– 140 ಗ್ರಾಂ ಚಿನ್ನ ಸೇರಿ 10 ಲಕ್ಷ ರೂ. ಮೌಲ್ಯದ ವಸ್ತು ವಶ
ಕೊಪ್ಪಳ: ನ್ಯಾಯಾಧೀಶರು ಹಾಗೂ ಪೊಲೀಸರ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಮೂವರು ಅಂತರ್ ರಾಜ್ಯ ಕಳ್ಳರನ್ನು ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ.
ಮಧ್ಯಪ್ರದೇಶ ಮೂಲದ ಮುಖೇಶ್, ಜಶ್ವಂತ್ ಸಿಂಹ, ಸಂದೀಪ್ ಸೋನಿ ಬಂಧಿತ ಕಳ್ಳರು. ಆರೋಪಿಗಳು ಜಿಲ್ಲೆಯ ಗಂಗಾವತಿ ನಗರದ ಪೊಲೀಸ್ ಕ್ವಾಟ್ರಸ್‍ನಲ್ಲಿ ಹಾಗೂ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಹಾಗೂ ಬೆಳಗಾವಿ ಜಿಲ್ಲೆಯ ಅಥಣಿಯ ನ್ಯಾಯಾಧೀಶರ ಮನೆಗಳಲ್ಲಿ ಕಳ್ಳತನ ಮಾಡಿದ್ದರು.
ಆರೋಪಿಗಳ ಬಂಧನಕ್ಕಾಗಿ ಗಂಗಾವತಿ ನಗರ ಠಾಣೆಯ ಪೊಲೀಸರು ವಿಶೇಷ ತಂಡವನ್ನು ರಚನೆ ಮಾಡಿದ್ದರು. ಈ ತಂಡ ಸತತ ಪ್ರಯತ್ನದ ಮೂಲಕ ಕಳ್ಳರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 140 ಗ್ರಾಂ ಚಿನ್ನ, 390 ಗ್ರಾಂ ಬೆಳ್ಳಿ, 2 ಬೈಕ್ ಸೇರಿದಂತೆ ಒಟ್ಟು 10 ಲಕ್ಷ ರೂ. ಮೌಲ್ಯದ ವಸ್ತುಗಳು ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ಗಂಗಾವತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ.