ಕೊಪ್ಪಳ: ಕೆಲ ಕಿಡಿಗೇಡಿಗಳು ನಿಧಿಗಾಗಿ ಐತಿಹಾಸಿಕ ಪ್ರಸಿದ್ಧ ನವಬೃಂದಾವನವನ್ನು ಧ್ವಂಸಗೊಳಿಸಿದ ಘಟನೆ ಗಂಗಾವತಿ ತಾಲೂಕಿನ ಆನೆಗುಂದಿಯಲ್ಲಿ ನಡೆದಿದೆ.
ಆನೆಗುಂದಿ ಸಮೀಪವಿರುವ ನವಬೃಂದಾವನ ಗಡ್ಡೆ ತುಂಗಭದ್ರಾ ನದಿಯ ಮಧ್ಯದಲ್ಲಿದೆ. ಇಲ್ಲಿ ವ್ಯಾಸರಾಜರು ಸೇರಿದಂತೆ ಒಟ್ಟು ಒಂಬತ್ತು ಯತಿಗಳ ಸಮಾಧಿಗಳು ಇವೆ. ದುಷ್ಕರ್ಮಿಗಳು ನಿಧಿಯ ಆಸೆಗಾಗಿ ಬುಧವಾರ ರಾತ್ರಿ ನವಬೃಂದಾವನವನ್ನು ಅಗೆದು ಹಾಕಿದ್ದಾರೆ. ಸಮಾಧಿಯ ಕೆಳಭಾಗವನ್ನು ಸಹ ಸಂಪೂರ್ಣ ಅಗೆದಿದ್ದರಿಂದ ನಿಧಿಗಾಗಿ ಹೀಗೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿದ್ದು, ಗಂಗಾವತಿ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಂಗಾವತಿಯ ತಹಶೀಲ್ದಾರ್ ವೀರೇಶ ಅವರು ಕೂಡ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ನವಬೃಂದಾವನದಲ್ಲಿ ಪ್ರತಿವರ್ಷ ರಾಘವೇಂದ್ರ ಮಠದವರಿಂದ ಮತ್ತು ಉತ್ತಾರಾಧಿ ಮಠದಿಂದ ಅದ್ಧೂರಿಯಾಗಿ ಆರಾಧನೆ ಕಾರ್ಯಕ್ರಮ ಜರಗುತ್ತದೆ. ನವಬೃಂದಾವನ ಮಾಲೀಕತ್ವಕ್ಕಾಗಿ ಈ ಎರಡು ಮಠದವರು ಸುಪ್ರೀಂಕೊರ್ಟ್ ಮೆಟ್ಟಿಲೇರಿದ್ದು, ಯಾರ ಪರವೂ ತೀರ್ಪು ಬಂದಿಲ್ಲ.