ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳ ಎಂದೇ ಹೆಸರಾದ ಕೊಪ್ಪಳದ (Koppal) ಅಭಿನವ ಗವಿಮಠದ (Gavi Mutt) ಜಾತ್ರೆಯಲ್ಲಿ ಮಿರ್ಚಿ ಘಮಲು ಕಾಣಿಸಿತ್ತು. ಇಂದು ಸರಿಸುಮಾರು 5 ರಿಂದ 6 ಲಕ್ಷ ಜನರಿಗೆ ಪ್ರಸಾದ ರೂಪದಲ್ಲಿ ಮಿರ್ಚಿ ರೂಪದಲ್ಲಿ ಬಜ್ಜಿ ನೀಡಲಾಗಿತ್ತು.
ನಿರಂತರವಾಗಿ ಈ ಜಾತ್ರೆಯಲ್ಲಿ 20 ದಿನಗಳ ಕಾಲ ದಾಸೋಹ ನಡೆಯತ್ತದೆ. ಲಕ್ಷಾಂತರ ಭಕ್ತರು ಗವಿ ಸಿದ್ದನ ಆಶೀರ್ವಾದ ಪಡೆದು, ದಾಸೋಹದಲ್ಲಿ ಪ್ರಸಾದ ಸ್ವೀಕಾರ ಮಾಡುತ್ತಾರೆ. ಮಂಗಳವಾರ (ಜ.6) ಜಾತ್ರೆಗೆ ಬಂದ ಲಕ್ಷ ಲಕ್ಷ ಮಂದಿಗೆ ಮಿರ್ಚಿಯನ್ನ ಪ್ರಸಾದ ರೂಪದಲ್ಲಿ ನೀಡಲಾಯಿತು. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಅಜ್ಜನ ಸೇವೆಗೆ 25ಕ್ಕೂ ಹೆಚ್ಚು ಗ್ರಾಮದಿಂದ ಬಂದು ಮಿರ್ಚಿ ಬಜ್ಜಿ ಮಾಡಿದ್ದಾರೆ. ಈ ಬಾರಿ ಮಿರ್ಚಿಗೆ ಸುಮಾರು 25 ಕ್ಷಿಂಟಾಲ್ ಕಡಲೆ ಹಿಟ್ಟು, 22 ಕ್ವಿಂಟಾಲ್ ಹಸಿ ಮೆಣಸಿನಕಾಯಿ, 25 ಕೆ.ಜಿ ಅಜವಾನ, 25 ಕೆ.ಜಿ ಸೋಡಾಪುಡಿ, 75 ಕೆ.ಜಿ ಉಪ್ಪು, 60 ಸಿಲಿಂಡರ್, 12 ಬ್ಯಾರೆಲ್ ಒಳ್ಳೆಣ್ಣಿ ಬಳಕೆ ಮಾಡಿಕೊಂಡು ಮಿರ್ಚಿ ಬಜ್ಜಿ ತಯಾರಿಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಿನ ಪಾಸ್‌ಪೋರ್ಟ್ ಕಚೇರಿಗೆ ಬಾಂಬ್ ಬೆದರಿಕೆ ಮೇಲ್
ಇನ್ನು ಕೊಪ್ಪಳದ ಗವಿ ಮಠದ ಜಾತ್ರೆ ಅಂದ್ರೆ ಅದು ದಾಸೋಹಕ್ಕೆ ಹೆಸರಾಗಿದೆ. ಈ ಬಾರಿ ಜಾತ್ರೆ ಹಿನ್ನೆಲೆ ಐದು ದಿನ ಮೊದಲೇ ದಾಸೋಹ ಆರಂಭ ಮಾಡಲಾಗಿದೆ. ಜ.1ರಂದು ಅಧಿಕೃತವಾಗಿ ದಾಸೋಹಕ್ಕೆ ಚಾಲನೆ ನೀಡಲಾಗಿದ್ದು, ಇಂದಿಗೆ ದಾಸೋಹ ಆರಂಭವಾಗಿ ಆರು ದಿನ ಆಯ್ತು, ನಿತ್ಯ ದಾಸೋಹಕ್ಕೆ ಲಕ್ಷ ಲಕ್ಷ ಮಂದಿ ಬರುತ್ತಿದ್ದಾರೆ. ಆದ್ರೆ ಜಾತ್ರೆ ಮರುದಿನ ಸಿಗುವ ಮಿರ್ಚಿ ಬಜ್ಜಿನೂ ದಾಸೋಹದಲ್ಲಿ ಫೇಮಸ್. ಕಳೆದ 11 ವರ್ಷಗಳಿಂದ ಸಮಾನ ಮನಸ್ಕರ ಬಳಗದಿಂದ ಮಿರ್ಚಿ ಬಜ್ಜಿ ಸೇವೆಯನ್ನ ಮಾಡಲಾಗ್ತಿದೆ. ಕಳೆದ 11 ವರ್ಷದ ಹಿಂದೆ ಸಣ್ಣದಾಗಿ ಆರಂಭವಾದ ಮಿರ್ಚಿ ದಾಸೋಹ, ಇಂದು ಲಕ್ಷ ಲಕ್ಷ ಮಂದಿಗೆ ತಲುಪುತ್ತಿದೆ. ಯಾರಿಂದಲೂ ಹಣ ಪಡೆಯದೇ ಸಮಾನ ಮನಸ್ಕರ ತಂಡದ ಸದಸ್ಯರು ಸ್ವಂತ ಹಣ ಹಾಕಿ, ಮಿರ್ಚಿಯನ್ನ ಉಣ ಬಡಿಸುತ್ತಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಮಿರ್ಚಿ ಮಂಡಕ್ಕಿ ಅಂದ್ರೆ ಬಲು ಇಷ್ಟ. ಊಟದಲ್ಲಿ ಮಿರ್ಚಿಯಿಲ್ಲದೆ ಊಟ ಮಾಡೋದು ಇಲ್ಲ. ನಾವು ಯಾಕೆ ಗವಿಮಠದ ಜಾತ್ರೆಯಲ್ಲಿ ಮಿರ್ಚಿ ಕೊಡಬಾರದು ಅನ್ನೋ ಉದ್ದೇಶದಿಂದ ಮಿರ್ಚಿ ಬಜ್ಜಿ ದಾಸೋಹ ಸೇವೆಯನ್ನ ಆರಂಭಿಸಿದ್ದಾರೆ. ವರ್ಷದಿಂದ ವರ್ಷಕ್ಕೆ ಮಿರ್ಚಿಗೆ ಬೇಕಾಗಿರೋ ಸಾಮಗ್ರಿಗಳು ಹೆಚ್ಚಾಗುತ್ತಲೇ ಇವೆ. ಕಳೆದ ವರ್ಷ 20 ಕ್ವಿಂಟಾಲ್ ಹಿಟ್ಟು ಬಳಕೆ ಮಾಡಿದ್ರೆ ಈ ಬಾರಿ 25 ಕ್ವಿಂಟಾಲ್ ಹಿಟ್ಟು ಬಳಕೆ ಮಾಡುತ್ತಿದ್ದಾರೆ. ಇನ್ನು ದಾಸೋಹದಲ್ಲಿ ಮಿರ್ಚಿ ಬಜ್ಜಿ ಸವಿದ ಭಕ್ತರು ಸಖತ್ ಖುಷಿಯಾಗಿದ್ದಾರೆ. ಇದನ್ನೂ ಓದಿ: ಕಿಚ್ಚನ ಪತ್ನಿಯ ಹುಟ್ಟುಹಬ್ಬ – ಹೊಸ ಪ್ರತಿಭೆಗಳಿಗೆ ಅವಕಾಶ ಘೋಷಣೆ

