ಕೊಪ್ಪಳ: ವಿರುಪಾಪುರ ಗಡ್ಡೆ ನಿರಾಶ್ರಿತರಿಗೆ ತಾಲೂಕು ಆಡಳಿತದ ವತಿಯಿಂದ ಉಚಿತ ನಿವೇಶನಗಳ ವಿತರಣೆ ಮಾಡಬೇಕಾದ ಕಾಯಕವು 3 ವರ್ಷಗಳು ಕಳೆದರೂ ಸಹ ದಾಖಲೆಗಳಲ್ಲಿಯೇ ಉಳಿದುಕೊಂಡಿದೆ. ಇದರಿಂದಾಗಿ ನಿರಾಶ್ರಿತರು ಸಮೀಪದ ಗುಡ್ಡಗಾಡು ಪ್ರದೇಶದಲ್ಲಿ ಜೀವನ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕೊಪ್ಪಳದ ಗಂಗಾವತಿ ತಾಲೂಕಿನ ವಿರುಪಾಪುರ ಗಡ್ಡೆಯಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದ ಕುಟುಂಬಗಳನ್ನು ಒಕ್ಕಲೆಬ್ಬಿಸಿ, ಅರಣ್ಯ ಭೂಮಿಯನ್ನು ರಕ್ಷಣೆ ಮಾಡಲಾಗಿತ್ತು. ಪರ್ಯಾಯವಾಗಿ ಗಡ್ಡೆಯ ನಿರಾಶ್ರಿತರಿಗೆ ಸೂರು ಕಲ್ಪಿಸಿಕೊಡಲಾಗುವುದು ಎಂದು ತಾಲೂಕು ಆಡಳಿತವು ಮೂರು ವರ್ಷಗಳ ಹಿಂದೆ ಆದೇಶವನ್ನು ಹೊರಡಿಸಿತ್ತು. ಆಗಿನಿಂದ ಇಲ್ಲಿಯವರೆಗೂ ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯಿತಿ ಇಲಾಖೆ ಅಧಿಕಾರಿಗಳು ನಿವೇಶನಗಳನ್ನು ಗುರುತಿಸುವ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ.
Advertisement
Advertisement
ತಾಲೂಕು ಆಡಳಿತದ ವತಿಯಿಂದ ತಾಲೂಕಿನ ಕರಿಯಮ್ಮ ಗಡ್ಡಿ ಹಾಗೂ ತಿಮ್ಮಲಾಪೂರ ಗ್ರಾಮದಲ್ಲಿ ನವೇಶನಗಳನ್ನು ಗುರುತಿಸಲಾಗಿತ್ತಿದೆ ಎಂದು ದಾಖಲೆಗಳನ್ನು ತೊರಿಸಲಾಗುತ್ತಿದೆ. ಆದರೆ ಮೂರು ವರ್ಷಗಳು ಕಳೆದರೂ ಸಹ ಇದುವರೆಗೂ ನಿರಾಶ್ರಿತರಿಗೆ ನಿವೇಶನಗಳು ಹಂಚಿಕೆಯನ್ನು ಮಾಡದೆ ಅಧಿಕಾರಿಗಳು ಕಾಲಹರಣವನ್ನು ಮಾಡುತ್ತಿದ್ದಾರೆ ಎನ್ನುವ ಆರೋಪಗಳು ನಿರಾಶ್ರಿತ ಕುಟುಂಬಗಳಿಂದ ಕೇಳಿ ಬರುತ್ತಿವೆ.
Advertisement
ವಿರುಪಾಪುರ ಗಡ್ಡೆಯಲ್ಲಿನ ಸರ್ವೆ ನಂಬರ್ 49ರಲ್ಲಿನ ಅರಣ್ಯ ಭೂಮಿಯಲ್ಲಿ ಮನೆಗಳನ್ನು ಹಾಗೂ ಸಣ್ಣಪುಣ್ಣ ರೆಸ್ಟೋರೆಂಟ್‍ಗಳನ್ನು ನಿರ್ಮಿಸಿಕೊಂಡು ಕೂಲಿಕಾರರ ಕುಟುಂಬಗಳು ಉಪ ಜೀವನವನ್ನು ನಡೆಸುತ್ತಿದ್ದರು. ದಾಖಲೆಗಳು ಇಲ್ಲದೆ ಅರಣ್ಯ ಭೂಮಿಯಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿರುವ ಕಾರಣಕ್ಕೆ ಹಂಪಿ ಪ್ರಾಧಿಕಾರ ಇಲಾಖೆ, ಕಂದಾಯ ಇಲಾಖೆ, ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಚರಣೆಯನ್ನು ನಡೆಸಿ, ಗಡ್ಡೆಯಲ್ಲಿ ವಾಸವಾಗಿದ್ದ 70 ಕುಟುಂಬಗಳನ್ನು 2016 ಮೇ 2ರಂದು ಒಕ್ಕಲೆಬ್ಬಿಸಲಾಗಿತ್ತು. ಬಡ ಕುಟುಂಬದವರು ನಿರ್ಮಿಸಿಕೊಂಡಿದ್ದ ಮನೆಗಳನ್ನು ತೆರವುಗೊಳಿಸಿ, ನೆಲಸಮ ಮಾಡಲಾಗಿತ್ತು. ಆಗ ಈ 70 ಕುಟುಂಬಗಳು ಬೀದಿಗೆ ಬಿದ್ದಿದ್ದವು.
Advertisement
ನ್ಯಾಯಕ್ಕಾಗಿ ತಾಲೂಕು ಆಡಳಿತಕ್ಕೆ ಮೊರೆ ಹೋಗಿರುವುದರಿಂದ ಮಾನವೀಯತೆ ದೃಷ್ಟಿಯಿಂದ ನಿರಾಶ್ರಿತರ 70 ಕುಟುಂಬಗಳಿಗೆ ನಿವೇಶನವನ್ನು ಕಲ್ಪಿಸಲಾಗುವುದು ಎಂದು ಆದೇಶವನ್ನು ಹೊರಡಿಸಿತ್ತು. ಆದೇಶದಂತೆ ನಿವೇಶನಗಳನ್ನು ನೀಡುತ್ತಾರೆ ಎನ್ನುವ ಭರವಸೆಯಲ್ಲಿಯೇ ನಿರಾಶ್ರಿತರು ಕಾಲ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
70 ಬಡ ಕುಟುಂಬಗಳು ವಿರುಪಾಪುರ ಗಡ್ಡೆ ಸಮೀಪದ ಇರುವ ಬೆಟ್ಟದಲ್ಲಿ ಕೆಲ ಕುಟುಂಬಗಳು ತಾತ್ಕಾಲಿಕ ಗುಡಿಸಲುಗಳನ್ನು ನಿರ್ಮಿಸಿಕೊಂಡು ಉಪ ಜೀವನವನ್ನು ನಡೆಸುತ್ತಿದ್ದಾರೆ. ಕೆಲ ಕುಟುಂಬಗಳು ಕರಿಯಮ್ಮನ ಗಡ್ಡೆಯಲ್ಲಿ ಇರುವ ಸಮೂದಾಯ ಭವನದಲ್ಲಿ ಮನೆಯ ವಸ್ತುಗಳನ್ನು ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ. ಮೂಲಭೂತ ಸೌಲಭ್ಯಗಳಾದ ಚರಂಡಿ, ವ್ಯವಸ್ಥಿತ ರಸ್ತೆ, ಶುದ್ಧ ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಸಂಪರ್ಕ ಇಲ್ಲದೆ ಇಲ್ಲಿನ ನಿರಾಶ್ರಿತ ಕುಟುಂಬಗಳು ಪ್ರತಿ ದಿನ ಸಂಕಷ್ಟವನ್ನು ಎದುರಿಸುತ್ತಿವೆ. ಯಾವ ಚುನಾಯಿತ ಪ್ರತಿನಿಧಿಯು ಸಹ ಇತ್ತ ಗಮನ ಹರಿಸುತ್ತಿಲ್ಲ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.