Connect with us

Districts

ಶಾಸಕ ಹಾಲಪ್ಪ ಆಚಾರರಿಗೆ ಒಲಿದು ಬರಲಿದೆಯಾ ಸಚಿವ ಸ್ಥಾನ?

Published

on

ಕೊಪ್ಪಳ: ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ನಡೆಯುತ್ತಿರುವ ವೇಳೆಯಲ್ಲಿ 11 ಅರ್ಹ ಶಾಸಕರಿಗೆ ಸಚಿವ ಸ್ಥಾನ ಪಟ್ಟು ಹಿಡಿದಿದ್ದಾರೆ. ಈ ಮಧ್ಯೆ ಯಲಬುರ್ಗಾ ಕ್ಷೇತ್ರದ ಶಾಸಕ ಹಾಲಪ್ಪ ಆಚಾರ ಅವರಿಗೆ ಸಚಿವ ಸ್ಥಾನ ದೊರೆಯಲಿದೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ತೀವ್ರವಾಗಿ ಕೇಳಿ ಬರುತ್ತಿದೆ.

ಕ್ಲೀನ್ ಇಮೇಜ್ ಜೊತೆಗೆ ಸಹಕಾರ ಕ್ಷೇತ್ರದಲ್ಲಿ ಸಾಕಷ್ಟು ಅನುಭವಿ ರಾಜಕಾರಣಿಯಾಗಿರುವ ಹಾಲಪ್ಪ ಆಚಾರ ಅವರಿಗೆ ಬಿ.ಎಸ್ ಯಡಿಯೂರಪ್ಪ ಅವರ ಸಂಪುಟದಲ್ಲಿ ಸಚಿವ ಸ್ಥಾನ ಲಭಿಸುವ ಎಲ್ಲಾ ಲಕ್ಷಣಗಳಿವೆ. ಯಲಬುರ್ಗಾ ಕ್ಷೇತ್ರ ಸೇರಿದಂತೆ ಈ ಭಾಗದಲ್ಲಿ ಬಿಜೆಪಿ ಬಲಪಡಿಸುವ ಹಿತ ದೃಷ್ಟಿಯಿಂದ ಜಿಲ್ಲೆಯ ಶಾಸಕರೊಬ್ಬರಿಗೆ ಸಚಿವ ಸ್ಥಾನ ನೀಡುವುದು ಹಿರಿಯ ಮುಖಂಡರ ದೂರ ದೃಷ್ಟಿಯೂ ಒಂದಾಗಿದೆ ಎನ್ನಲಾಗಿದೆ.

ಜಿಲ್ಲೆಯ 5 ಕ್ಷೇತ್ರಗಳ ಪೈಕಿ ಬಿಜೆಪಿಯಿಂದ ಆಯ್ಕೆಯಾದ ಮೂರು ಜನ ಶಾಸಕರಲ್ಲಿ ಹಾಲಪ್ಪ ಆಚಾರ ಒಬ್ಬರು. ಒಂದು ಬಾರಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳಿಂದ ರಾಯಚೂರು-ಕೊಪ್ಪಳ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಶಾಸಕರಾಗಿ ಆಯ್ಕೆಯಾಗುವ ಮೂಲಕ 6 ವರ್ಷಗಳ ಕಾಲ ಅನುಭವದ ಜೊತೆಗೆ ಎರಡನೇ ಬಾರಿಗೆ ಕಳೆದ ಚುನಾವಣೆಯಲ್ಲಿ ಯಲಬುರ್ಗಾ ಕ್ಷೇತ್ರದಿಂದ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ ರಾಯಲ್ ರಾಜಕಾರಣಿ ಎಂದೇ ಕರೆಯಲ್ಪಡುವ ಮಾಜಿ ಸಚಿವ ಬಸವರಾಜ ರಾಯರಡ್ಡಿ ಅವರಿಗೆ ಸೋಲಿನ ರುಚಿ ತೊರಿಸಿ, ಇವರ ವಿರುದ್ಧ ಅಭೂತಪೂರ್ವ ಮತಗಳಿಂದ ಜಯ ಸಾಧಿಸಿದ ಹಾಲಪ್ಪ ಆಚಾರ ಅವರಿಗೆ ಯಡಿಯೂರಪ್ಪ ನೇತೃತ್ವದ ಕೇಸರಿ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಕಲ್ಪಿಸುವ ಇರಾದೆಗಳು ಬಹಳಷ್ಟು ಕೇಳಿ ಬರುತ್ತಿವೆ.

ಸಚಿವ ಸ್ಥಾನ ವಂಚಿತ ಕೊಪ್ಪಳ ಜಿಲ್ಲೆಗೆ ಸಚಿವ ಸ್ಥಾನ ಒದಗಿಸುವ ಪ್ರಮುಖ ಉದ್ಧೇಶದ ಜತೆಗೆ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸಮಾನತೆ ಪ್ರಾಶಸ್ತ್ಯದ ಅವಕಾಶ ನೀಡುವುದಾಗಿದೆ. ಅಲ್ಲದೆ ರಾಜಕೀಯ ಎದುರಾಳಿ ರಾಯರೆಡ್ಡಿ ಅವರನ್ನು ಸದೆಬಡಿಯಲು ಕೇಸರಿ ಪಡೆ ಹೆಣೆದಿರುವ ಪ್ಲಾನ್ ಕೂಡ ಇದಾಗಿದೆ ಎಂಬುದು ರಾಜಕೀಯ ಮುತ್ಸದ್ಧಿಗಳ ಅಭಿಪ್ರಾಯ ಎನ್ನಲಾಗುತ್ತಿದೆ.

ನಾನು ಮಂತ್ರಿಯಾಗಬೇಕು ಎಂದು ಕನಸು ಕಾಣುವ ವ್ಯಕ್ತಿಯಲ್ಲ. ಪಕ್ಷ ನೀಡುವ ಜವಾಬ್ದಾರಿಗೆ ಸದಾ ನಾನು ತಯಾರಿದ್ದೇನೆ. ಎಂದಿಗೂ ಹಾಲಪ್ಪ ಆಚಾರ ಮಂತ್ರಿಗಿರಿಗಾಗಿ ಬೆನ್ನು ಹತ್ತಿದವನಲ್ಲ. ಜಿಲ್ಲೆಯ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಹಾಗೂ ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಡೇಸ್ಗೂರು ಅವರಿಗೆ ಸೇರಿದಂತೆ ಮೂವರಲ್ಲಿ ಒಬ್ಬರಿಗೆ ಯಾರಿಗಾದರೂ ಸರಿ ಸಚಿವ ಸ್ಥಾನ ನೀಡುವಂತೆ ಸ್ವತಃ ಶಾಸಕ ಹಾಲಪ್ಪ ಆಚಾರ ತೀರಾ ಇತ್ತೀಚಿನ ಸುದ್ದಿ ಗೋಷ್ಠಿವೊಂದರಲ್ಲಿ ಮೇಲಿನ ರೀತಿಯಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದಿಂದ ಹಿಡಿದು, ರಾಣೆಬೆನ್ನೂರಿನ ಆರ್ ಶಂಕರ್, ಬಳ್ಳಾರಿಯ ಇ.ತುಕಾರಾಮ ಹಾಗೂ ಹಾಲಿ ಡಿಸಿಎಂ, ಕೃಷಿ ಮತ್ತು ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ನಿಪ್ಪಾಣಿ ಕ್ಷೇತ್ರದಲ್ಲಿ ಸೋಲುಂಡು ಅಧಿಕಾರಕ್ಕೆ ಬಂದ ಲಕ್ಷ್ಮಣ ಸವದಿ ಕೂಡ ಬೇರೆ ಜಿಲ್ಲೆಯ ಸಚಿವರು ಕೊಪ್ಪಳ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ಅನುಭವಿಸಿದ್ದಾಗಿದೆ. ಆದರೆ, ಸ್ಥಳೀಯ ಮೂವರ ಶಾಸಕರ ಪೈಕಿ ಒಬ್ಬರಿಗೆ ಸಚಿವ ಸ್ಥಾನ ನೀಡುವ ಮೂಲಕ ಅಸಮಾನತೆ ಹೋಗಲಾಡಿಸಬೇಕೆಂಬುದು ಜಿಲ್ಲೆಯ ಕೇಸರಿ ನಾಯಕರ ಸ್ಪಷ್ಟ ಅಭಿಪ್ರಾಯವೂ ಆಗಿದೆ ಎಂದು ಹೇಳಲಾಗುತ್ತಿದೆ.

ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿಯೇ ಅತ್ಯಂತ ಹಿಂದುಳಿದ ಕೊಪ್ಪಳ ಜಿಲ್ಲೆಯ ಯಲಬುರ್ಗಾ ಕ್ಷೇತ್ರದ ಅಭಿವೃದ್ಧಿಗಾದರು ಸಚಿವ ಸ್ಥಾನ ನೀಡಬೇಕೆಂಬುದು ಜಿಲ್ಲೆಯ ಜನರ ಆಶಯ. ಜಿಲ್ಲೆಯ ಬಿಜೆಪಿ ನಾಯಕರು ಭವಿಷ್ಯ ಹೇಳುವಂತೆ, ಮುಂಬರುವ ದಿನಗಳಲ್ಲಿ ಜರುಗುವ ಸಂಪುಟ ವಿಸ್ತರಣೆಯಲ್ಲಿ ಅಂದರೆ, 11 ಜನ ರಾಜೀನಾಮೆ ನೀಡಿದ ಶಾಸಕರಿಗೆ ಉಳಿದ ಇಬ್ಬರಿಗೆ ಪಕ್ಷದವರಿಗೆ (11+3) ನೀಡುವ ಕೋಟಾದಲ್ಲಿಯಾದರೂ ಜಿಲ್ಲೆಗೆ ಸಚಿವ ಸ್ಥಾನ ಲಭಿಸುತ್ತಾ ಎಂಬುದನ್ನು ಯಾವುದಕ್ಕೂ ಜಿಲ್ಲೆಯವರು ಕಾದು ನೋಡಬೇಕಾಗಿದೆ.

Click to comment

Leave a Reply

Your email address will not be published. Required fields are marked *