ಕೊಪ್ಪಳ: ಯಲಬುರ್ಗಾ ತಾಲೂಕಿನ ಗುನ್ನಾಳ ಸರ್ಕಾರಿ ಪ್ರೌಢ ಶಾಲೆಯು ಹಸಿರನ್ನೇ ಉಸಿರಾಗಿಸಿ ಹೆಸರು ಮಾಡಿದ್ದು, ಇಲ್ಲಿನ ಶಿಕ್ಷಕರು, ವಿದ್ಯಾರ್ಥಿಗಳು ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಗುನ್ನಾಳ ಸರ್ಕಾರಿ ಪ್ರೌಢ ಶಾಲೆ ಆವರಣಕ್ಕೆ ಕಾಲಿಟ್ಟರೆ ಸಾಕು ಕೈ ಬಿಸಿ ಕರೆಯುವ ಪ್ರಕೃತಿ ಮಾತೆ, ಎಲ್ಲಿ ನೋಡಿದರಲ್ಲಿ ಹಚ್ಚ ಹಸಿರಿನ ತೋರಣ ಕಾಣುತ್ತದೆ. ಭವಿಷ್ಯದ ಮಕ್ಕಳಿಗೆ ನೆರಳಿನ ಆಸರೆ ನೀಡುವ ಮರ, ಗಿಡಗಳು ಹಕ್ಕಿ ಪಕ್ಷಿಗಳ ಕಲರವದ ಹಾರಾಟ ನೋಡಲು ಖುಷಿ ಸಿಗುತ್ತದೆ. ಬಿಸಿಲ ನಾಡಿನಲ್ಲೊಂದು ಹಸಿರಿನಿಂದ ಕಂಗೊಳಿಸುವ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ಕಾಣ ಸಿಗುವ ಸುಂದರ ದೃಶ್ಯಾಗಳಿವು.
ಇಷ್ಟೆಲ್ಲಾ ವಾತವರಣವಿರುವ ಶಾಲೆಗೆ ಬರಲು ವಿದ್ಯಾರ್ಥಿಗಳಲ್ಲಿ ಆಸಕ್ತಿ ಹೆಚ್ಚಿದೆ. ಜೊತೆಗೆ ಕಲಿಕೆಯ ಹಂಬಲವೂ ಹೆಚ್ಚಾಗುತ್ತಿದೆ. ಶಾಲೆಯಲ್ಲಿನ ಪರಿಸರ ರಕ್ಷಣೆಗೆ ಮುಖ್ಯಶಿಕ್ಷಕ ವಿ.ಎಂ.ಕಂದಕೂರು ಹಾಗೂ ಸಹಶಿಕ್ಷಕರು ಹೆಚ್ಚಿನ ಮುತುವರ್ಜಿವಹಿಸಿದ್ದಾರೆ. ಉತ್ತಮ ಪರಿಸರವು ಮಕ್ಕಳ ಕಲಿಕಾಸಕ್ತಿಗೆ ಪೂರಕವಾಗಲಿದೆ ಎಂಬ ಮಂತ್ರದೊಂದಿಗೆ ಇಂತಹ ವನ ಮಾಡಲು ಮುಂದಾಗಿರುವುದು ಶ್ಲಾಘನೀಯವಾಗಿದೆ.
ಮಕ್ಕಳ ಕಲಿಕೆ ಉತ್ತಮ: ಈ ಶಾಲೆಯಲ್ಲಿ 202 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. 8 ಜನ ಶಿಕ್ಷಕರಿದ್ದು, ವರ್ಷದಿಂದ ವರ್ಷಕ್ಕೆ ಹಾಜರಾತಿ ಹೆಚ್ಚುತ್ತಿದೆ. ಕಳೆದ 10 ವರ್ಷಗಳಿಂದ ನೂರಕ್ಕೆ ನೂರರಷ್ಟು ಫಲಿತಾಂಶ ಲಭಿಸಿದೆ.
ಮಕ್ಕಳ ಮನಸ್ಸು ಗೆದ್ದ ಶಾಲೆ: ಶಾಲಾ ಆರಂಭದ ಪೂರ್ವದಲ್ಲಿ ಹಾಗೂ ಶಾಲೆ ಬಿಟ್ಟ ನಂತರ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಶ್ರಮದಾನ ಮಾಡುತ್ತಾರೆ. ಅಂದಾಜು 3 ಎಕರೆ ವಿಸ್ತೀರ್ಣ ಹೊಂದಿದೆ. ಕಂಪ್ಯೂಟರ ಕಲಿಕೆಗೂ ಒತ್ತು ನೀಡುತ್ತಿರುವುದು ಎಲ್ಲರ ಮೆಚ್ಚುಗೆ ಗಳಿಸಿದೆ. ವಿದ್ಯಾರ್ಥಿಗಳಿಗೆ ಪ್ರತ್ಯೇಕ ಶೌಚಾಲಯ, ಕುಡಿವ ನೀರು, ಫ್ಯಾನ್ ಸೇರಿದಂತೆ ಹೈಟೆಕ್ ಸೌಲಭ್ಯ ಈ ಶಾಲೆಯಲ್ಲಿ ಇರುವುದು ಮತ್ತೊಂದು ಗರಿಮೆಯಾಗಿದೆ.
ಹಸಿರು ಮಿತ್ರ ಶಾಲೆ ಪ್ರಶಸ್ತಿ: ಈಗಾಗಲೇ ಶಾಲೆ ಹಸಿರು ಮಿತ್ರ ಶಾಲೆ ಪ್ರಶಸ್ತಿ ಪಡೆದ, ಫಲಿತಾಂಶ, ಕ್ರೀಡೆಯಲ್ಲಿಯೂ ಮುಂದೆ ಇದೆ. ನವಿಲು, ಪಾರಿವಾಳಗಳು ಸಹ ಶಾಲೆಯಲ್ಲಿವೆ. ಶಾಲೆಯ ವಾತವರಣ ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಕಾರ್ಯವೈಖರಿ ಶಾಲೆಯ ದಿನನಿತ್ಯದ ಚಟುವಟಿಕೆಗಳು ಹಸಿರು ಕ್ರಾಂತಿಯನ್ನೇ ಮಾಡಿವೆ.
ಕಣ್ಣ ಹಾಯಿಸಿದ್ದಷ್ಟು ಹಚ್ಚ ಹಸಿರು, ಸದ್ದಿಲ್ಲದೇ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಹಸಿರು ಕ್ರಾಂತಿ ಆರಂಭಿಸಿದ್ದಾರೆ. 100 ಕ್ಕೂ ಅಧಿಕ ಬಗೆಯ ಮರಗಳಿವೆ, ಅಶೋಕ, ಗುಲ್ ಮಹರ್, ಸಿಲ್ವರ್, ತೇಗ, ನೇರಳ, ಹೊಂಗೆ, ಹುಲಗಲಿ, ರಬ್ಬ ಸೇರಿದಂತೆ ಹೆಚ್ಚು ಬಗೆಯ ಮರಗಳಿವೆ. ಜೊತೆಗೆ ತರಕಾರಿ ಹೂ, ಹಣ್ಣು ಬೆಳೆಯಲಾಗುತ್ತಿದೆ. ವಿದ್ಯಾರ್ಥಿಗಳು ಬೆಳೆದ ತರಕಾರಿಯಿಂದಲೇ ಬಿಸಿಯೂಟದ ಸಾಂಬಾರು ತಯಾರಿಸಲಾಗುತ್ತಿದೆ. ವಿದ್ಯಾರ್ಥಿಗಳು ಹಾಗೂ ಎಲ್ಲಾ ಶಿಕ್ಷಕರು ಜೊತೆಗೂಡಿ ಪರಿಸರ ಕಾರ್ಯ ಮಾಡುತ್ತಾರೆ.
ಬೋರವೆಲ್ ಅವಶ್ಯಕತೆ: ಮಳೆಯಾದರೇ ಶಾಲೆಯಲ್ಲಿನ ನೀರು ಹೋಗಲು ಬಿಡುವುದಿಲ್ಲ ಅದಕ್ಕಾಗಿ ಗುಂಡಿಯನ್ನು ತೋಡಿದ್ದಾರೆ. ಆ ನೀರು ಅಲ್ಲಿ ಸಂಗ್ರಹವಾಗುತ್ತದೆ. ಅದನ್ನೇ ಸಸಿಗಳಿಗೆ ಹಾಕಲಾಗುತ್ತದೆ. ಶಾಲೆಯಲ್ಲಿರುವ ಬೋರವೆಲ್ ನೀರು ಕಡಿಮೆಯಾಗುತ್ತಿದೆ. ಇನ್ನೊಂದು ಬೋರವೆಲ್ ಅವಶ್ಯಕತೆ ಇದೆ ಎಂದು ಮುಖ್ಯಶಿಕ್ಷಕ ವಿ.ಎಂ.ಕಂದಕೂರು ತಿಳಿಸಿದ್ದಾರೆ.
ಗುನ್ನಾಳ ಶಾಲೆ ಮಾದರಿ: ಇಷ್ಟೆಲ್ಲಾ ವಿಶೇಷತೆಗಳಿಂದ ಕೂಡಿದ ಶಾಲೆಯಲ್ಲಿ ಸಾವಯವ ಗೊಬ್ಬರ ಸ್ವತಃ ತಯಾರು ಮಾಡಿ ಬಳಕೆ ಮಾಡಲಾಗುತ್ತಿದೆ. ಕಾಡು ಬೆಳಸಿ ನಾಡು ಉಳಸಿ ಎಂದು ಕೇವಲ ಬಾಯಿ ಮಾತಿನಲ್ಲೆ ಹೇಳುವರೇ ಹೆಚ್ಚು. ಇಂತಹರ ನಡುವೆ ಗುನ್ನಾಳ ಶಾಲೆಯಲ್ಲಿ ಮಕ್ಕಳ ಭವಿಷ್ಯವನ್ನು ರೂಪಿಸುವುದರ ಜೊತೆಗೆ ಹಸಿರು ಕ್ರಾಂತಿಯನ್ನೇ ಮಾಡಿ ಮಾದರಿಯಾಗಿದೆ.