಗಳಲ್ಲಿ ಯುಜಿಡಿಯ ಅರೆಬರೆ ಕಾಮಗಾರಿಯಿಂದ ತೀವ್ರ ತೊಂದರೆಯಾಗಿದೆ. ಪೈಪ್‍ಲೈನ್ ಹಾಕುವುದರಲ್ಲೇ ವರ್ಷಾನುಗಟ್ಟಲೇ ಕಾಲಹರಣ ಮಾಡುತ್ತಿರುವುದು ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿದೆ.

Click to comment

Leave a Reply

Your email address will not be published. Required fields are marked *