ಕೊಪ್ಪಳ: ಇದು ಸೋಶಿಯಲ್ ಮೀಡಿಯಾ ಕಾಲ. ಪ್ರತಿಭೆ ಇದ್ದವರನ್ನು ಜನ ರಾತ್ರೋರಾತ್ರಿ ಸ್ಟಾರ್ ಮಾಡಿ ಬಿಡ್ತಾರೆ. ಹೀಗೆ ಸೋಶಿಯಲ್ ಮೀಡಿಯಾ ಮೂಲಕ 24 ಗಂಟೆಯಲ್ಲಿ ಲಕ್ಷಂತರ ಜನರ ಮನಸ್ಸು ಗೆದ್ದವರ ಸಾಲಿಗೆ 50 ವರ್ಷದ ಗಡಿ ದಾಟಿದ ಕೊಪ್ಪಳದ ಪ್ರತಿಭೆ ಸೇರಿದ್ದಾರೆ.
ಅಂಬೇಡ್ಕರ್ ನಗರದ ನಿವಾಸಿ ಗಂಗಮ್ಮ, 20 ವರ್ಷದಿಂದಲೂ ಹಾಡುತ್ತಿದ್ದರೂ ಇದೀಗ ಫೇಸ್‍ಬುಕ್‍ನಿಂದಾಗಿ ಎಲ್ಲೆಡೆ ಫೇಮಸ್ ಆಗಿದ್ದಾರೆ. ಇವರು ಹಾಡುತ್ತಿರೋದನ್ನು ಸ್ಟುಡಿಯೋ ಮಾಲೀಕ ಶಿವಪ್ರಸಾದ್ ಲೈವ್ ಮಾಡಿದ್ದು, 24 ಗಂಟೆಯಲ್ಲಿ ಬರೋಬ್ಬರಿ 5 ಲಕ್ಷಕ್ಕೂ ಹೆಚ್ಚು ಜನ ಇವರ ಹಾಡು ಕೇಳಿದ್ದಾರೆ.
ಸುಮಾರು 10 ಸಾವಿರ ಜನ ಇವರ ಹಾಡಿನ ಕ್ಲಿಪ್‍ನ್ನ ಶೇರ್ ಮಾಡಿದ್ದಾರೆ. ಕೇವಲ ಐದನೇ ತರಗತಿ ಓದಿರೋ ಗಂಗಮ್ಮರಿಗೆ ಒಬ್ಬ ಮಗಳಿದ್ದು, ಮದುವೆ ಮಾಡಿ ಕೊಟ್ಟಿದ್ದು, ಇಬ್ಬರು ಗಂಡು ಮಕ್ಕಳಿದ್ದಾರೆ. ಈ ನಡುವೆ ಹಾಡುವುದನ್ನು ಬಿಟ್ಟಿದ್ದ ಗಂಗಮ್ಮ ಇದೀಗ ಮತ್ತೇ ಹಾಡಲು ಶುರು ಮಾಡಿದ್ದಾರೆ.
ನಾನು ಚಿಕ್ಕಮಯಸ್ಸಿನಿಂದಲೂ ಹಾಡನ್ನು ಹಾಡಲು ಶುರು ಮಾಡಿದೆ. ಆದರೆ ಆಗ ಆರ್ಕೆಸ್ಟ್ರಾ ಇರಲಿಲ್ಲ. ನಂತರ ಕೊಪ್ಪಳದಲ್ಲಿ ಆರ್ಕೆಸ್ಟ್ರಾ ಶುರುವಾದಾಗ 20 ವರ್ಷದಿಂದ ಹಾಡಲು ಶುರು ಮಾಡಿದ್ದೇನೆ. ಈಗ ನಾನು ಗುರುತಿಸಿಕೊಳ್ಳುತ್ತಿದ್ದೇನೆ. ವಿಡಿಯೋ ವೈರಲ್ ಆಗಿದ್ದಕ್ಕೆ ನನ್ನ ಕುಟುಂಬದವರು ಸಂತೋಷವಾಗಿದ್ದಾರೆ ಎಂದು ಗಂಗಮ್ಮ ತಿಳಿಸಿದ್ದಾರೆ.
ಗಂಗಮ್ಮ ಅವರ ಹಾಡನ್ನು ಕೇಳಿ ಸಂಗೀತಕ್ಕೆ ವಯಸ್ಸು ಇರಲ್ಲ ಎಂಬುದು ತಿಳಿಯಿತು. ತುಂಬಾ ಚೆನ್ನಾಗಿ ಹಾಡುತ್ತಿದ್ದು ಅವರಿಗೆ 20 ವರ್ಷ ಅನುಭವವಿರುವುದು ಅವರ ಹಾಡು ಕೇಳಿ ತಿಳಿಯುತ್ತದೆ. ಗಂಗಮ್ಮ ಹಾಗೂ ಅವರ ಕುಟುಂಬಕ್ಕೆ ನಾನು ಶುಭಾಶಯ ತಿಳಿಸುತ್ತೇನೆ ಎಂದು ಸಂಗೀತಾ ನಿರ್ದೇಶಕ ಅರ್ಜುನ್ ಜನ್ಯ ತಿಳಿಸಿದ್ದಾರೆ.