ಕೊಪ್ಪಳ: ಉತ್ತರ ಪ್ರದೇಶದಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವರ ಬೆಂಗಾವಲಿನ ವಾಹನಗಳು ಪ್ರತಿಭಟನಾ ನಿರತ ರೈತರ ಮೇಲೆ ಕಾರು ಹಾಯಿಸಿ ರೈತರನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಬಿಜೆಪಿ ಸರ್ಕಾರ 45 ಲಕ್ಷ ರೂ. ಪರಿಹಾರ ಮಾತ್ರ ನೀಡಿದೆ. ಬಿಜೆಪಿ ಮುಖಂಡರಲ್ಲಿ ಯಾರಾದ್ರೂ ಸಾಯಲಿ ಕಾಂಗ್ರೆಸ್ ಪಕ್ಷದಿಂದ ಒಂದು ಕೋಟಿ ರೂ. ಪರಿಹಾರ ಕೊಡುವುದಾಗಿ ಶಾಸಕ ಅಮರೇಗೌಡ ಪಾಟೀಲ್ ಗುಡುಗಿದ್ದಾರೆ.
ಉತ್ತರ ಪ್ರದೇಶದಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಕೇಂದ್ರ ಗೃಹಖಾತೆ ರಾಜ್ಯ ಸಚಿವ ಅಜಯ್ ಕುಮಾರ ಮಿಶ್ರಾ ಪುತ್ರನ ಕಾರು ಹರಿದು 8 ಜನ ರೈತರ ದುರ್ಮರಣ ಖಂಡಿಸಿ ಕೊಪ್ಪಳದ ಕುಷ್ಟಗಿಯ ಬಸವೇಶ್ವರ ವೃತ್ತದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಪಂಜಿನ ಮೆರವಣಿಗೆ ಸಂದರ್ಭದಲ್ಲಿ ಮಾತನಾಡಿದರು. ಇದನ್ನೂ ಓದಿ: ಲಖೀಂಪುರದಲ್ಲಿ ನಾಲ್ವರು ರೈತರನ್ನು ಕೊಂದ ಪ್ರಕರಣ – ಇನ್ನೂ ಅರೆಸ್ಟ್ ಆಗಿಲ್ಲ ಮಂತ್ರಿ ಮಗ
ಬಿಜೆಪಿ ಅತ್ಯಂತ ಕೆಟ್ಟ ಸರ್ಕಾರ ಎಂದು ನಿರೂಪಿಸಿದೆ. ಚಳಿ, ಹಿಮ, ಮಳೆ ಲೆಕ್ಕಿಸದೇ ಹರ್ಯಾಣ, ಪಂಜಾಬ್, ಛತ್ತೀಸಗಢ ರೈತರ ಪ್ರತಿಭಟನೆ ನಡೆಯುತ್ತಿದೆ. ಈ ರೈತರ ಪ್ರತಿಭಟನೆಯಲ್ಲಿ ಕೇಂದ್ರ ಗೃಹಖಾತೆ ರಾಜ್ಯ ಸಚಿವರ ಪುತ್ರನ ಕಾರು ರೈತನ ಮೇಲೆ ಹರಿದು, 8 ಜನ ರೈತರ ಹತ್ಯೆಗೆ ಕಾರಣರಾಗಿದ್ದಾರೆ. ಈ ಸಂಬಂಧ ಆರೋಪಿ ಬಂಧಿಸದೇ 45 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ದೇಶದಲ್ಲಿ ಬಿಜೆಪಿ ತೊಲಗುವರೆಗೂ ಈ ಹೋರಾಟ ನಡೆಯಲಿದೆ ಎಂದರು.
ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಈ ಪ್ರಕರಣದಲ್ಲಿ ಮಂತ್ರಿ ಮಗನನ್ನು ಬಂಧಿಸಿಲ್ಲ. ಅಲ್ಲದೇ ಪ್ರತಿಭಟನಾ ನಿರತರಾದ ಕಾಂಗ್ರೆಸ್ ಪಕ್ಷದ ಪ್ರಿಯಾಂಕಾ ಗಾಂಧಿ ಅವರನ್ನು ಕೂಡಿ ಹಾಕಿದ್ದು, ಪೊಲೀಸರು ಅವರ ಕೈ, ಮೈ ಮುಟ್ಟಿದ್ದಾರೆ. ಪೊಲೀಸರು ಬಿಜೆಪಿ ಚೇಲಾಗಳಂತೆ ವರ್ತಿಸಿದ್ದಾರೆ ಎಂದು ಹರಿಹಾಯ್ದರು. ಇದಕ್ಕೂ ಮುನ್ನ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಮಲ್ಲಯ್ಯ ವೃತ್ತದಿಂದ ಆರಂಭಿಸಿ, ಮಾರುತಿ ವೃತ್ತ ಬಸವೇಶ್ವರ ವೃತ್ತದವರೆಗೂ ಪಂಜಿನ ಮೆರವಣಿಗೆ ನಡೆಸಲಾಯಿತು. ಇದೇ ವೇಳೆ, ಮೃತ ರೈತರಿಗೆ ಒಂದು ನಿಮಿಷದ ಮೌನ ಆಚರಿಸಲಾಯಿತು.