ಕೊಪ್ಪಳ: ತಾಲೂಕಿನ ಚಿಲಕಮುಖಿ ಗ್ರಾಮದಲ್ಲಿ ಪ್ರೀತಿಸಿ ಮದುವೆಯಾದ ಜೋಡಿಗೆ ಹಾಗೂ ಅವರ ಕುಟುಂಬಕ್ಕೆ ಕಳೆದ ಎಂಟು ವರ್ಷಗಳಿಂದ ಬಹಿಷ್ಕಾರ ಹಾಕಿರುವುದು ಬೆಳಕಿಗೆ ಬಂದಿದೆ.
ಇದೀಗ ಗ್ರಾಮಕ್ಕೆ ಬಂದರೂ ಸಮಾಜದವರು ಆ ಕುಟುಂಬದವರನ್ನು ಮಾತಾಡಿಸೋ ಹಾಗಿಲ್ಲ. ಅವರ ಮನೆಗೆ ಹೋಗೋ ಹಾಗಿಲ್ಲ. ಆ ಕುಟುಂಬಕ್ಕೆ ಅಘೋಷಿತ ಬಹಿಷ್ಕಾರ ಹಾಕಿದ್ದಾರೆ. ಸಮಾಜದಲ್ಲಿ ಒಂದಾಗಿ ಬಾಳಬೇಕು ಅಂದರೂ ಸಮಾಜ ಅವರನ್ನು ಒಪ್ಪುತ್ತಿಲ್ಲ. ಸಮಾಜ ಹಾಕಿರೋ ಬಹಿಷ್ಕಾರ ಎಂಬ ಬೇಲಿಗೆ ಆ ಕುಟುಂಬದವರು ರೋಸಿ ಹೋಗಿದ್ದು, ನಮಗೆ ನ್ಯಾಯ ಕೊಡಿಸಿ ಎಂದು ಕಣ್ಣೀರು ಹಾಕುತ್ತಿದ್ದಾರೆ. ಅಲ್ಲದೇ ಒಂದು ಕಡೆ ಬಹಿಷ್ಕಾರಕ್ಕೆ ಒಳಗಾದ ದಂಪತಿ.. ಮತ್ತೊಂದು ಕಡೆ ಬಹಿಷ್ಕಾರಕ್ಕೆ ಒಳಗಾದವರ ಮನೆಯಲ್ಲಿ ಊಟ ಮಾಡಿದವರಿಗೂ ಬಹಿಷ್ಕಾರದ ಬಿಸಿ ತಟ್ಟಿದೆ.
ಅವರಿಬ್ಬರು ಕೂಡಿ ಬೆಳೆದವರು ವಯೋಸಹಜವಾಗಿ ಇಬ್ಬರು ಆಕರ್ಷಿತರಾಗಿ ಪ್ರೀತಿಸುತ್ತಿದ್ದರು. ಯುವತಿಗೆ ಮೊದಲೇ ಬಾಲ್ಯವಿವಾಹವಾಗಿತ್ತು. ಮದುವೆಯ ನಂತರ ಆಕೆ ಪ್ರೀತಿಸಿದವನೊಂದಿಗೆ ಹೋಗಿ ಮದುವೆಯಾಗಿದ್ದಳು. ಆಗಿನಿಂದ ಅವರ ಕುಟುಂಬದವರಿಗೆ ಸಮಾಜದ ಹಿರಿಯರು ಬಹಿಷ್ಕಾರ ಹಾಕಿದ್ದಾರೆ.
ಚಿಲ್ಕಮುಖಿಯ ಅಲೆಮಾರಿ ಕುಟುಂಬವಾಗಿರುವ ಪರ್ವತ ಮಲ್ಲಯ್ಯ ಸಮಾಜದ ಹನುಮಂತಪ್ಪ ಹಾಗೂ ಅದೇ ಸಮಾಜದ ಮಂಜುಳಾ 8 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಮಂಜುಳಾಗೆ ಮೊದಲು ಬಾಲ್ಯವಿವಾಹವಾಗಿತ್ತು. ಪ್ರೀತಿಸಿದವನಿಂದ ದೂರವಾಗಲು ಇಷ್ಟವಿಲ್ಲದೆ ಆಕೆ ಹನುಮಂತಪ್ಪನೊಂದಿಗೆ ಮದುವೆ ಯಾಗಿದ್ರು. ಮದುವೆಯಾದ ಬಳಿಕ ಅವರಿಗೆ ಸಮಾಜ ಬಹಿಷ್ಕಾರ ಹಾಕಿತ್ತು. ಎಂಟು ವರ್ಷಗಳ ಕಾಲ ಆ ಜೋಡಿ ಊರು ತೊರೆದು ಯಲಬುರ್ಗಾದಲ್ಲಿ ಜೀವನ ನಡೆಸುತ್ತಿತ್ತು. ಕಳೆದ 4 ತಿಂಗಳ ಹಿಂದೆ ಗ್ರಾಮಕ್ಕೆ ಬಂದು ವಾಸವಾಗಿದ್ದರು. ರಾಜಿಯಾದ ಬಳಿಕವೂ ಸಮಾಜ ಅವರಿಗೆ ಮತ್ತೆ ಬಹಿಷ್ಕಾರ ಹಾಕಿದೆ.
ಇತ್ತೀಚೆಗೆ ಹನುಮಂತಪ್ಪನ ತಂದೆ ಶಿವಾಜಪ್ಪ ಮನೆಯಲ್ಲಿ ಕಾರ್ಯಕ್ರಮ ಇತ್ತು. ಅದರ ನಿಮಿತ್ಯ ಸಮಾಜದ ಕೆಲವರಿಗೆ ಊಟಕ್ಕೆ ಕರೆದಿದ್ರು. ಅವರ ಮನೆಯಲ್ಲಿ ಊಟ ಮಾಡಿದ ಸುಮಾರು 10 ಕ್ಕೂ ಹೆಚ್ಚು ಕುಟುಂಬಗಳಿಗೂ ಬಹಿಷ್ಕಾರ ಹಾಕಲಾಗಿದೆ. ಭೋಜನಕ್ಕೆ ಹೋದವರ ಜೊತೆ ಸಹ ಸಮಾಜದವರು ಮಾತನಾಡುತ್ತಿಲ್ಲ. ಇನ್ನೂ ಶಿವಾಜಪ್ಪ ಮನೆಯಲ್ಲಿ ಕಾರ್ಯಕ್ರಮ ಸಂದರ್ಭದ ಊಟದಲ್ಲಿ ಭಾಗಿಯಾಗಿರುವ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಶಂಕರಪ್ಪ ಸೇರಿ ಸುಮಾರು 16 ಕುಟುಂಬಗಳಿಗೆ ಚಿಲ್ಕಮುಖಿಯ ಪರ್ವತ ಮಲ್ಲಯ್ಯ ಸಮಾಜದವರು ಬಹಿಷ್ಕಾರ ಹಾಕಿದ್ದಾರೆ.
ಅಲೆಮಾರಿ ಕುಟುಂಬಗಳಲ್ಲಿ ಇನ್ನೂ ನ್ಯಾಯ ಪಂಚಾಯಿತಿಗಳಿದ್ದು, ಇಲ್ಲಿ ಮುಖಂಡರ ಹೇಳಿದ್ದನ್ನು ಪಾಲಿಸುತ್ತಿದ್ದಾರೆ. ಇದೇ ರೀತಿ ಸಮಾಜದ ಮುಖಂಡರು ವಿವಾಹಿತಳನ್ನು ಪ್ರೀತಿಸಿ ಮದುವೆಯಾಗಿದ್ದಕ್ಕೆ ಬಹಿಷ್ಕಾರ ಹಾಕಿದ್ದಾರೆ. ಚಿಲ್ಕಮುಖಿ ಗ್ರಾಮದಲ್ಲಿ ಸುಮಾರು 80 ಕುಟುಂಬಗಳಲ್ಲಿ ಈಗ 16 ಕುಟುಂಬಗಳಿಗೆ ಬಹಿಷ್ಕಾರ ಹಾಕಲಾಗಿದೆ.