ಕೊಪ್ಪಳ: ಹೆತ್ತ ತಂದೆಯೇ ತನ್ನ ಮೂವರು ಮಕ್ಕಳಿಗೆ ವಿಷ ಉಣಿಸಿ ತಾನೂ ಆತ್ಮಹತ್ಯೆಗೆ ಯತ್ನಿಸಿರೋ ಘಟನೆ ಕೊಪ್ಪಳದಲ್ಲಿ ನಡೆದಿದೆ.
ವಿಷಸೇವಿಸಿ ಅಸ್ವಸ್ಥರಾದ ತಂದೆ ಗಂಗಾಧರ್, ಮಕ್ಕಳಾದ ತೇಜು(10), ರೇಣುಕಾ(12), ಅಜಯ್ ಸದ್ಯ ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಗಂಗಾಧರ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಗಂಗಾಧರ್ ಹಾಗೂ ದಾಕ್ಷಾಯಣಿ ದಂಪತಿ ಹದಿನೈದು ವರ್ಷಗಳ ಹಿಂದೆ ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ರು. ಇವರಿಗೆ ಮೂವರು ಮಕ್ಕಳು ಕೂಡಾ ಇದ್ದಾರೆ. ಆದ್ರೆ ಇತ್ತೀಚೆಗೆ ಗಂಗಾಧರ ಮದ್ಯವ್ಯಸನಿಯಾಗಿದ್ದರು. ಹಣಕ್ಕಾಗಿ ಹೆಂಡತಿಯೊಂದಿಗೆ ಜಗಳ ಮಾಡುತ್ತಿದ್ದರು. ಗಂಗಾಧರ್ ವೃತ್ತಿಯಲ್ಲಿ ಖಾಸಗಿ ವಾಹನ ಚಾಲಕರಾಗಿದ್ದು, ಹೆಂಡತಿ ದಾಕ್ಷಾಯಣಿ ಗಿಣಿಗೇರಾ ಗ್ರಾಮದಲ್ಲಿ ಬಟ್ಟೆ ಅಂಗಡಿಯೊಂದನ್ನ ಇಟ್ಟುಕೊಂಡು ಮೂವರು ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದರು.
ಗಂಗಾಧರ ಎರಡು ತಿಂಗಳ ಹಿಂದೆ ಮನೆಯಲ್ಲಿ ಗಲಾಟೆ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದರು. ಆದರೆ ಶನಿವಾರ ಸಂಜೆ ಏಕಾಏಕಿ ಮನೆಗೆ ಬಂದು ತನ್ನ ಮೂವರು ಮಕ್ಕಳನ್ನು ತೋಟದ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಮಕ್ಕಳಿಗೆ ಜ್ಯೂಸ್ ನಲ್ಲಿ ವಿಷ ಹಾಕಿ ಕೊಟ್ಟಿದ್ದಾರೆ. ಬಳಿಕ ತಾನೂ ಕೂಡಾ ವಿಷ ಕುಡಿದಿದ್ದಾರೆ. ನಂತರ ತನ್ನ ಗೆಳೆಯರಿಗೆ ಫೋನ್ ಮಾಡಿ ತಾನು ವಿಷ ಕುಡಿದಿರೋದಾಗಿ ತಿಳಿಸಿದ್ದಾರೆ. ತಕ್ಷಣವೇ ಗೆಳೆಯರು ತೋಟದ ಮನೆಗೆ ಹೋಗಿ ಮೂವರು ಮಕ್ಕಳು ಹಾಗೂ ಗಂಗಾಧರ್‍ರನ್ನ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಇವರ ಆರೋಗ್ಯಕ್ಕೆ ಯಾವುದೇ ತೊಂದರೆಯಿಲ್ಲ ಅಂತ ವೈದ್ಯರು ಹೇಳಿದ್ದಾರೆ.
ಘಟನೆ ಸಂಬಂಧ ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.