– ಹಾಲಿ ಸಂಸದ ಸಂಗಣ್ಣ ಕರಡಿಗೆ ಕೊಕ್ – ಹ್ಯಾಟ್ರಿಕ್ ಜಯಕ್ಕೆ ಬಿಜೆಪಿ ತಂತ್ರವೇನು?
– ಕೊಪ್ಪಳಕ್ಕೆ ‘ಕೈ’ ಅಭ್ಯರ್ಥಿ ಕಗ್ಗಂಟು
ಕೃಷ್ಣ ಮತ್ತು ತುಂಗಭದ್ರಾ ನದಿಗಳ ನಡುವಿನ ಪ್ರದೇಶದಲ್ಲಿರುವ ಜಿಲ್ಲೆ ಕೊಪ್ಪಳ. ಹಿಂದಿನ ರಾಯಚೂರು ಜಿಲ್ಲೆಯನ್ನು ವಿಭಜಿಸಿ 1997 ರಲ್ಲಿ ಹೊಸ ಜಿಲ್ಲೆ ಕೊಪ್ಪಳವನ್ನು (Koppala) ರಚಿಸಲಾಯಿತು. ಸಾಂಸ್ಕೃತಿಕ, ಧಾರ್ಮಿಕವಾಗಿ ರಾಜ್ಯದಲ್ಲಿ ವಿಶೇಷ ಸ್ಥಾನ ಹೊಂದಿರುವ ಕೊಪ್ಪಳ ರಾಜಕೀಯವಾಗಿಯೂ ಗಮನ ಸೆಳೆಯುತ್ತದೆ.
ಮೊದಲಿನಿಂತ ಕಾಂಗ್ರೆಸ್ (Congress) ಭದ್ರಕೋಟೆ ಎನಿಸಿಕೊಂಡಿದ್ದ ಕೊಪ್ಪಳ ಲೋಕಸಭೆ ಕ್ಷೇತ್ರದ 3 ಅವಧಿಯಿಂದ ಬಿಜೆಪಿ ತೆಕ್ಕೆಯಲ್ಲಿದೆ. ಕಳೆದ 2009ರ ಚುನಾವಣೆಯಲ್ಲಿ ಶಿವರಾಮಗೌಡ (Shivaramagouda) ಆಯ್ಕೆ ಆಗುವ ಮೂಲಕ ಕ್ಷೇತ್ರವನ್ನು ‘ಕೈ’ಯಿಂದ ಬಿಡಿಸಿಕೊಂಡು ಕಮಲ ಅರಳಿಸಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮುಂದಿನ 2014ರ ಚುನಾವಣೆ ವೇಳೆಗೆ ಸಂಗಣ್ಣ ಕರಡಿ (Sanganna Karadi) ಅಭ್ಯರ್ಥಿಯಾಗಿ ಸತತ ಎರಡು ಬಾರಿ ಆಯ್ಕೆ ಆಗಿದ್ದಾರೆ. ಕ್ಷೇತ್ರವನ್ನು ಬಿಜೆಪಿ ಭದ್ರಕೋಟೆಯಾಗಿಸಿಕೊಳ್ಳುತ್ತಾ ಅಥವಾ ಕಾಂಗ್ರೆಸ್ ಮತ್ತೆ ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತಾ ಎಂಬುದು ಕುತೂಹಲ ಮೂಡಿಸಿದೆ. ಕ್ಷೇತ್ರದಲ್ಲಿ ಎಂದಿಗೂ ಕಾಂಗ್ರೆಸ್-ಬಿಜೆಪಿ (Congress-BJP) ನಡುವೆ ನೇರ ಪೈಪೋಟಿ ಏರ್ಪಡುತ್ತದೆ. ಈ ಬಾರಿ ಜೆಡಿಎಸ್- ಬಿಜೆಪಿ ಮೈತ್ರಿ ಮತ್ತಷ್ಟು ನಿರೀಕ್ಷೆ ಹುಟ್ಟಿಸಿದೆ.
Advertisement
ಕ್ಷೇತ್ರ ಪರಿಚಯ
1952ರ ಚುನಾವಣೆಯಿಂದಲೂ ಕೊಪ್ಪಳ ಲೋಕಸಭೆ (Koppala Lok Sabha) ಕ್ಷೇತ್ರ ಅಸ್ಥಿತ್ವದಲ್ಲಿದೆ. ಅಖಂಡ ರಾಯಚೂರು (Raichuru) ಜಿಲ್ಲೆಯ ಭಾಗ ಆಗಿದ್ದಾಗಲೂ ಕೊಪ್ಪಳ ಲೋಕಸಭೆ ಕ್ಷೇತ್ರವಾಗಿರೋದು ವಿಶೇಷ. ಮೊದಲ ಚುನಾವಣೆಯಲ್ಲಿ ಇಡೀ ದೇಶದಲ್ಲಿ ಕಾಂಗ್ರೆಸ್ ಅಲೆ ಇದ್ದಾಗಲೂ ಕೊಪ್ಪಳ ಲೋಕಸಭೆ ಕ್ಷೇತ್ರದಿಂದ ಶಿವಮೂರ್ತಿ ಸ್ವಾಮಿ ಅಳವಂಡಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು ಸಂಸತ್ ಪ್ರವೇಶ ಮಾಡಿದ್ದರು. ಆ ಮೂಲಕ ಆಗಿನ ಪ್ರಧಾನಿ ಜವಾಹರ್ ಲಾಲ್ ನೆಹರೂ (Jawaharlal Nehru) ಅವರು ನಿಬ್ಬೆರಗಾಗುವಂತೆ ಮಾಡಿದ್ದರು. ಆಗ ಪಕ್ಷಕ್ಕೆ ಸೇರಿಸಿಕೊಂಡಿದ್ದ ನೆಹರೂ ಕೊಪ್ಪಳ ಸಂಸದರನ್ನು ಕೇಂದ್ರ ಮಂತ್ರಿ ಮಾಡಿದ್ದು ಇತಿಹಾಸ. ಅದಾದ ನಂತರ 2009ರ ವರೆಗೆ ಕಾಂಗ್ರೆಸ್ ಅಭ್ಯರ್ಥಿಗಳೇ ಹೆಚ್ಚು ಬಾರಿ ಆಯ್ಕೆ ಆಗಿದ್ದಾರೆ. ನಂತರ 2014ರ ಚುನಾವಣೆ ವೇಳೆಗೆ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭೆ ಕ್ಷೇತ್ರಗಳ ಪೈಕಿ ಕೇವಲ ಒಂದು ಕಡೆ ಮಾತ್ರ ಬಿಜೆಪಿ ಶಾಸಕರಿದ್ದರು. ಈ ಬಾರಿಯೂ ಅದೇ ಸ್ಥಿತಿ ಇರೋದು ವಿಶೇಷ.
Advertisement
Advertisement
ವಿಧಾನಸಭಾ ಕ್ಷೇತ್ರಗಳೆಷ್ಟು?
ಕೊಪ್ಪಳ ಜಿಲ್ಲೆಯ 5 ಅಂದರೆ, ಕುಷ್ಟಗಿ, ಕನಕಗಿರಿ, ಗಂಗಾವತಿ, ಯಲಬುರ್ಗಾ ಮತ್ತು ಕೊಪ್ಪಳ. ರಾಯಚೂರು ಜಿಲ್ಲೆಯ ಸಿಂಧನೂರು ಮತ್ತು ಮಸ್ಕಿ. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಸೇರಿ ಒಟ್ಟು 8 ವಿಧಾನಸಭೆ ಕ್ಷೇತ್ರಗಳನ್ನು ಕೊಪ್ಪಳ ಲೋಕಸಭೆ ಕ್ಷೇತ್ರ ಒಳಗೊಂಡಿದೆ. ಇದನ್ನೂ ಓದಿ: ಕಲ್ಲೆಸೆತಕ್ಕೆ ಸುದ್ದಿಯಾಗಿದ್ದ ಕಾಶ್ಮೀರದಲ್ಲಿ ಫಸ್ಟ್ ಟೈಂ ಫಾರ್ಮುಲಾ 4 ರೇಸ್ – ಮೋದಿ ಮೆಚ್ಚುಗೆ
Advertisement
ಕಳೆದ ಚುನಾವಣೆಯಲ್ಲಿ ಏನಾಗಿತ್ತು?
ಕಳೆದ 2019 ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ ವಿರುದ್ಧ ಹಾಲಿ ಸಂಸದ ಸಂಗಣ್ಣ ಕರಡಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸತತ ಎರಡನೇ ಬಾರಿಗೆ ಆಯ್ಕೆ ಆಗಿದ್ದರು. ಆಗ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಸ್ಥಿತ್ವದಲ್ಲಿ ಇದ್ದರೂ ಸಂಗಣ್ಣ ಕರಡಿ ಸುಮಾರು 38,397 ಮತಗಳ ಅಂತರದಿಂದ ಆಯ್ಕೆ ಆಗಿದ್ದರು. ಬಿಜೆಪಿ ಹೈಕಮಾಂಡ್ ಅಳೆದು ತೂಗಿ ಸಂಗಣ್ಣ ಕರಡಿ ಅವರಿಗೆ ಟಿಕೆಟ್ ನೀಡಿತ್ತು. ಅದರಂತೆ ಕಾಂಗ್ರೆಸ್‌ನಿಂದ 2014ರಲ್ಲಿ ಪರಾಭವಗೊಂಡಿದ್ದ ಬಸವರಾಜ ಹಿಟ್ನಾಳ ಪುತ್ರ ರಾಜಶೇಖರ ಹಿಟ್ನಾಳರನ್ನು ಅಭ್ಯರ್ಥಿಯಾಗಿ ಘೋಷಿಸಲಾಗಿತ್ತು.
ಮತದಾರರ ವಿವರ
ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 18,51,700 ಮತದಾರರಿದ್ದಾರೆ. ಅವರ ಪೈಕಿ ಪುರುಷರು 9,12,818 ಹಾಗೂ ಮಹಿಳಾ ಮತದಾರರು 9,38,750 ಮತದಾರರು ಇದ್ದಾರೆ.
ಸಂಗಣ್ಣ ಕರಡಿಗೆ ಟಿಕೆಟ್ ಮಿಸ್
ಹ್ಯಾಟ್ರಿಕ್ ಗೆಲುವಿನ ಉತ್ಸಾಹದಲ್ಲಿದ್ದ ಹಾಲಿ ಸಂಸದ ಸಂಗಣ್ಣ ಕರಡಿಗೆ ಬಿಜೆಪಿ ಹೈಕಮಾಂಡ್ ನಿರಾಸೆ ಮೂಡಿಸಿದೆ. ಕ್ಷೇತ್ರದಲ್ಲಿ ಕಳೆದ ಎರಡು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಸಂಗಣ್ಣ ಕರಡಿ ಟಿಕೆಟ್ ಕೊಟ್ಟಿಲ್ಲ. ಬದಲಿಗೆ ಮಾಜಿ ಶಾಸಕ ಕೆ.ಶರವಣ್ಣಪ್ಪ ಅವರ ಪುತ್ರ ಹಾಗೂ ವೈದ್ಯ ಡಾ.ಕೆ.ಬಸವರಾಜು ಅವರಿಗೆ ಟಿಕೆಟ್ ನೀಡಿದೆ. ಹೈಕಮಾಂಡ್ ನಿಲುವಿಗೆ ಸಂಗಣ್ಣ ಕರಡಿ ಅಸಮಾಧಾನ ಹೊರಹಾಕಿದ್ದಾರೆ. ಟಿಕೆಟ್ ಕೈತಪ್ಪಿದಾಗ ಸೌಜನ್ಯಕ್ಕಾದರೂ ರಾಜ್ಯ ನಾಯಕರು ನನಗೆ ಫೋನ್ ಕರೆ ಮಾಡಿ ಮಾತನಾಡಲಿಲ್ಲ ಎಂದು ನೋವು ತೋಡಿಕೊಂಡಿದ್ದಾರೆ. ಇಂತಹ ಸನ್ನಿವೇಶದಲ್ಲಿ ಹಾಲಿ ಸಂಸದರ ಮುಂದಿನ ನಡೆ ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಬೆಂಗಳೂರಿನಿಂದ ಮೈಸೂರಿಗೆ – ಕಾಂಗ್ರೆಸ್‌ನಿಂದ ಡಿವಿಎಸ್ ಸ್ಪರ್ಧೆ?
‘ಕೈ’ ಅಭ್ಯರ್ಥಿ ಯಾರು?
ಕಳೆದ ಬಾರಿ ಪರಾಭವಗೊಂಡ ರಾಜಶೇಖರ ಹಿಟ್ನಾಳ ಕೂಡ, ಅತ್ಯಂತ ಕಡಿಮೆ ಮತಗಳ ಅಂತರದಲ್ಲಿ ಸೋಲು ಕಂಡಿರುವ ನನಗೆ ಮತ್ತೆ ಕಾಂಗ್ರೆಸ್ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಆದರೆ ಜಾತಿ ಲೆಕ್ಕಾಚಾರದಲ್ಲಿ ಕುರುಬ ಕಾಂಗ್ರೆಸ್ ಗೆಲ್ಲಬೇಕು ಎಂದಾದರೆ ನಮಗೆ ಟಿಕೆಟ್ ನೀಡಬೇಕು ಎಂದು ಕುಷ್ಟಗಿ ಮಾಜಿ ಶಾಸಕ ಅಮರೇಗೌಡ ಭಯ್ಯಾಪೂರ ಮತ್ತು ಬಸನಗೌಡ ಬಾದರ್ಲಿ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ.
ಬಿಜೆಪಿ ಪ್ಲಸ್: ಪ್ರಬಲ ಲಿಂಗಾಯತ ಸಮುದಾಯ ಬಿಜೆಪಿ ಬೆನ್ನಿಗೆ ನಿಂತಿರುವುದು, ಪ್ರತಿ ಭಾರಿ ಜಾತಿ ಆಧಾರದ ಮೇಲೆ ನಡೆಯುವ ಚುನಾವಣೆ, ಫಾರ್ವರ್ಡ್, ಬ್ಯಾಕ್‌ವರ್ಡ್ ಎನ್ನುವ ಟ್ರಂಪ್ ಕಾರ್ಡ್, ಪ್ರಧಾನಿ ಮೋದಿ, ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ರಾಜಾಧ್ಯಕ್ಷ ವಿಜಯೇಂದ್ರ ವರ್ಚಸ್ಸು, ಹಾಲಿ ಬಿಜೆಪಿ ಸಂಸದರು ಕೈಗೊಂಡ ರೈಲ್ವೆ, ರಸ್ತೆ ಹಾಗೂ ಇತರ ಅಭಿವೃದ್ಧಿ ಯೋಜನೆ, ಬೃಹತ್ ಕಾರ್ಯಕರ್ತರ ಪಡೆ, ಅಂಜನಾದ್ರಿ ಮಂತ್ರ ಹಾಗೂ ಹೊಸ ಹೊಸ ರೈಲ್ವೆ ಯೋಜನೆಗಳನ್ನು ಅನುಷ್ಠಾನ ಮಾಡಿದ್ದು.
ಬಿಜೆಪಿ ಮೈನಸ್: ಕಳೆದ ಬಾರಿಯ ಕಾಂಗ್ರೆಸ್ ಅಭ್ಯರ್ಥಿ ಸೋಲಿನ ಮೇಲೆ ಇರುವ ಅನುಕಂಪ, ಕೊಪ್ಪಳ ಲೋಕಸಭಾ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಏಕೈಕ ಬಿಜೆಪಿ ಶಾಸಕ ಇರುವುದು, ರಾಜ್ಯ ಸರ್ಕಾದ ಗ್ಯಾರಂಟಿ ಯೋಜನೆಗಳಿಂದ ಹಿನ್ನಡೆ ಸಾಧ್ಯತೆ.
ಕಾಂಗ್ರೆಸ್ ಪ್ಲಸ್: ಕೊಪ್ಪಳ ಲೋಕಸಭಾ ವ್ಯಾಪ್ತಿಯಲ್ಲಿ 8 ಕ್ಷೇತ್ರಗಳ ಪೈಕಿ 6 ಜನ ಕಾಂಗ್ರೆಸ್ ಶಾಸಕರು ಇರೋದು, ಪ್ರಬಲ ಕುರುಬ ಸಮುದಾಯ ಅತಿಹೆಚ್ಚು ಇರೋ ಕ್ಷೇತ್ರ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು, ಸಿಎಂ ಸಿದ್ದರಾಮಯ್ಯ ನೆಚ್ಚಿನ ಕ್ಷೇತ್ರವಾಗಿರೋ ಕೊಪ್ಪಳ ಲೋಕಸಭಾ ಕ್ಷೇತ್ರ, ಈ ಹಿಂದೆ 1991ರ ಲೋಕಸಭಾ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದಲ್ಲಿ ಜನತಾದಳದಿಂದ ಸ್ಪರ್ಧಿಸಿದ್ದ ಸಿಎಂ ಸಿದ್ದರಾಮಯ್ಯನವರು ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಕೇವಲ 11,197 ಮತಗಳಿಂದ ಸೋತಿದ್ದರು. ಈ ಕಾರಣಕ್ಕಾಗಿ ಸಿಎಂ ಅವರಿಗೆ ಪ್ರತಿಷ್ಠೆಯ ಕ್ಷೇತ್ರ ಕೊಪ್ಪಳ.
ಕಾಂಗ್ರೆಸ್ ಮೈನಸ್: ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚಿದ ಪ್ರಭಾವಿ ಆಕಾಂಕ್ಷಿಗಳ ಸಂಖ್ಯೆ, ಸಿಎಂ ಸಿದ್ದರಾಮಯ್ಯನವರು ತಮ್ಮದೇ ಜಾತಿಯವರಿಗೆ ಕಳೆದ ಎರಡು ಅವಧಿಯಲ್ಲಿ ಟಿಕೆಟ್ ನೀಡಿರುವುದು, ಕಳೆದ ಎರಡು ಅವಧಿಯಲ್ಲಿ ಕುರುಬ ಸಮುದಾಯದವರಿಗೆ ಟಿಕೆಟ್ ನೀಡಿದ್ರೂ ಸೋಲು ಅನುಭವಿಸಿರುವುದು, ಲಿಂಗಾಯತ-ಕುರುಬ ಸಮುದಾಯದ ಚುನಾವಣೆ ಎನ್ನುವ ಹಣೆಪಟ್ಟಿ, ಹಿಟ್ನಾಳ ಕುಟುಂಬದ ಮೇಲೆ ಅಲ್ಪಸಂಖ್ಯಾತ ಸಮುದಾಯ ಹಿರಿಯ ರಾಜಕಾರಣಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಮುನಿಸು, ವಿಧಾನಸಭಾ ಚುನಾವಣೆಯಲ್ಲಿ ಇರೋ ಒಗ್ಗಟ್ಟು ಲೋಕಸಭಾ ಚುನಾವಣೆಯಲ್ಲಿ ಇಲ್ಲದಿರುವುದು. ಇದನ್ನೂ ಓದಿ: Davanagere Lok Sabha 2024: ಬೆಣ್ಣೆ ನಗರಿನ ಕುಟುಂಬದ ಭದ್ರಕೋಟೆ ಮಾಡ್ತಾರಾ ಇಲ್ಲ ‘ಕೈ’ ಹಿಡೀತಾರಾ ಜನ?
ರಾಮಮಂದಿರ ಟ್ರಂಪ್ ಕಾರ್ಡ್ ವರ್ಕ್ ಆಗುತ್ತಾ?
ಶ್ರೀರಾಮನ ಪರಮಭಕ್ತ ಹನುಮ. ಆಂಜನೇಯ ಜನಿಸಿದ ನಾಡು ಅಂಜನಾದ್ರಿ. ಉತ್ತರ ಪ್ರದೇಶದಲ್ಲಿ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ನಡೆಯುತ್ತಿದ್ದರೆ ಇತ್ತ ಕೊಪ್ಪಳದಲ್ಲಿ ಸಂಭ್ರಮ ಮನೆ ಮಾಡಿತ್ತು. ಶ್ರೀರಾಮ ನಾಮ ಜಪಿಸುತ್ತಿದ್ದ ಹನುಮ ಜನಿಸಿದ ನಾಡು ಕೊಪ್ಪಳ. ಹೀಗಾಗಿ ಶ್ರೀರಾಮ-ಹನುಮರಂತೆಯೇ ರಾಮಮಂದಿರಕ್ಕೂ ಕೊಪ್ಪಳ ಜನತೆಗೂ ಅವಿನಾಭಾವ ಸಂಬಂಧ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ರಾಮಮಂದಿರ ಹಾಗೂ ಹಿಂದುತ್ವವನ್ನು ಟ್ರಂಪ್ ಕಾರ್ಡ್ ಆಗಿ ಬಳಿಸಿಕೊಳ್ಳಲಿದೆ.
ಅಂಜನಾದ್ರಿಗೆ ‘ಕೈ’ ಬಜೆಟ್‌ನಲ್ಲಿ ಬಂಪರ್
ಲೋಕಸಭಾ ಚುನಾವಣಾ ದೃಷ್ಟಿಯಿಂದ ಕೊಪ್ಪಳ ಜಿಲ್ಲೆಗಾಗಿ ಕಾಂಗ್ರೆಸ್ ಕೂಡ ಹಿಂದುತ್ವ ಟ್ರಂಪ್ ಕಾರ್ಡ್ ಬಳಸಿದೆ. ಹನುಮನ ಜನ್ಮಸ್ಥಳ ಎನ್ನಲಾದ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ 100 ಕೋಟಿ ರೂ. ವಿನಿಯೋಗಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಈಚೆಗೆ ಮಂಡಿಸಿದ ಬಜೆಟ್‌ನಲ್ಲಿ ಘೋಷಿಸಿದ್ದರು.
ಜಾತಿವಾರು ಲೆಕ್ಕಾಚಾರ
ಲಿಂಗಾಯತರು – 3,56,070
ಎಸ್‌ಸಿ (ಎಡ) – 1,76,500
ಎಸ್‌ಸಿ (ಬಲ) – 1,30,100
ಕುರುಬ – 2,56,444
ಎಸ್‌ಟಿ/ವಾಲ್ಮೀಕಿ – 2,10,831
ಮುಸ್ಲಿಂ – 2,03,726
ಉಪ್ಪಾರ – 63,194
ಬ್ರಾಹ್ಮಣ – 40,591
ಗಂಗಾಮತಸ್ಥ – 27,526
ರೆಡ್ಡಿ – 27,995
ನೇಕಾರ – 24,776
ಕಮ್ಮಾ – 20,256
ವೈಶ್ಯರು – 20,256
ಇತರರು – 1,77,409