– ಕೋಮು ಸೌಹಾರ್ದತೆ ಮೂಡಿಸಲು ಮುಂದಾದ ಮುಸ್ಲಿಂ ಬಾಂಧವರ
ಕೊಪ್ಪಳ: ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಕೋಮು ಸೌಹಾರ್ದತೆ ಕಡಿಮೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಧರ್ಮ ಧರ್ಮಗಳ ನಡುವೆ ಕೋಮು ಸೌಹಾರ್ದತೆ ಮೂಡಿಸುವ ನಿಟ್ಟಿನಲ್ಲಿ ಜಮಾತ್-ಎ-ಇಸ್ಲಾಂ ಹಿಂದ್ ಸಂಘಟನೆ ಮಸೀದಿ ಸಂದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದೆ. ನೂರಾರು ಹಿಂದೂಗಳು ಮಸೀದಿಗೆ ಭೇಟಿ ನೀಡಿ ಇಸ್ಲಾಂ ಧರ್ಮ ಹಾಗೂ ಮಸೀದಿ ಬಗ್ಗೆ ತಿಳಿದುಕೊಂಡರು.
ಕೊಪ್ಪಳದ ನಗರದ ಸ್ಟೇಷನ್ ರಸ್ತೆಯಲ್ಲಿರುವ ಮಸ್ಜಿದ್-ಎ-ಅಲ್ಲಾದಲ್ಲಿ ಇಂದು ವಿಭಿನ್ನ ಕಾರ್ಯಕ್ರಮವೊಂದು ನಡೆಯಿತು. ಕೊಪ್ಪಳದ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿಗಳು ಮಸೀದಿಗೆ ಭೇಟಿ ನೀಡಿದರು. ಈ ವೇಳೆ ಸ್ವಾಮೀಜಿಗಳಿಗೆ ಮುಸ್ಲಿಂ ಬಾಂಧವರ ಮಸೀದಿಯ ಬಗ್ಗೆ ವಿವರಿಸಿದರು.
Advertisement
Advertisement
ಮಸೀದಿ ಸಂದರ್ಶನ ಕಾರ್ಯಕ್ರಮಕ್ಕೆ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ಚಾಲನೆ ನೀಡಿದರು. ಮಸೀದಿಗೆ ಭೇಟಿ ನೀಡಿದ ಗವಿಸಿದ್ದೇಶ್ವರ ಸ್ವಾಮೀಜಿ ಅಲ್ಲಿನ ವ್ಯವಸ್ಥೆ ಹಾಗೂ ಪ್ರಾರ್ಥನೆ ಮಾಡುವ ಕುರಿತು ಸಮಗ್ರ ಮಾಹಿತಿ ಪಡೆದುಕೊಂಡರು. ಜೊತೆಗೆ ಮುಸ್ಲಿಂ ಬಾಂಧವರು ಹಿಂದೂ ಸಮಾಜದ ಎಲ್ಲ ಸಮುದಾಯದವರಿಗೂ ಸಹ ಮಸೀದಿಗೆ ಆಹ್ವಾನ ನೀಡಿದ್ದರು. ಮುಸ್ಲಿಂ ಬಾಂಧವರ ಕರೆಗೆ ಓಗೊಟ್ಟು ಬಂದಿದ್ದ ನೂರಾರು ಹಿಂದೂಗಳಿಗೂ ಸಹ ಮಸೀದಿ ಹಾಗೂ ಇಸ್ಲಾಂ ಧರ್ಮದ ಕುರಿತು ಮಾಹಿತಿ ನೀಡಿಲಾಯಿತು. ಹಿಂದೂ ಪುರಷರಷ್ಟೇ ಅಲ್ಲದೆ ಮಹಿಳೆಯರೂ ಸಹ ಮಸೀದಿ ಸಂದರ್ಶನದಲ್ಲಿ ಭಾಗಿಯಾಗಿದ್ದು ವಿಶೇಷವಾಗಿದೆ.
Advertisement
ಈ ಕಾರ್ಯಕ್ರಮವು ಬೆಳಗ್ಗೆ 11 ಗಂಟೆಗೆ ಆರಂಭವಾಗಿ ಸಂಜೆ 5 ಗಂಟೆವರೆಗೂ ನಡೆಯಿತು. ಈ ವೇಳೆ ಸಾವಿರಾರು ಹಿಂದೂಗಳು ಮಸೀದಿಗೆ ಭೇಟಿ ನೀಡಿದರು. ಒಟ್ಟಿನಲ್ಲಿ ಸಮಾಜದಲ್ಲಿ ಧರ್ಮ, ಧರ್ಮಗಳ ನಡುವೆ ಸಾಮರಸ್ಯ ಮೂಡಿಸುವ ಉದ್ದೇಶದಿಂದ ಕೊಪ್ಪಳದಲ್ಲಿ ಮಸೀದಿ ಸಂದರ್ಶನ ಹಮ್ಮಿಕೊಂಡಿದ್ದು ನಿಜಕ್ಕೂ ಪ್ರಶಂಸನಿಯ ಕೆಲಸವಾಗಿದೆ.