ಕೊಪ್ಪಳ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಅನ್ನಭಾಗ್ಯ (Annabhagya) ಯೋಜನೆ ಭ್ರಷ್ಟರ ಪಾಲಾಗುತ್ತಿದೆ ಎಂದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಬಡವರ ಹೊಟ್ಟೆ ಸೇರಬೇಕಿದ್ದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಕಳ್ಳರು ಅಕ್ರಮವಾಗಿ ಕದ್ದು ಮಾರಾಟ ಮಾಡಲು ಮುಂದಾದ ಲಾರಿಯನ್ನು ಕೊಪ್ಪಳದ ಮುನಿರಾಬಾದ್ ಪೊಲೀಸರು (Munirabad Police) ವಶಕ್ಕೆ ಪಡೆದಿದ್ದಾರೆ.
ಕಳೆದ 16 ರಂದು ಬೆಳಗಿನ ಜಾವ ಕೊಪ್ಪಳ ತಾಲೂಕಿನ ಕೂಕನಪಳ್ಳಿ ಗ್ರಾಮದ ಬಳಿ ಪೊಲೀಸರು ಲಾರಿಯನ್ನು ತಡೆಯುತ್ತಿದ್ದಂತೆ ಚಾಲಕ ಲಾರಿಯನ್ನ ರಸ್ತೆಯಲ್ಲಿ ಬಿಟ್ಟು ಪರಾರಿಯಾಗಿದ್ದಾನೆ. ಸದ್ಯ ಲಾರಿಯಲ್ಲಿರುವ ಅಕ್ಕಿ ಎಲ್ಲಿಗೆ ಸಾಗಾಟವಾಗುತ್ತಿತ್ತು ಎಂಬುದನ್ನು ಮುನಿರಾಬಾದ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ನವರಾತ್ರಿಯಿಂದಲೇ ಹೊಸ GST ದರ ಜಾರಿ; ಯಾವ ವಸ್ತುಗಳು ಅಗ್ಗ, ಯಾವುದು ದುಬಾರಿ? – ಇಲ್ಲಿದೆ ಪೂರ್ಣ ಪಟ್ಟಿ
ಇನ್ನು ಆಹಾರ ಇಲಾಖೆಯ ಅಧಿಕಾರಿಗಳು ಲಾರಿಯಲ್ಲಿರೋ ಅಕ್ಕಿಯ ಲೆಕ್ಕ ಕೊಡುವಾಗ 8 ಟನ್ ಎಂದು ತೋರಿಸಿ ಪೊಲೀಸ್ ಇಲಾಖೆಗೆ ಮಂಕು ಬೂದಿ ಎರಚಲು ಮುಂದಾಗಿದ್ದಾರೆ. 16 ಚಕ್ರದ ವಾಹನದ ಸಾಮರ್ಥ್ಯ 35 ಟನ್, ಪೂರ್ತಿ ಲೋಡೆಡ್ ಲಾರಿಯಲ್ಲಿ 8 ಟನ್ ಮಾತ್ರ ಇದೆ ಎಂದು ಪೊಲೀಸ್ ಇಲಾಖೆಗೆ ಆಹಾರ ನಿರೀಕ್ಷಕ ರವಿಚಂದ್ರ ಲೆಕ್ಕ ಕೊಟ್ಟಿದ್ದಾರೆ.
ಸೆಪ್ಟಂಬರ್ 16 ರಂದು ವಾಹನ ಸಿಕ್ಕರೂ ಮೂರು ದಿನಗಳು ಕಳೆದ್ರು, ಈ ಅಕ್ಕಿಯನ್ನ ಸೀಜ್ ಮಾಡಿ, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಆಹಾರ ಇಲಾಖೆ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ.
ವಶಕ್ಕೆ ಪಡೆದ ಲಾರಿಯಲ್ಲಿದ್ದ ಅಕ್ಕಿ ಪ್ರಮಾಣ ಎಷ್ಟು, ಲಾರಿ ಚಾಲಕ, ಮಾಲೀಕ ಯಾರು? ಎಲ್ಲಿಗೆ ಸಾಗಾಟ ಮಾಡಲಾಗ್ತಿತ್ತು? ಎಲ್ಲವನ್ನೂ ವರದಿ ಮಾಡಿ ಪೊಲೀಸ್ ಇಲಾಖೆಗೆ ದೂರು ನೀಡಿ, ಎಫ್‌ಐಆರ್ ದಾಖಲಿಸಬೇಕಾಗಿರೋದು ಆಹಾರ ಇಲಾಖೆ ಅಧಿಕಾರಿಗಳ ಕೆಲಸವಾಗಿದೆ. ಆದ್ರೆ ಕಳೆದ ಮೂರು ದಿನಗಳಿಂದ ಆಹಾರ ಇಲಾಖೆ ಅಧಿಕಾರಿಗಳು, ಈ ಯಾವುದೇ ಕೆಲಸ ಮಾಡಿಲ್ಲ. ಲಾರಿಯಲ್ಲಿರುವ ಅಕ್ಕಿಯ ಪ್ರಮಾಣ ಕೂಡಾ ಗೊತ್ತಿಲ್ಲ. ಕೇವಲ 8 ಟನ್ ಅಕ್ಕಿ ಎಂದು ನಾಮಕಾವಸ್ಥೆಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.