ಕೊಪ್ಪಳ: ಜಿಂದಾಲ್ ಕಾರ್ಖಾನೆಗೆ ಜಮೀನು ನೀಡುವ ವಿಚಾರದಲ್ಲಿ ಸರ್ಕಾರ ಕಿಕ್ ಬ್ಯಾಕ್ ಪಡೆದಿದೆ ಎಂಬ ವಿರೋಧ ಪಕ್ಷದ ನಾಯಕರು ಮಾಡುತ್ತಿರುವ ಆರೋಪ ಸುಳ್ಳು ಎಂದು ವೈದ್ಯಕೀಯ ಶಿಕ್ಷಣ ಸಚಿವ ಈ ತುಕಾರಾಂ ಹೇಳಿದ್ದಾರೆ.
ಜಿಲ್ಲೆಯ ಕುಷ್ಟಗಿಯಲ್ಲಿ ಮಾತನಾಡಿದ ತುಕಾರಾಂ, ನಮ್ಮ ಸರ್ಕಾರ ಕಿಕ್ ಬ್ಯಾಕ್ ಪಡೆಯುವಂತಹ ಯಾವುದೇ ಕೆಲಸವನ್ನು ಮಾಡಿಲ್ಲ. ಯಾರ ಬಾಯಿಯಲ್ಲಿ ಏನ್ ಮಾಡಿರುತ್ತಾರೋ ಅದನ್ನು ನುಡಿಸುತ್ತೆ ಎಂದು ಪರೋಕ್ಷವಾಗಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪರಿಗೆ ತಿರುಗೇಟು ನೀಡಿದರು.
ಜಿಂದಾಲ್‍ಗೆ ಏನು ಭೂಮಿ ಕೊಡಲಾಗಿದೆ ಅದು ಲೀಗಲ್ ಆಗಿದೆ. ನಾವೆಲ್ಲ ದೇಶ ಕಟ್ಟಬೇಕಾಗಿದ್ದು, ಯುವಕರಿಗೆ ಉದ್ಯೋಗ ಅವಕಾಶಗಳನ್ನು ಕೊಡಬೇಕಾಗಿದೆ. ಗ್ಲೋಬಲ್ ಇನ್‍ವೆಸ್ಟ್ಮೆಂಟ್ ಮಾಡುವ ಮೂಲಕ ಇಂಡಸ್ಟ್ರಿಗಳನ್ನು ಬೆಳೆಸುವುದು ಸರ್ಕಾರದ ಉದ್ದೇಶವಾಗಿದ್ದು, ಕೈಗಾರಿಕೆಗಳು ದೇಶದ ಆಸ್ತಿ, ಅವುಗಳಿಂದ ಸಾಕಷ್ಟು ಉದ್ಯೋಗಗಳು ಸೃಷ್ಟಿಯಾಗುತ್ತೆ ಎಂದರು.
ಜಿಂದಾಲ್ ಕಂಪನಿಗೆ 2016ರಲ್ಲಿಯೇ ಭೂಮಿ ನೀಡಲು ಲೀಸ್ ಕಮಿಟಿಯಲ್ಲಿ ನಿರ್ಣಯ ಮಾಡಿ ನೀಡಲಾಗಿತ್ತು. 2006ರಲ್ಲಿ 5 ಮಿಲಿಯನ್ ಟನ್ ಸ್ಟೀಲ್ ಉತ್ಪಾದನೆ ಇತ್ತು, 2010 ರಲ್ಲಿ 10 ಮಿಲಿಯನ್ ಟನ್, 2011ರಲ್ಲಿ 15 ಮಿಲಿಯನ್ ಟನ್ ಇತ್ತು, ಸದ್ಯ 20 ಮಿಲಿಯನ್ ಟನ್ ಅಗತ್ಯ ಇದೆ. ಸ್ಟೀಲ್ ಉತ್ಪಾದನೆಯಿಂದ ಇತರೆ ಉತ್ಪನ್ನಗಳು ಉತ್ಪತ್ತಿಯಾಗುತ್ತಿವೆ. ಸಿಮೆಂಟ್, ಪೇಂಟ್, ಪವರ್ ಹಾಗೂ ಡಾಂಬರ್ ಉತ್ಪಾದನೆ ಆಗುತ್ತಿದ್ದು ಅವುಗಳ ಪ್ಲಾಂಟ್‍ಗಳನ್ನು ನಿರ್ಮಿಸಲಾಗಿದೆ. ಇದೊಂದು ನೈಸರ್ಗಿಕ ಸಂಪನ್ಮೂಲವಾಗಿದ್ದು, ಬಳಕೆ ಮಾಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಮುಸುನಾಯಕನ ಹಳ್ಳಿ ಹಾಗೂ ಯರಬನಳ್ಳಿ ಗ್ರಾಮಗಳಲ್ಲಿ ಪ್ಲಾಂಟ್ ಆಗಿದೆ. ಸ್ಥಳೀಯರಿಗೆ ಉದ್ಯೋಗ ಅವಕಾಶ ನೀಡಲಾಗುತ್ತಿದ್ದು. ಸರೋಜಿನಿ ಮಹಿಷಿ ವರದಿ ಪ್ರಕಾರ ಪಾಲೋ ಮಾಡಲಾಗುತ್ತಿದೆ ಎಂದರು.
ಇನ್ನು ಬ್ರಾಹ್ಮಿಣಿ ಮತ್ತು ಮಿತ್ತಲ್‍ಗೆ ಬಿಜೆಪಿ ಸರ್ಕಾರದಲ್ಲಿ ಭೂಮಿ ಕೊಡಲಾಗಿದ್ದು, 6100 ಎಕರೆ ಉತ್ತಮ್ ಗಾಲ್ವಾ ಕೊಟ್ಟು ಇಂಡಸ್ಟ್ರಿ ಯಾರಿಗೂ ಸಿಗದಂಗೆ ಮಾಡಿದ್ದಾರೆ ಅದು ಸಿಬಿಐಗೆ ಸಿಲುಕಿದೆ. ಇದರ ಬಗ್ಗೆ ಬಿಜೆಪಿ ಅವರು ಯಾರು ಮಾತನಾಡುವುದಿಲ್ಲ. ಬಿಜೆಪಿಯವರು ಯಾವುದೇ ಕೆಲಸ ಮಾಡಿಲ್ಲ. ನಮ್ಮ ಸರ್ಕಾರ ಮಾಡುತ್ತಿದೆ ಅದಕ್ಕಾಗಿ ಹತಾಶರಾಗಿದ್ದಾರೆ ಎಂದು ಟೀಕಿಸಿದರು.
ಈಗಾಗಲೇ ನಮ್ಮ ಸರ್ಕಾರದಲ್ಲೇ ಕೆಲವರು ಇದಕ್ಕೆ ವಿರೋಧ ಹೇಳಿಕೆ ನೀಡಿದ್ದರು. ಅವರಿಗೂ ಮನವರಿಕೆ ಮಾಡಲಾಗಿದ್ದು, ಇದು ದೇಶದ ಯುವಕರ ಹಾಗೂ ರೈತರ ಅಭಿವೃದ್ಧಿಗಾಗಿ ಮಾಡುತ್ತಿರುವ ಕೆಲಸ ಎಂದು ಈ ತುಕಾರಾಂ ವಿಶ್ವಾಸ ವ್ಯಕ್ತಪಡಿಸಿದರು.