ಕೊಪ್ಪಳ: ನಗರದಲ್ಲಿ ಒಂದಲ್ಲ ಒಂದು ಸಮಸ್ಯೆ ಜನರನ್ನು ಕಾಡುತ್ತಿದ್ದು, ದೂಳಿನ ಸಮಸ್ಯೆಯಿಂದ ಕೊಪ್ಪಳ ಜನತೆ ಕಂಗೆಟ್ಟಿದ್ದರು. ಇದೀಗ ಚರಂಡಿ ಸ್ವಚ್ಛಗೊಳಿಸುವ ಕಾಮಗಾರಿ ವಿಳಂಬವಾಗುತ್ತಿರುವುದರಿಂದ ಉಸಿರುಗಟ್ಟುವಂತಹ ವಾತಾವರಣ ನಿರ್ಮಾಣವಾಗಿದೆ.
ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದರಿಂದ ಸಿಸಿ ರಸ್ತೆ ಆಯಿತಪ್ಪಾ ಎಂದು ನಿಟ್ಟುಸಿರು ಬಿಡುವಷ್ಟರಲ್ಲೇ ಇದೀಗ ಚರಂಡಿ ಕಾಮಗಾರಿ ಪ್ರಾರಂಭವಾಗಿದೆ. ಕಳೆದ ಹಲವಾರು ವರ್ಷಗಳಿಂದ ಸರಿಯಾದ ಚರಂಡಿ ವ್ಯವಸ್ಥೆ ಮತ್ತು ನಿರ್ವಹಣೆ ಇಲ್ಲದೆ ಚರಂಡಿಗಳು ಹಳ್ಳಹಿಡಿದಿವೆ. ಸದ್ಯ ಕೊಪ್ಪಳ ನಗರದ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಯ ಚರಂಡಿ ಕಾಮಗಾರಿಯನ್ನು ಹೆದ್ದಾರಿ ಪ್ರಾಧಿಕಾರದವರು ಕೈಗೆತ್ತಿಕೊಂಡಿದ್ದು, ನಾನಾ ಸಮಸ್ಯೆಯಿಂದ ಚರಂಡಿ ಕಾಮಗಾರಿ ವಿಳಂಬವಾಗುತ್ತಿದೆ.
Advertisement
Advertisement
ಇದರಿಂದ ಸಾರ್ವಜನಿಕರು ವ್ಯಾಪಾರಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ಚರಂಡಿಯ ದುರ್ವಾಸನೆಯಿಂದ ರಸ್ತೆ ಮೇಲೆ ಓಡಾಡದಂತಹ ಪರಿಸ್ಥಿತಿ ನಿರ್ಮಾಣ ವಾಗಿದ್ದು, ವ್ಯಾಪಾರಸ್ಥರು ರಸ್ತೆ ಬದಿಯ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಕೊಂಡು ಮನೆಯಲ್ಲೇ ಕೂರುವಂತಾಗಿದೆ. ಇದಕ್ಕೆ ಕೊಪ್ಪಳ ನಗರಸಭೆ ಕಾರಣ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ದೂರುತ್ತಿದ್ದಾರೆ. ನಗರಸಭೆ ಅಧಿಕಾರಿಗಳು ಚರಂಡಿ ಕಾಮಗಾರಿಗೆ ಸಹಾಯ ಸಹಕಾರ ನೀಡುತ್ತಿಲ್ಲ. ಹೀಗಾಗಿ ಚರಂಡಿ ಕಾಮಗಾರಿಗೆ ತೊಂದರೆಯಾಗುತ್ತಿದೆ ದೂರಿದ್ದಾರೆ.
Advertisement
Advertisement
ಈ ಬಗ್ಗೆ ಕೊಪ್ಪಳ ನಗರಸಭೆ ಪೌರಾಯುಕ್ತ ಮಂಜುನಾಥ ಪ್ರತಿಕ್ರಿಯಿಸಿ, ರಾಷ್ಟ್ರೀಯ ಹೆದ್ದಾರಿಯವರಿಗೆ ಈ ಕೆಲಸ ವಹಿಸಲಾಗಿದೆ. ಅದು ಅವರ ಕೆಲಸ ಸಾಕಷ್ಟು ಬಾರಿ ಅವರಿಗೆ ಸಹಕಾರ ನೀಡಲಾಗಿತ್ತು. ಈಗಲೂ ನಗರಸಭೆಯಿಂದ ಸಹಾಯ ಮಾಡುತ್ತಿದ್ದೇವೆ. ಅವರೇ ಸರಿಯಾದ ಸಮಯದಲ್ಲಿ ಕಾಮಗಾರಿ ಮಾಡುತ್ತಿಲ್ಲ. ಸುಖಾಸುಮ್ಮನೆ ನಮ್ಮ ಮೇಲೆ ದೂರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.