ಕೊಪ್ಪಳ: ನಾವು ಹುಟ್ಟಿಸಿದ 17 ಮಂದಿಯನ್ನು ಕರೆದುಕೊಂಡು ಹೋಗಿ ನಮ್ಮ ಮಕ್ಕಳು ಎಂದು ಹೇಳುತ್ತಿದ್ದಾರೆ. ನಡತೆಗೆಟ್ಟ ಹುಡುಗಿ ಹೊಸ್ತಿಲು ದಾಟಿದರೆ ಏನೂ ಮಾಡೋಕೆ ಆಗಲ್ಲ ಎಂದು ಕಾಂಗ್ರೆಸ್ ಮುಖಂಡ ಸಿ.ಎಂ ಇಬ್ರಾಹಿ ಅನರ್ಹ ಶಾಸಕರಿಗೆ ಟಾಂಗ್ ನೀಡಿದ್ದಾರೆ.
ಖಾಸಗಿ ಕಾರ್ಯಕ್ರಮದ ನಿಮಿತ್ತ ಇಂದು ಕೊಪ್ಪಳಕ್ಕೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಂತ ಮಕ್ಕಳನ್ನು ಹುಟ್ಟಿಸೋಕೆ ಆಗದವರು ನಮ್ಮ ಮಕ್ಕಳನ್ನ ಕರೆದುಕೊಂಡು ಹೋಗಿ ಸರ್ಕಾರ ರಚನೆ ಮಾಡಿದ್ದಾರೆ. ಹೀಗಾಗಿ ಸ್ವಂತ ಮಕ್ಕಳನ್ನು ಹುಟ್ಟಿಸದವರು ನೀವೆಂಥಾ ಗಂಡಸರು ಎಂದು ಇಬ್ರಾಹಿಂ ಪ್ರಶ್ನಿಸಿದ್ದಾರೆ.
17 ಜನ ನಾವು ಹುಟ್ಟಿಸಿದವರನ್ನು ಕರೆದುಕೊಂಡು ಹೋಗಿ ನಮ್ಮ ಮಕ್ಕಳು ಎನ್ನುತ್ತಿದ್ದಾರೆ. ನಡತೆಗೆಟ್ಟ ಹುಡುಗಿ ಹೊಸ್ತಿಲು ದಾಟಿದರೆ ಏನೂ ಮಾಡೋಕೆ ಆಗಲ್ಲ. ಇವರೆಲ್ಲ ಯಾಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗಬೇಕಿತ್ತು ಎಂದು ಅನರ್ಹ ಶಾಸಕರ ವಿರುದ್ಧ ಇಬ್ರಾಹಿಂ ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯ ಯಾವ ಶಾಸಕರನ್ನೂ ಕಳುಹಿಸಿಲ್ಲ. ಬಾಂಬೇ ಸೇಠ್ ಪತಿವ್ರತೆಯರನ್ನೆಲ್ಲ ಕರೆದುಕೊಂಡು ಹೋಗಿ ಬಿಟ್ಟನು. ಬಳಿಕ ಮೂರು ದಿನ ರೂಮಲ್ಲಿಟ್ಟುಕೊಂಡು ಬಿಟ್ಟಿದ್ದಾನೆ. ಈವಾಗ ಅನರ್ಹ ಶಾಸಕರು ದೇವದಾಸಿಯಾಗಿದ್ದಾರೆ. ಇವರೆಲ್ಲ ತೀನ್ ಕಾ ಮಜಾ ಎಂದು ಲೇವಡಿ ಮಾಡಿದರು.
ಅನರ್ಹ ಶಾಸಕ ಸುಧಾಕರ್ ಅವರಿಗೆ ನೋವು ಆಗಿದೆ ಎಂದು ಹೇಳುತ್ತಾರೆ. ಅವರಗೇನು ಹೆರಿಗೆ ಆಗಿತ್ತಾ ಎಂದು ವ್ಯಂಗ್ಯವಾಡಿದ ಇಬ್ರಾಹಿಂ, ನಾವು ಹಾಳಾಗಿದ್ದೇವೆ ಅಂದುಕೊಂಡು ಸಿದ್ದರಾಮಯ್ಯ ಅವರ ಹೆಸರು ಕೆಡಿಸುತ್ತಿದ್ದಾರೆ ಎಂದು ತಿಳಿಸಿದರು.
ಟಿಪ್ಪು ಜಯಂತಿಯನ್ನ ಯಡಿಯೂರಪ್ಪನವರು ರದ್ದು ಮಾಡಿಲ್ಲ. ಅವರ ಕಡೆಯಿಂದ ಮಾಡಿಸಿದ್ದಾರೆ ಅಷ್ಟೇ. ಟಿಪ್ಪು ಜಯಂತಿಯನ್ನ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಎಲ್ಲರೂ ಆಚರಿಸಿದ್ದಾರೆ. ಆದರೆ ಈಗ ಅವರೇ ರದ್ದು ಮಾಡಿದ್ದಾರೆ. ಬಹುಶಃ ಇದು ಸಂಘ ಪರಿವಾರದ ಕೆಲಸ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದರು.
ಟಿಪ್ಪು ಜಯಂತಿ ರದ್ದಾಗಿದ್ದಕ್ಕೆ ನಮಗೆ ಯಾವುದೇ ಬೇಜಾರಿಲ್ಲ. ಇಸ್ಲಾಂ ಧರ್ಮದಲ್ಲಿ ಪೂಜೆ ಮಾಡುವುದು ಫೋಟೋಗೆ ಹಾರ ಹಾಕುವ ಸಂಪ್ರದಾಯ ಇಲ್ಲ. ಜಯಂತಿ ಆದರೆ ಬಡ ಮಕ್ಕಳಿಗೆ ಸಹಾಯ ಮಾಡುವುದಾಗಿದೆ ಎಂದರು.