ಕೊಪ್ಪಳ: ನಗರಸಭೆ ಚುನಾವಣೆಯಲ್ಲಿ ತಮಗೆ ಮತ ಹಾಕಿಲ್ಲ. ಹೀಗಾಗಿ ನಾವು ಸೋಲಬೇಕಾಯಿತು ಅಂತ ಸೋತ ಕಾಂಗ್ರೆಸ್ ಅಭ್ಯರ್ಥಿಯೊಬ್ಬರು ಪಕ್ಕದ ಮನೆಯ ಮೂವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.
ನಗರದ ಒಂದನೇ ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ಸಾಧಿಕಾ ಬೇಗಂ ಪತಿ ಹಾಗೂ ಬೆಂಬಲಿಗ ಹಲ್ಲೆ ಮಾಡಿದ್ದಾರೆ. ಈ ವೇಳೆ ಅಜ್ಮೀರ್, ಯೂನಸ್ ಹಾಗೂ ಪಾಶಾ ಎಂಬವರಿಗೆ ಗಾಯವಾಗಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.
ಎರಡೂ ಕುಟುಂಬಗಳು ಸಂಬಂಧಿಕರಾಗಿದ್ದು, ಅಜ್ಮೀರ್ ಕುಟುಂಬದವರು ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡಿದ್ದರು. ಹೀಗಾಗಿ ಸಾಧಿಕಾ ಬೇಗಂ ಅವರು ಪಕ್ಷೇತರ ಅಭ್ಯರ್ಥಿಯ ವಿರುದ್ಧ ಸೋತಿದ್ದಾರೆ. ಇದೇ ಕಾರಣಕ್ಕೆ ಇಂದು ಜಗಳ ಪ್ರಾರಂಭಿಸಿದ ಸಾಧಿಕಾ ಬೇಗಂ ಪತಿ ಹಾಗೂ ಬೆಂಬಲಿಗರು ಅಜಮೀರ್ ಮನೆ ಹೊಕ್ಕು, ಹಲ್ಲೆ ಮಾಡಿದ್ದಾರೆ.
ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಕುರಿತು ಕೊಪ್ಪಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv