ಕೊಪ್ಪಳ: ಕಳೆದೆರಡು ತಿಂಗಳಿನಿಂದ ಮಳೆ ಕೈ ಕೊಟ್ಟಿದ್ದರಿಂದ ಜಿಲ್ಲೆಯ ಮಳೆಯಾಶ್ರಿತ ಕೃಷಿಕರು ಕಂಗಾಲಾಗಿದ್ದಾರೆ. ಶಿವಮೊಗ್ಗ ಭಾಗದಲ್ಲಿ ಮಳೆಯಾಗಿ ತುಂಗಭದ್ರಾ ಡ್ಯಾಂ ತುಂಬಿದ್ದು, ಆ ಜಿಲ್ಲೆಯ ಒಂದಷ್ಟು ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಒಂದು ಕಡೆ ಕೊಪ್ಪಳದ ಗಂಗಾವತಿ ಹಾಗೂ ಕಾರಟಗಿ ಭಾಗದ ಭತ್ತ ಬೆಳೆಗಾರರಿಗೆ ತಮ್ಮ ಭತ್ತ ಮಾರಾಟ ಮಾಡಿದ್ದ ಹಣ ಸಿಕ್ಕಿಲ್ಲ. ಭತ್ತ ಖರೀದಿಸಿದ್ದ ವ್ಯಾಪಾರಿ ಉತ್ಪನ್ನದ ಜೊತೆ ಪರಾರಿಯಾಗಿದ್ದಾನೆ.
ಬಳ್ಳಾರಿ ಮೂಲದ ವೀರೇಶ್ ಎಂಬಾತ ರೈತರಿಗೆ ಮೋಸ ಮಾಡಿದ ವ್ಯಾಪಾರಿ. ವೀರೇಶ್ ಎರಡು ವರ್ಷಗಳಿಂದ ಗಂಗಾವತಿಯ ರಾಂಪುರದಲ್ಲಿ ವಿಶ್ವಾಸ್ ಟ್ರೇಡರ್ಸ್ ಹೆಸರಿನಲ್ಲಿ ಭತ್ತ ವ್ಯಾಪಾರ ನಡೆಸುತ್ತಿದ್ದನು. ಈ ವರ್ಷದ ಜನವರಿ ತಿಂಗಳಿಂದ ಜೂನ್‍ವರೆಗೆ ಸುಮಾರು 100ಕ್ಕೂ ಹೆಚ್ಚು ರೈತರಿಂದ 2.5 ಕೋಟಿ ಮೌಲ್ಯದ ಭತ್ತ ಖರೀದಿಸಿದ್ದ. ಮಾರುಕಟ್ಟೆಯಲ್ಲಿ ಪ್ರತಿ ಭತ್ತದ ಚೀಲಕ್ಕೆ 1100 ರೂಪಾಯಿ ಇತ್ತು. ಆದರೆ ವೀರೇಶ್ 1,250 ರೂಪಾಯಿಗೆ ಭತ್ತ ಖರೀದಿ ಮಾಡಿದ್ದನು.
Advertisement
Advertisement
ಭತ್ತ ಖರೀದಿಸುವ ವೇಳೆ ಸ್ಥಳೀಯರಾದ ನಾಸೀರ್ ಮತ್ತು ನಾಗೇಶ್ವರ್ ರಾವ್ ಇಬ್ಬರು ವೀರೇಶ್‍ನಿಗೆ ಸಾಥ್ ನೀಡಿದ್ದರು. ರೈತರಿಗೆ ಹಣ ನೀಡುವ ಬದಲು ವೀರೇಶ್ ಚೆಕ್ ನೀಡಿದ್ದನು. ಎರಡು ತಿಂಗಳ ನಂತರ ಹಣ ಡ್ರಾ ಮಾಡುವಂತೆ ಹೇಳಿ ನಾಪತ್ತೆಯಾಗಿದ್ದಾನೆ.
Advertisement
ಎರಡು ತಿಂಗಳು ನಂತರ ಬ್ಯಾಂಕಿಗೆ ಹೋದಾಗ ಚೆಕ್ ಬೌನಸ್ ಆಗಿದೆ. ನಂತರ ರೈತರು ವೀರೇಶ್‍ನನ್ನು ಸಂಪರ್ಕಿಸಿದ್ರೆ ಆತ ಊರು ತೊರೆದಿರುವ ವಿಚಾರ ಬೆಳಕಿಗೆ ಬಂದಿದೆ. ವಂಚನೆಗೆ ಒಳಗಾದ ರೈತರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪೊಲೀಸರು ನಾಸಿರ್ ಮತ್ತು ನಾಗೇಶ್ವರರಾವ್ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.