ಕೊಪ್ಪಳ: ನಗರದಲ್ಲಿನ ಧೂಳಿನ ಸಮಸ್ಯೆ ಅರಿಯಲು ಜಿಲ್ಲಾ ಉಸ್ತುವಾರಿ ಸಚಿವ ಆರ್.ಶಂಕರ್ ಅವರು ಬೈಕ್ ಏರಿ ಪರಿಶೀಲನೆ ಮಾಡಿದ್ದಾರೆ.
ಹೌದು, ಕೊಪ್ಪಳದ ಪ್ರಮುಖ ರಸ್ತೆಗಳಲ್ಲಿ ದಿನೇ-ದಿನೇ ಧೂಳು ಹೆಚ್ಚಾಗುತ್ತಿದ್ದು, ಸವಾರರು, ಚಾಲಕರು ಸೇರಿದಂತೆ ಸಾರ್ವಜನಿಕರು ಪರದಾಡುತ್ತಿದ್ದಾರೆ. ಸಮಸ್ಯೆ ಗಮನಕ್ಕೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಸಚಿವರು ಅಧಿಕಾರಿಗಳು, ಸ್ಥಳೀಯ ಶಾಸಕರ ಜೊತೆಗೆ ಪರಿಶೀಲನೆ ನಡೆಸಿದ್ದಾರೆ.
ನಗರದಲ್ಲಿ ಸಚಿವ ಆರ್.ಶಂಕರ್ ಅವರು ಇಂದು ಸುದ್ದಿಗೋಷ್ಠಿ ಕರೆದಿದ್ದರು. ಈ ವೇಳೆ ರಸ್ತೆ ಸಮಸ್ಯೆಯ ಕುರಿತು ಪತ್ರಕರ್ತರು ಪ್ರಶ್ನಿಸುತ್ತಿದ್ದಂತೆ ಅಲ್ಲಿಂದ ಹೊರ ನಡೆದ ಸಚಿವ ಶಂಕರ್, ಅಲ್ಲಿಯೇ ಇದ್ದ ಪತ್ರಕರ್ತರೊಬ್ಬರ ಬೈಕ್ ಏರಿ, ಹೆಲ್ಮೆಟ್ ಹಾಕಿಕೊಳ್ಳದೇ ರೈಡ್ ಮಾಡಿದರು. ಕೊಪ್ಪಳ ಬಸ್ ನಿಲ್ದಾಣದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಬೈಕ್ ಚಾಲನೆ ಮಾಡಿ, ಸಮಸ್ಯೆಯನ್ನು ಅರಿತರು.
ಈ ವೇಳೆ ಸಚಿವ ಆರ್.ಶಂಕರ್ ಅವರಿಗೆ ಕೊಪ್ಪಳದ ಶಾಸಕ ರಾಘವೇಂದ್ರ ಹಿಟ್ನಾಳ್ ಸೇರಿದಂತೆ ಅಧಿಕಾರಿಗಳು ಸಾಥ್ ನೀಡಿದರು. ಜಿಲ್ಲಾಧಿಕಾರಿ ಕಚೇರಿ ತಲುಪಿದ ಸಚಿವರು, ಅಧಿಕಾರಿಗಳ ಬೇಜವಾಬ್ದಾರಿ ವಿರುದ್ಧ ಗರಂ ಆದರು. ತಕ್ಷಣವೇ ಸಮಸ್ಯೆಯನ್ನು ಸರಿಪಡಿಸಬೇಕು ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv