ಕೊಪ್ಪಳ: ಜಿಲ್ಲಾಡಳಿತದ ವಿರೋಧದ ನಡುವೆಯೂ ಗಂಗಾವತಿ ತಾಲೂಕಿನ ಆನೆಗೊಂದಿ ಭಾಗದಲ್ಲಿ ಅನಧಿಕೃತ ರೆಸಾರ್ಟ್ ಸಂಖ್ಯೆ ಹೆಚ್ಚುತ್ತಿದ್ದು, ಹೊಸ ವರ್ಷಕ್ಕಾಗಿ ಬರೋಬ್ಬರಿ 13 ರೆಸಾರ್ಟ್‍ಗಳು ವಹಿವಾಟು ನಡೆಸಲು ಸಜ್ಜಾಗಿವೆ.
ವಿದೇಶಿಗರ ಮೋಜಿ ಮಸ್ತಿಗಾಗಿ ರೂಪುಗೊಂಡ ತಾಲೂಕಿನ ವಿರುಪಾಪುರಗಡ್ಡಿ ರೆಸಾರ್ಟ್‍ಗಳು ವೀಕೆಂಡ್ ಪ್ರಿಯರಿಗೆ ಮಸ್ತ್ ಜಾಗವಾಗಿದೆ. ಗಡ್ಡಿಯೊಂದರಲ್ಲಿ 33 ರೆಸಾರ್ಟ್‍ಗಳು ವೀಕೆಂಡ್ ಗೆ ಅತಿಥ್ಯ ನೀಡುತ್ತಿವೆ. ಇತ್ತೀಚಿಗೆ ಸಂಭವಿಸಿದ ಪ್ರವಾಹ ಪರಿಸ್ಥಿತಿ ಸಂದರ್ಭದಲ್ಲಿ ರೆಸಾರ್ಟ್‍ಗಳಿಗೆ ಕಡಿವಾಣ ಹಾಕಲು ಜಿಲ್ಲಾಡಳಿತ ಕಸರತ್ತು ನಡೆಸಿದರೂ ಸ್ಥಳೀಯ ಅಧಿಕಾರಿಗಳ ಅಸಹಕಾರದಿಂದ ಪ್ರಯೋಜನವಾಗಿಲ್ಲ. ರೆಸಾರ್ಟ್ ಕತೆ ಮುಗಿತು ಎನ್ನುವಷ್ಟರಲ್ಲಿ ಗಡ್ಡಿ ಹೊರಭಾಗದಲ್ಲಿ ರೆಸಾರ್ಟ್‍ಗಳು ನಿರ್ಮಾಣಗೊಂಡಿದ್ದು, ಹೊರ ಜಿಲ್ಲೆ ಉದ್ಯಮಿಗಳು ಕಾಲಿಟ್ಟಿದ್ದಾರೆ. ಪಟ್ಟಾ ಭೂಮಾಲೀಕರಿಗೆ ಸೀಮಿತವಾಗಿದ್ದ ಮೋಜು ಮಸ್ತಿ ಜಾಗಕ್ಕೀಗ ಹೊರಗಿನವರು ಲಗ್ಗೆ ಹಾಕಿದ್ದು, ಪೈಪೋಟಿ ವಹಿವಾಟುವಿಗೆ ಹಳೇ ಉದ್ಯಮಿಗಳು ಸುಸ್ತಾಗಿದ್ದಾರೆ.
Advertisement
Advertisement
ಸಣಾಪುರ, ಹನುಮನಹಳ್ಳಿ, ಆನೆಗೊಂದಿ, ಜಂಗ್ಲಿ, ಅಂಜನಾದ್ರಿ ಬೆಟ್ಟ, ಚಿಕ್ಕರಾಂಪುರ ಬಳಿ ಅನಧಿಕೃತ ರೆಸಾರ್ಟ್‍ಗಳು ತಲೆ ಎತ್ತಿದ್ದು, ಬಳ್ಳಾರಿ, ರಾಯಚೂರು ಮತ್ತು ಗೋವಾ ಮೂಲದ ಉದ್ಯಮಿಗಳು ಗುತ್ತಿಗೆ ಆಧಾರದಡಿ ಜಾಗ ಪಡೆದು ರೆಸಾರ್ಟ್ ನಿರ್ಮಿಸುತ್ತಿದ್ದಾರೆ. ರೆಸಾರ್ಟ್‍ಗಳಿಂದ ಸರ್ಕಾರಕ್ಕೆ ನಯಾಪೈಸೆ ಆದಾಯವಿಲ್ಲ. ಹಂಪಿ ಪ್ರಾಧಿಕಾರ ಮತ್ತು ಕಂದಾಯ ಇಲಾಖೆ ಅನುಮತಿ ಬೇಕಿಲ್ಲ. ಹೀಗಾಗಿ ಅನಧಿಕೃತ ರೆಸಾರ್ಟ್‍ಗಳಿಗೆ ಕಡಿವಾಣವಿಲ್ಲದಂತಾಗಿದ್ದು, ಮೋಜು ಮಸ್ತಿಗೆ ತಡೆಯಬೇಕಿದ್ದ ಪೊಲೀಸರು ಆಸಕ್ತಿವಹಿಸುತ್ತಿಲ್ಲ. ಪಟ್ಟಾ ಭೂಮಿಯೊಂದಿಗೆ ಸರ್ಕಾರಿ ಭೂಮಿ ಒತ್ತುವರಿಯಾಗಿದ್ದರೂ ಕೇಳುವರಿಲ್ಲ. ಉತ್ಸವದ ವೇದಿಕೆ ಕೂಗಳತೆಯಲ್ಲಿ ರೆಸಾರ್ಟ್ ನಿರ್ಮಾಣವಾಗಿದ್ದರೂ ತಾಲೂಕು ಆಡಳಿತದ ಗಮನಕ್ಕಿಲ್ಲ.
Advertisement
Advertisement
ರೆಸಾರ್ಟ್‍ಗಳನ್ನು ಅರಣ್ಯ ಭೂಮಿಯಲ್ಲಿ ನಿರ್ಮಿಸಿದ್ದು, ಬೃಹತ್ ಕಲ್ಲು ಬಂಡೆಗಳಿಗೆ ಹೊಂದಿಕೊಂಡು ನಿರ್ಮಿಸಿದ್ದರೂ ಅರಣ್ಯ ಇಲಾಖೆ ಗಮನಹರಿಸಿಲ್ಲ. ವಿಎನ್‍ಸಿ ಕಾಲುವೆ ನೀರನ್ನು ರೆಸಾರ್ಟಿನತ್ತ ಬರುವ ರೀತಿಯಲ್ಲಿ ಸೋರಿಕೆ ವ್ಯವಸ್ಥೆ ಮಾಡಿದ್ದರೂ ನೀರಾವರಿ ಇಲಾಖೆ ನೋಡುತ್ತಿಲ್ಲ. ಅರಣ್ಯ ಒತ್ತುವರಿಯಾಗಿರುವುದು ರೆಸಾರ್ಟ್‍ಗಳಿಂದ ಗೊತ್ತಾದರೂ ಕ್ರಮ ಕೈಗೊಳ್ಳದಿರುವುದು ಅನುಮಾನಕ್ಕೆ ಕಾರಣವಾಗಿದೆ. ಪೈಪೋಟಿ ಉದ್ಯಮಿ ಹಿನ್ನೆಲೆಯಲ್ಲಿ ಬಹುತೇಕ ರೆಸಾರ್ಟ್‍ಗಳು ಗುತ್ತಿಗೆ ಆಧಾರದಡಿ ನಡೆಯುತ್ತಿದ್ದು, ಮಾಲೀಕರು ಮೆಟ್ರೋಪಾಲಿಟಿನ್ ಸಿಟಿ ಸೇರಿದ್ದಾರೆ. ಹೊರಗಿನಿಂದ ಬಂದ ವಹಿವಾಟುಗಾರರಿಗೆ ಸ್ಥಳೀಯ ನೈಸರ್ಗಿಕ ಸಂಪನ್ಮೂಲ ಹಾಳು ಮಾಡುತ್ತಿದ್ದು, ಮೋಜು ಮಸ್ತಿ ಹೆಸರಿನಲ್ಲಿ ಸಂಸ್ಕೃತಿ ನಾಶ ಮಾಡುತ್ತಿದ್ದಾರೆ.