ಕೊಪ್ಪಳ: ವ್ಯಕ್ತಿಯೊಬ್ಬರು ತನ್ನ ಅನಾರೋಗ್ಯಪೀಡಿತ ತಾಯಿಯನ್ನು ಸಮೀಪದ ಆಸ್ಪತ್ರೆಗೆ ನೀರು ತರುವ ತಳ್ಳು ಗಾಡಿಯಲ್ಲಿ ಕರೆದುಕೊಂಡು ಹೋದ ಮನ ಕಲಕುವ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಕುಷ್ಟಗಿ ತಾಲೂಕಿನ ಜುಂಜಲಕೊಪ್ಪ ಗ್ರಾಮದ ಹನುಮಪ್ಪ ದಾಸರ ತನ್ನ ಅಸ್ವಸ್ಥ ತಾಯಿ ಹನುಮವ್ವ ಕಲ್ಲಪ್ಪ ದಾಸರ(75) ಅವರನ್ನು ನೀರು ತರುವ ತಳ್ಳುಗಾಡಿಯಲ್ಲಿ ಕೂರಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಹನುಮವ್ವನಿಗೆ ಮೂವರು ಮಕ್ಕಳಿದ್ದಾರೆ. ಬದುಕು ಹರಸಿ ಇಬ್ಬರು ಮಕ್ಕಳು ಗೋವಾಕ್ಕೆ ಗುಳೆ ಹೋಗಿದ್ದಾರೆ. ಈ ಕುಟುಂಬಕ್ಕೆ ಕೂಲಿಯೇ ಜೀವನಾಧಾರವಾಗಿದೆ. ಪಡಿತರ ಚೀಟಿಯ ಆಹಾರ ಧಾನ್ಯ, ವೃದ್ಧಾಪ್ಯ ವೇತನ ಕೊಂಚ ಆಸರೆಯಾಗಿದೆ. ಇನ್ನು ಹನುಮವ್ವ ಅವರ ಆರೋಗ್ಯ ಆಗಾಗ ಕೈಕೊಡುತ್ತಿದ್ದು, ಆಕೆಯ ಮಗ ಹನುಮಂತಪ್ಪ ಅಥವಾ ಆತನ ಸೊಸೆಯಂದಿರು ಚಳಗೇರಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ತೋರಿಸಬೇಕಾಗುತ್ತಿದೆ.
ಈ ಗ್ರಾಮಕ್ಕೆ ಬಸ್ ಸೌಕರ್ಯವಿಲ್ಲದೆ ಖಾಸಗಿ ವಾಹನಗಳನ್ನೇ ಆಶ್ರಯಿಸಬೇಕಾಗಿದೆ. ಅಷ್ಟು ಹಣವಿಲ್ಲದ ಕಾರಣ ಹನುಮವ್ವರಿಗೆ ನೀರು ತರುವ ಗಾಡಿಯೇ ಆಂಬುಲೆನ್ಸ್ ಆಗಿದೆ. ಆಕೆಯ ಮಕ್ಕಳು ಮತ್ತು ಸೊಸೆಯಂದಿರು ನೀರು ತರುವ ತಳ್ಳುಗಾಡಿಯಲ್ಲಿ ಕೂರಿಸಿಕೊಂಡು, 2 ಕಿ.ಮೀ. ದೂರದ ಆಸ್ಪತ್ರೆಗೆ ಕರೆದೊಯ್ಯುತ್ತಾರೆ.
ಜುಂಜಲಕೊಪ್ಪ ಗ್ರಾಮದಲ್ಲಿ ಹಲವು ಕುಟುಂಬಗಳು ಇಂಥ ಸಂಕಷ್ಟ ಎದುರಿಸುತ್ತಿವೆ. ಜಿಲ್ಲಾಡಳಿತ ಗ್ರಾಮಕ್ಕೆ ಸಾರಿಗೆ ಸೌಲಭ್ಯ ಕಲ್ಪಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.