– ಯುವ ಜನಾಂಗಕ್ಕೆ ಸ್ಥಳ ಪರಿಚಯದ ಜೊತೆಗೆ ಸ್ವಚ್ಛತೆ
– ವಿದ್ಯಾರ್ಥಿಗಳೂ ಸಾಥ್
ಕೊಪ್ಪಳ: ಅವರೆಲ್ಲ ಸರ್ಕಾರಿ ನೌಕರರು, ನಿತ್ಯ ಕೆಲಸ ಮುಗಿಸಿ ಮನೆಗೆ ಹೋದರೆ ಸಾಕು ಅಂದುಕೊಳ್ಳುವವರು. ಆದರೆ ಇಂದು ಆ ಸರ್ಕಾರಿ ನೌಕರರೆಲ್ಲ ಒಂದು ಐತಿಹಾಸಿಕ ಸ್ಥಳದ ಉಳಿವಿಗೆ ಮುಂದಾಗಿದ್ದಾರೆ.
ಹೌದು. ಕೊಪ್ಪಳ ಜಿಲ್ಲೆಯ ಐತಿಹಾಸಿಕ ಕುಮಾರರಾಮನ ಕುಮ್ಮಟ ದುರ್ಗ ಉಳಿಸಲು ಸರ್ಕಾರಿ ನೌಕರರು ಪಣ ತೊಟ್ಟಿದ್ದಾರೆ. ಇವರಿಗೆ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೂಡ ಸಾಥ್ ನೀಡಿದ್ದಾರೆ.
Advertisement
Advertisement
ಕೊಪ್ಪಳ ತಾಲೂಕಿನ ಜಬ್ಬಲಗುಡ್ಡ ಸಮೀಪ ಇರೋ ಕುಮ್ಮಟ ದುರ್ಗವನ್ನ ಸ್ವಚ್ಛಗೊಳಿಸಿದ್ದಾರೆ. ಗಂಗಾವತಿಯ ಸರ್ಕಾರಿ ಕೆಲಸ ಮಾಡುವ ಕೆಲವರು ‘ಚಾರಣ’ ಎಂಬ ಹೆಸರಲ್ಲಿ ಗುಂಪು ಕಟ್ಟಿಕೊಂಡು ಐತಿಹಾಸಿಕ ಸ್ಥಳಗಳ ಉಳಿವಿಗೆ ಮುಂದಾಗಿದ್ದಾರೆ. ವಿದ್ಯಾರ್ಥಿಗಳೊಂದಿಗೆ ಸರ್ಕಾರಿ ಅಧಿಕಾರಿಗಳು ಸ್ವಚ್ಛತೆ ಕಾರ್ಯದಲ್ಲಿ ತೊಡಗಿದ್ದಾರೆ. ವಿದ್ಯಾರ್ಥಿಗಳು ಕೂಡ ದೇವಸ್ಥಾನದ ಸುತ್ತಲೂ ಬೆಳೆದಿದ್ದ ಕಸವನ್ನು ಕ್ಲೀನ್ ಮಾಡಿದ್ದಾರೆ.
Advertisement
ಗಂಗಾವತಿಯ ಚಾರಣ ಬಳಗವು ಕಳೆದ ನಾಲ್ಕು ತಿಂಗಳಿಂದ ಐತಿಹಾಸಿಕ ಪರಂಪರೆ ಹೊಂದಿದ ಸ್ಥಳಗಳಿಗೆ ಭೇಟಿ ನೀಡಿದೆ. ಈ ಚಾರಣ ಬಳಗವು ಯುವ ಜನಾಂಗಕ್ಕೆ ಐತಿಹಾಸಿಕ ಸ್ಥಳಗಳನ್ನು ಪರಿಚಯಿಸುವ ಕಾರ್ಯದ ಜೊತೆಗೆ ಸ್ವಚ್ಛತೆಗೆ ಮುಂದಾಗಿದೆ. ಈ ತಂಡ ಪ್ರತಿ ತಿಂಗಳ 2ನೇ ಭಾನುವಾರ ಚಾರಣ ಕಾರ್ಯಾಗಾರವನ್ನು ನಡೆಸುತ್ತದೆ. ಚಾರಣ ಹೋಗುವ ಸ್ಥಳ ಸೇರಿದಂತೆ ಇತರೆ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುತ್ತಿದೆ.
Advertisement
ಫೇಸ್‍ಬುಕ್, ವಾಟ್ಸಾಪ್‍ನಲ್ಲಿ ಐತಿಹಾಸಿಕ ಸ್ಥಳಗಳ ಸದ್ಯದ ಸ್ಥಿತಿಯನ್ನು ಸಾರ್ವಜನಿಕರಿಗೆ ತಿಳಿಸುತ್ತಿದೆ. ಈಗಾಗಲೇ ಈ ಚಾರಣ ಬಳಗವು ಹಿರೇಬೆಣಕಲ್‍ನ ಮೋರೇರ ಸ್ಥಳ, ಅಂಜನಾದ್ರಿ ಬೆಟ್ಟ, ಗವಿ ಸ್ಥಳಗಳಿಗೆ ಭೇಟಿ ನೀಡಿ ಐತಿಹಾಸಿಕ ಸ್ಮಾರಕಗಳ ಮೇಲೆ ಗಿಡ ಹಾಗೂ ಗಂಟಿ ಬೆಳೆದಿದ್ದನ್ನು ಸಂಪೂರ್ಣ ಸ್ವಚ್ಚಗೊಳಿಸಿದೆ. ಈ ಮೂಲಕ ಐತಿಹಾಸಿಕ ಸ್ಥಳಗಳಿಗೆ ಜನರು ಬರುವ ಹಾಗೆ ಮಾಡಿದ್ದಾರೆ.
ಫೇಸ್‍ಬುಕ್‍ನಲ್ಲಿ ಚಾರಣಕ್ಕೆ ಆಗಮಿಸುವವರಿಗೆ ದಿನಾಂಕ, ಸಮಯವನ್ನು ಶೇರ್ ಮಾಡುತ್ತಾರೆ. ಎಲ್ಲರೂ ಬೆಳಗ್ಗೆ 6 ಗಂಟೆಗೆ ಚಾರಣಕ್ಕೆ ತೆರಳುತ್ತಾರೆ. ಸ್ಮಾರಕಗಳು ಹಾಳಾಗುತ್ತಿವೆ. ಬನ್ನಿ ಕೈ ಜೋಡಿಸಿ, ಕುಮ್ಮಟ ದುರ್ಗಕ್ಕೆ ಕೊಡಲಿ, ಕುಡುಗೋಲು ಇದ್ದರೆ ತೆಗೆದುಕೊಂಡು ಬನ್ನಿ. ಐತಿಹಾಸಿಕ ಸ್ಥಳದ ದೇವಸ್ಥಾನದ ಮೇಲೆ ಬೆಳೆ ಗಿಡ, ಗಂಟಿಗಳನ್ನು ತೆಗೆದು ಹಾಕಬೇಕಾಗಿದೆ. ಅಲ್ಲದೆ ಸ್ವಚ್ಛತೆ ಮಾಡುವುದು ಅವಶ್ಯವಿದೆ ಎಂಬ ಸಂದೇಶವನ್ನು ಕೂಡ ಈ ತಂಡ ರವಾನಿಸುತ್ತದೆ. ಹಾಗೆಯೇ ಚಾರಣಕ್ಕೆ ಆಗಮಿಸುವವರು ಸ್ವಚ್ಛತೆಗೆ ಬೇಕಾದ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಾರೆ.
ಒಟ್ಟಾರೆ ಈ ಚಾರಣ ಬಳಗವು ಯುವ ಜನಾಂಗಕ್ಕೆ ಐತಿಹಾಸಿಕ ಸ್ಥಳಗಳನ್ನು ಪರಿಚಯಿಸುವ ಕಾರ್ಯದ ಜೊತೆಗೆ ಸ್ವಚ್ಛತೆಗೆ ಮುಂದಾಗಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.