ಕೊಪ್ಪಳ: ಸಾಮಾನ್ಯವಾಗಿ ಮಲೆನಾಡು ಭಾಗದಲ್ಲಿ ಜಲಪಾತಗಳ ಸಂಖ್ಯೆ ಹೆಚ್ಚು. ಹೀಗಾಗಿ ಜಲಪಾತಗಳನ್ನು ನೋಡಬೇಕೆಂದರೆ ಮಲೆನಾಡಿಗೆ ಹೋಗಬೇಕು. ಆದರೆ ಬಿಸಿಲನಾಡಲ್ಲಿ ಜಲಪಾತ ನೋಡಲು ಸಿಗುತ್ತೆ ಅಂದರೆ ಅಚ್ಚರಿಯಾಗುತ್ತೆ. ಆದರೂ ಇದು ಸತ್ಯ, ಕಲ್ಯಾಣ ಕರ್ನಾಟಕದಲ್ಲಿ ಇರುವ ಏಕೈಕ ಜಲಪಾತ ಕಪಿಲತೀರ್ಥದ ಕಲರವಕ್ಕೆ ಪ್ರವಾಸಿಗರು ಫಿದಾ ಆಗಿದ್ದಾರೆ.
ಹೌದು. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಬ್ಬರಗಿ ಗ್ರಾಮದ ಬೆಟ್ಟದ ಮೇಲೆ ಕಪೀಲತೀರ್ಥ ಜಲಪಾತ ಹರಿಯುತ್ತದೆ. ಇಂತಹದ್ದೊಂದು ಅಪರೂಪದ ಜಲಪಾತವನ್ನ ನೋಡಿದವರು ಅರೇ ಇದೇನಪ್ಪ ಬರದ ನಾಡಲ್ಲಿ ಜಲಪಾತ ಎಂದು ಅಚ್ಚರಿ ಪಡುತ್ತಾರೆ. ಸುತ್ತಲೂ ಹಚ್ಚ ಹಸುರಿನ ವನರಾಶಿ, ಮೈಗೆ ಸೋಕುವ ತಂಗಾಳಿ. ಅದರ ಮಧ್ಯೆ ಹಾಲ್ನೊರೆಯಂತೆ ಧುಮ್ಮಿಕ್ಕುವ ಜಲಧಾರೆಯ ವೈಭವ ನೋಡುತ್ತಿದ್ದರೆ ಮನಸ್ಸಿಗೆ ಆನಂದ ಸಿಗುತ್ತೆ.
Advertisement
Advertisement
ಕಪಿಲತೀರ್ಥ ಜಲಪಾತದಲ್ಲಿ ಕೇವಲ 20 ಅಡಿ ಎತ್ತರದಿಂದ ರಭಸವಾಗಿ ನೀರು ಧುಮ್ಮಿಕ್ಕುತ್ತದೆ. ಈ ಜಲಪಾತ ತನ್ನ ಅಂದ-ಚೆಂದದಿಂದಲೇ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ. ಬಿಸಿಲ ನಾಡಲ್ಲಿ ಇರುವ ಈ ಸುಂದರ ಜಲಪಾತಕ್ಕೆ ಪ್ರವಾಸಿಗರು ಭೇಟಿ ಕೊಟ್ಟು, ನಿಸರ್ಗ ಸೌಂದರ್ಯವನ್ನು ಸವಿದು ಸಮಯ ಕಳೆದು ಹೋಗುತ್ತಾರೆ.
Advertisement
Advertisement
ಈ ಸ್ಥಳಕ್ಕೆ ಒಂದು ಇತಿಹಾಸವಿದೆ. ಮಹಾಭಾರತ ಕಾಲದಲ್ಲಿ ಕಪಿಲಮುನಿಗಳು ಈ ಸ್ಥಳದಲ್ಲಿ ತಪಸ್ಸು ಮಾಡಿದ್ದರಿಂದ ಇಲ್ಲಿ ಜಲಪಾತ ಸೃಷ್ಠಿಯಾಯಿತೆಂಬ ಐತಿಹ್ಯ ಇದೆ. ಕೇವಲ ಮಳೆಗಾದಲ್ಲಿ ಸೃಷ್ಠಿಯಾಗೋ ಈ ಫಾಲ್ಸ್ ನೋಡಲು ಕೊಪ್ಪಳ, ಗದಗ, ಬಾಗಲಕೋಟೆ, ವಿಜಯಪುರ ಹಾಗೂ ಬಳ್ಳಾರಿ ಜಿಲ್ಲೆಗಳ ಪ್ರವಾಸಿಗರ ದಂಡೇ ಹರಿದು ಬರುತ್ತದೆ. ಮಕ್ಕಳು, ದೊಡ್ಡವರು ಎನ್ನುವ ಬೇಧಬಾವ ಇಲ್ಲದೆ ಎಲ್ಲರೂ ನೀರಿನಲ್ಲಿ ಆಟವಾಡಿ ಸಖತ್ ಎಂಜಾಯ್ ಮಾಡುತ್ತಾರೆ.
ಆದರೆ ಈ ಅಪರೂಪದ ಸುಂದರ ಜಲಪಾತಕ್ಕೆ ಪ್ರವಾಸಿಗರು ಹೋಗಲು ಸರಿಯಾದ ರಸ್ತೆ ಸಂಪರ್ಕ ಇಲ್ಲ. ಹೀಗಾಗಿ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ಜಲಪಾತಕ್ಕೆ ತೆರಳಲು ಉತ್ತಮ ರಸ್ತೆ ಹಾಗೂ ಮೂಲಭೂತ ಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.