ಬೆಂಗಳೂರು: ನಿಧಿಗಾಗಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿ ಬಳಿ ಇರುವ ನವವೃಂದಾವನನ್ನು ದುಷ್ಕರ್ಮಿಗಳು ಅಗೆದು ಧ್ವಂಸ ಮಾಡಿದ್ದಾರೆ. ಇದಕ್ಕೆ ನಟ ಜಗ್ಗೇಶ್ ಪ್ರತಿಕ್ರಿಯಿಸಿ, ಈ ಕೃತ್ಯ ಮಾಡಿದವರ ವಂಶ ಸರ್ವನಾಶವಾಗುತ್ತದೆ ಎಂದು ಶಾಪ ಹಾಕಿದ್ದಾರೆ.
ನಟ ಜಗ್ಗೇಶ್ ಟ್ವೀಟ್ ಮಾಡುವ ಮೂಲಕ ನವವೃಂದಾವನನ್ನು ಧ್ವಂಸ ಮಾಡಿದವರ ವಿರುದ್ಧ ಸಿಡಿದೆದ್ದಿದ್ದಾರೆ. “ಅಯ್ಯೋ ದೇವರೇ ಎಂಥ ಹೀನ ಕೃತ್ಯ ಮಾಡಿದ್ದಾರೆ. ಈ ಕೃತ್ಯ ಮಾಡಿದವರ ವಂಶ ಸರ್ವನಾಶವಾಗುತ್ತದೆ. ಸನಾತನ ನಮ್ಮ ಶ್ರೇಷ್ಟತೆಯ ಗುರುಪರಂಪರೆಗೆ ಕೈ ಹಾಕಿದ್ದಾರೆ. ಹೀಗಾಗಿ ಪಾಪಿಗಳಿಗೆ ಕ್ಷಮೆಯಿರದಿರಲಿ. ಸಂಬಂಧಪಟ್ಟ ಅಧಿಕಾರಿವರ್ಗ ಸೂಕ್ತಕ್ರಮ ತೆಗೆದುಕೊಳ್ಳಬೇಕು. ಗುರುಭಕ್ತರೇ ಪುನರ್ ನಿರ್ಮಾಣಕ್ಕೆ ಹಾಗೂ ಕಾನೂನು ಕ್ರಮಕ್ಕೆ ಹ್ಯಾಶ್‍ಟ್ಯಾಗ್ ಮಾಡಿ ಒತ್ತಾಯಿಸಿ” ಎಂದು ಆಕ್ರೋಶಗೊಂಡು ಹೇಳಿದ್ದಾರೆ.
Advertisement
Advertisement
ಗಂಗಾವತಿ ತಾಲೂಕಿನ ಆನೆಗುಂದಿ ಬಳಿ ಇರುವ ನವವೃಂದಾವನ ಗಡ್ಡೆ ತುಂಗಭದ್ರಾ ನದಿಯ ಮಧ್ಯದಲ್ಲಿದೆ. ಇಲ್ಲಿ ವ್ಯಾಸರಾಜರು ಸೇರಿದಂತೆ ಒಟ್ಟು ಒಂಬತ್ತು ಯತಿಗಳ ಸಮಾಧಿಗಳು ಇವೆ. ಇಲ್ಲಿ ಪ್ರತಿವರ್ಷ ರಾಘವೇಂದ್ರ ಮಠದವರಿಂದ ಮತ್ತು ಉತ್ತಾರಾಧಿ ಮಠದಿಂದ ಅದ್ಧೂರಿಯಾಗಿ ಆರಾಧನೆ ಕಾರ್ಯಕ್ರಮ ಜರಗುತ್ತದೆ.
Advertisement
Advertisement
ನವ ವೃಂದಾವನ ಮಾಲಿಕತ್ವಕ್ಕಾಗಿ ಈ ಎರಡು ಮಠದವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಯಾರ ಪರವೂ ತೀರ್ಪು ಬಂದಿಲ್ಲ. ಸಾಕಷ್ಟು ವಿವಾದಿತ ಪ್ರದೇಶ ಇದಾಗಿದ್ದು, ಬುಧವಾರ ರಾತ್ರಿ ದುಷ್ಕರ್ಮಿಗಳು ನಿಧಿಯ ಆಸೆಗಾಗಿ ನವ ವೃಂದಾವನವನ್ನು ಅಗೆದು ಹಾಕಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ.
ಸಮಾಧಿಯ ಕೆಳಭಾಗವನ್ನು ಸಹ ಸಂಪೂರ್ಣ ಅಗೆದಿದ್ದು, ಇದು ಪಕ್ಕಾ ನಿಧಿಗಾಗಿ ಅಗೆದಿದ್ದಾರೆ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಗಂಗಾವತಿ ತಹಶಿಲ್ದಾರ ವೀರೇಶ್ ಮತ್ತು ಗಂಗಾವತಿ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.