ಕೊಪ್ಪಳ: ಕಾರಟಗಿ ತಾಲೂಕಿನ ಸೋಮನಾಳ ಬಳಿ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಮತ್ತೆ ರಂಧ್ರ ಕಾಣಿಸಿಕೊಂಡಿದ್ದು, ರೈತರಲ್ಲಿ ಆತಂಕ ಸೃಷ್ಟಿಸಿದೆ.
ತುಂಗಭದ್ರಾ ಡ್ಯಾಂನಿಂದ ಎಡದಂಡೆ ಕಾಲುವೆಗೆ 3,000 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಹರಿಸಲಾಗುತ್ತಿದೆ. ಅಧಿಕಾರಿಗಳು ಕಾಲುವೆ ಪರಿಶೀಲನೆ ಮಾಡದೆ ಪರಿಣಾಮ ಕಳೆದ ತಿಂಗಳಿಂದ ಒಟ್ಟು ಮೂರು ಬಾರಿ ಕಾಲುವೆಯಲ್ಲಿ ರಂಧ್ರ ಕಾಣಿಸಿಕೊಂಡಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ನಾವು ಪರದಾಡುವಂತಾಗಿದೆ ಎಂದು ರೈತರು ಅಸಮಾಧಾನ ಹೊರಹಾಕಿದ್ದಾರೆ.
Advertisement
ಕಾಲುವೆಯಲ್ಲಿ ರಂಧ್ರ ಬಿದ್ದು ನೀರು ಹರಿದರೆ ಆ ವ್ಯಾಪ್ತಿಯ ಜಮೀನಿನ ಬೆಳೆಗಳು ನಾಶವಾಗುತ್ತವೆ. ಅಷ್ಟೇ ಅಲ್ಲದೆ ಕಾಲುವೆಯ ಕೊನೆಯ ಭಾಗದ ಜಮೀನುಗಳಿಗೆ ನೀರು ಪೂರೈಕೆ ಆಗದಿದ್ದಾಗ ಅಲ್ಲಿನ ರೈತರು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಸದ್ಯ ಭತ್ತ ನಾಟಿ ಕಾರ್ಯ ನಡೆಯುತ್ತಿದ್ದು, ನೀರಿನ ಅಗತ್ಯವಿದೆ. ಒಂದು ವೇಳೆ ಸಕಾಲಕ್ಕೆ ಕಾಲುವೆ ನೀರು ಬಾರದಿದ್ದರೆ ರೈತರು ಪರದಾಡುವಂತಾಗುತ್ತದೆ ಎಂದು ಸ್ಥಳೀಯರು ದೂರಿದ್ದಾರೆ.
Advertisement
Advertisement
ಗಂಗಾವತಿ ತಾಲೂಕಿ ಕೆಸ್ಕಿ ಹಂಚಿನಾಳ ಗ್ರಾಮದ ಬಳಿ ಆಗಸ್ಟ್ 9ರಂದು ಇದೇ ರೀತಿ ಕಾಲುವೆಯಲ್ಲಿ ರಂಧ್ರ ಕಾಣಿಸಿತ್ತು. ಇದಾದ ಬಳಿಕ ಆಗಸ್ಟ್ 14ರಂದು ಕೊಪ್ಪಳ ಮುನಿರಾಬಾದ್ ಸಮೀಪದ ರಂಧ್ರ ಬಿದ್ದಿತ್ತು. ಆದರೆ ಈಗ ನಮ್ಮ ಗ್ರಾಮದ ಬಳಿ ಉಂಟಾಗಿದೆ. ಕೇವಲ ಒಂದೇ ತಿಂಗಳಿನಲ್ಲಿ ಮೂರು ಬಾರಿ ಕಾಲುವೆಯಲ್ಲಿ ರಂಧ್ರ ಕಂಡುಬಂದಿರುವುದು ಅಧಿಕಾರಿಗಳ ನಿರ್ಲಕ್ಷ್ಯವನ್ನು ತೋರುತ್ತದೆ ಎಂದು ಸೋಮನಾಳ ಗ್ರಾಮಸ್ಥರು ಆರೋಪಿಸಿದ್ದಾರೆ.
Advertisement
ರಂಧ್ರ ಬಿದ್ದು ನೀರು ಪೋಲಾಗುತ್ತಿರುವ ಮಾಹಿತಿ ಸಿಗುತ್ತಿದ್ದಂತೆ ಅಧಿಕಾರಿಗಳು, ಕಾಲುವೆಗೆ ಹರಿಸುತ್ತಿದ್ದ ನೀರಿನ ಪ್ರಮಾಣವನ್ನು ಕಡಿಮೆ ಮಾಡಿದ್ದಾರೆ. ಮಂಗಳವಾರ ಬೆಳಗ್ಗೆ ಸ್ಥಳಕ್ಕೆ ಬಂದು ಕಾಟಾಚಾರಕ್ಕೆ ಎಂಬಂತೆ ರಿಪೇರಿ ಮಾಡಿ ಹೋಗುತ್ತಾರೆ. ರೈತರ ಪರಿಸ್ಥಿತಿ, ಸಮಸ್ಯೆ ಅವರಿಗೆ ಅರ್ಥವಾಗುವುದಿಲ್ಲ ಎಂದು ಸೋಮನಾಳ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.