ಕೊಪ್ಪಳ: ಪೊಲೀಸರು ಕೇವಲ ಅಪರಾಧ ತಡೆಗಟ್ಟಲು ಸೀಮಿತರಾಗುತ್ತಾರೆ ಎಂಬ ಮನೋಭಾವನೆ ಎಲ್ಲರಲ್ಲಿಯೂ ಬೇರೂರಿದ್ದು, ಇದಕ್ಕೆ ಅಪವಾದ ಎಂಬುವಂತೆ ಕುಷ್ಟಗಿ ಪೋಲೀಸರು ಒಂದು ಗ್ರಾಮವನ್ನು ದತ್ತು ಪಡೆದುಕೊಂಡು ಗ್ರಾಮದ ಅಭಿವೃದ್ಧಿಗೆ ಟೊಂಕಕಟ್ಟಿಕೊಂಡು ಗ್ರಾಮವನ್ನು ಸ್ವಚ್ಛತೆ ಮಾಡುವ ಮೂಲಕ ಜನಸ್ನೇಹಿ ಪೊಲೀಸರಾಗಿ ಹೊರಹೊಮ್ಮಿದ್ದಾರೆ.
ಕುಷ್ಟಗಿ ತಾಲೂಕಿನ ಬಿಜಕಲ್ ಗ್ರಾಮದಲ್ಲಿ ಸಮಸ್ಯೆಗಳ ಜತೆಗೆ ಇಡೀ ಗ್ರಾಮ ಅನೈರ್ಮಲ್ಯದಿಂದ ಕೂಡಿದ್ದು, ಗ್ರಾಮದ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂಬ ಮನೋಭಾವನೆ ಇಟ್ಟುಕೊಂಡು ಸಿಪಿಐ ಜಿ.ಚಂದ್ರಶೇಖರ ಹಾಗೂ ಪಿಎಸ್‍ಐ ಚಿತ್ತರಂಜನ್ ಅವರು ಸಿಬ್ಬಂದಿ ಸಭೆ ಕರೆದು ಗ್ರಾಮವನ್ನು ದತ್ತು ಪಡೆದುಕೊಂಡಿದ್ದಾರೆ. ಗ್ರಾಮದಲ್ಲಿ ಸ್ವಚ್ಛತೆ ಕಾರ್ಯ ಕೈಗೊಳ್ಳುವುದರ ಮೂಲಕ ಗ್ರಾಮವನ್ನು ಜಿಲ್ಲೆಗೆ ಮಾದರಿಯನ್ನಾಗಿ ಮಾಡಲು ದತ್ತು ಪಡೆದುಕೊಂಡು ಅಭಿವೃದ್ಧಿ ಪಡಿಸುವಲ್ಲಿ ನಿರತವಾಗಿರುವುದು ಸಾರ್ವಜನಿಕರಲ್ಲಿ ಪ್ರಶಂಸೆಗೆ ವ್ಯಕ್ತವಾಗಿದೆ.
Advertisement
Advertisement
ಕುಷ್ಟಗಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ಬೆಳ್ಳಂಬೆಳಿಗ್ಗೆ ಬಿಜಕಲ್ ಗ್ರಾಮಕ್ಕೆ ಭೇಟಿ ನೀಡಿ ಶಾಲಾ ಆವರಣ, ಪ್ರಮುಖ ರಸ್ತೆ, ಚರಂಡಿ ಕಾಲುವೆಗಳು ಸ್ವಚ್ಛತೆ ಕಾರ್ಯ ಕೈಗೊಳ್ಳುವ ಮೂಲಕ ಶ್ರಮದಾನ ಮಾಡಿದರು. ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಸ್ವಯಂಪ್ರೇರಣೆಯಿಂದ ಕೈಜೋಡಿಸಿರುವುದು ಮಹತ್ತರ ಕಾರ್ಯವಾಗಿದೆ. ಬಿಜಕಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕರು ದಿನಂಪ್ರತಿ ಬೆಳಿಗ್ಗೆಯಾದರೆ ಸಾಕು ಶಾಲಾ ಆವರಣದಲ್ಲಿ ಮಲ ಮೂತ್ರ ಮಾಡುತ್ತಿದ್ದರು. ಇದನ್ನ ಮನಗಂಡ ಸಿಪಿಐ ಜಿ.ಚಂದ್ರಶೇಖರ ಅವರು ಜೆಸಿಬಿ ಮತ್ತು ಟ್ರ್ಯಾಕ್ಟರ್ ತರಿಸಿ ಸ್ವಚ್ಛತೆ ಕಾರ್ಯ ಮಾಡಿದರು. ಇನ್ಮುಂದೆ ಈ ರೀತಿ ಗಲೀಜು ಮಾಡದಂತೆ ಜನರಲ್ಲಿ ಜಾಗೃತಿ ಮೂಡಿಸಿದರು.
Advertisement
ಶಾಲಾ ತಡೆಗೋಡೆಯ ಹಿಂದೆ ಬೃಹತ್ ಆಕಾರದ ಮುಳ್ಳುಕಂಟಿ ಬೆಳೆದಿದ್ದು, ಅದನ್ನು ಸಹ ಸ್ವಚ್ಛಗೊಳಿಸಿದರು. ಪೊಲೀಸರ ಕಾರ್ಯದಿಂದ ಸಾರ್ವಜನಿಕರು ಇನ್ಮುಂದೆ ಯಾವುದೇ ರೀತಿಯಿಂದ ಅನೈರ್ಮಲ್ಯದಿಂದ ಗ್ರಾಮವನ್ನು ಇಟ್ಟುಕೊಳ್ಳದೇ ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕು ಎಂಬ ಮನೋಭಾವನೆ ಮೂಡಿಬಂದಿರುವುದು ಶ್ಲಾಘನೀಯ ವಿಷಯವಾಗಿದೆ ಎನ್ನುತ್ತಾರೆ ಗ್ರಾಮಸ್ಥರು.
Advertisement
ಗಾಂಧೀಜಿ ಕಂಡ ಗ್ರಾಮ ಸ್ವರಾಜ ಕನಸನ್ನು ನನಸು ಮಾಡಟಬೇಕಾದರೆ ಗ್ರಾಮಸ್ಥರಲ್ಲಿ ನಮ್ಮ ಗ್ರಾಮವನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕು ಎಂಬ ಮನೋಭಾವನೆ ಬಂದಾಗ ಮಾತ್ರ ಗಾಂಧೀಜಿ ಕಂಡ ಕನಸು ನನಸಾಗಲಿದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿ ವತಿಯಿಂದ ಬಿಜಲ್ ಗ್ರಾಮವನ್ನು ದತ್ತು ಗ್ರಾಮವನ್ನಾಗಿ ಪಡೆದುಕೊಂಡು ಶಾಲಾ ಆವರಣ, ಶಾಲೆ ತಡೆಗೋಡೆ, ಪ್ರಮುಖ ರಸ್ತೆಗಳು, ಚರಂಡಿ ಕಾಲುವೆಗಳು ಪೊಲೀಸ್ ಸಿಬ್ಬಂದಿಗಳು ಸ್ವಯಂ ಪ್ರೇರಣೆಯಿಂದ ಸ್ವಚ್ಛತೆ ಮಾಡುವುದರ ಮೂಲಕ ಶ್ರಮಧಾನ ಮಾಡಿದ್ದಾರೆ. ನಮ್ಮ ಕಾರ್ಯಕ್ಕೆ ಸಾರ್ವಜನಿಕರು ಸಹಕಾರ ನೀಡಿರುವುದು ಒಳ್ಳೆಯ ವಿಷಯವಾಗಿದೆ ಎಂದು ಸಿಪಿಐ ಜಿ.ಚಂದ್ರಶೇಖರ ಅನಿಸಿಕೆ ಹಂಚಿಕೊಂಡರು.
ಗ್ರಾಮವನ್ನು ಇಟ್ಟುಕೊಳ್ಳಬೇಕು ಎಂಬ ಮನೋಭಾವನೆ ಪ್ರತಿಯೊಬ್ಬರಲ್ಲಿ ಮೂಡಿಬರಬೇಕಾಗಿದೆ. ಅಂದಾಗ ಮಾತ್ರ ಗ್ರಾಮವನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಸಾರ್ವಜನಿಕರು ತಮ್ಮ ಮನೆಯ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳಬೇಕು ಹಾಗೂ ಜನರು ಸರ್ಕಾರಕ್ಕೆ ಸೇರಿದ ಶಾಲೆ, ದೇವಸ್ಥಾನ, ಆವರಣಗಳನ್ನು ಸ್ವಚ್ಛತೆ ಮಾಡಲು ಸಮಯಾವಕಾಶವನ್ನು ಮೀಸಲಿಟ್ಟು ಗ್ರಾಮದಲ್ಲಿ ದಿನಂಪ್ರತಿ ಜನರು ಸ್ವಯಂಪ್ರೇರಣೆಯಿಂದ ಒಂದು ತಾಸು ತಮ್ಮ ಕೆಲಸವನ್ನು ಬದಿಗೆ ಒತ್ತಿ ಸ್ವಚ್ಛತೆ ಮಾಡಿದಾಗ ಮಾತ್ರ ಗ್ರಾಮ ಸ್ವಚ್ಛಂದದಿಂದ ಕಾಣುವುದರ ಜತೆಗೆ ರೋಗಮುಕ್ತ ಗ್ರಾಮವನ್ನಾಗಿ ಮಾಡಬಹುದಾಗಿದೆ ಈ ನಿಟ್ಟಿನಲ್ಲಿ ಜನರು ಕಾರ್ಯೋನ್ಮುಕವಾಗಬೇಕಾಗಿದೆ ಎಂದು ಪಿಎಸ್‍ಐ ಚಿತ್ತರಂಜನ್ ಅಭಿಪ್ರಾಯಪಟ್ಟರು.