ಕೊಪ್ಪಳ: ಯಾದಗಿರಿ ಜಿಲ್ಲೆಯ ನಾರಾಯಣಪುರ ಜಲಾಶಯ ನಿರ್ಮಾಣದ ಬಳಿಕ ಆ ಭಾಗದಲ್ಲಿ ಹೆಚ್ಚಾಗಿ ಭತ್ತ ಬೆಳೆದು ಕಾರಟಗಿ, ಗಂಗಾವತಿ ಮಾರುಕಟ್ಟೆಗೆ ಬರುತ್ತಿರುವೆ. ಇತ್ತ ತುಂಗಾಭದ್ರ ಜಲಾಶಯ ಪಾತ್ರದ ರೈತರು ಹೆಚ್ಚಿನ ಪ್ರಮಾಣದಲ್ಲಿ ಭತ್ತ ಬೆಳೆದಿದ್ದರಿಂದ ಬೆಲೆ ಕುಸಿದಿದೆ. ಹೀಗಾಗಿ ರೈತರು ಭತ್ತ ಖರೀದಿ ಕೇಂದ್ರಕ್ಕೆ ಒತ್ತಾಯಿಸುತ್ತಿದ್ದಾರೆ.
ಮುಂಗಾರು ಮಳೆ ತಡವಾಗಿ ಆರಂಭವಾಗಿ ಮೂರೇ ದಿನದಲ್ಲಿ ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದರಿಂದ ಎಡ ಮತ್ತು ಬಲದಂಡೆ ಕಾಲುವೆಗೆ ಹೆಚ್ಚಿನ ಪ್ರಮಾಣದ ನೀರು ಹರಿ ಬಿಡಲಾಗಿತ್ತು. ರೈತರು ಮೊದಲ ಬೆಳೆಯನ್ನು ಬೆಳೆದಿದ್ದು, ಈಗ ಕಟಾವಿಗೆ ಬಂದಿದೆ. ವ್ಯಾಪಕ ಪ್ರಮಾಣದಲ್ಲಿ ಮಾರುಕಟ್ಟೆಗೆ ಆವಕವಾಗಿದ್ದರಿಂದ ಬೆಲೆಯಿಲ್ಲದೆ ಪರಿತಪಿಸುವಂತಾಗಿದೆ. ಇದು ಭತ್ತ ಬೆಳೆಗಾರರನ್ನು ಕಂಗೆಡಿಸಿದೆ.
Advertisement
Advertisement
ಕಳೆದ ಕೆಲವು ವರ್ಷಗಳಿಂದ ಮಳೆ ಕೊರತೆಯಿಂದಾಗಿ ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಕುಂಠಿತಗೊಂಡಿತ್ತು. ಆದರೆ ಈ ವರ್ಷ ಉತ್ತಮ ಮಳೆಯಾಗಿದ್ದರಿಂದ ಹೆಚ್ಚು ಇಳುವರಿ ಬಂದಿದೆ. ಇದರಿಂದ ಮಾರುಕಟ್ಟೆಯಲ್ಲಿ ಬೆಲೆ ಕುಸಿತಗೊಂಡು ರೈತರು ಆತಂಕ ಪಡುವಂತಾಗಿದೆ.
Advertisement
ಮಾರುಕಟ್ಟೆಯಲ್ಲಿ ಪ್ರತಿ 75 ಕೆಜಿ ಭತ್ತದ ಚೀಲಕ್ಕೆ ಸರ್ಕಾರ 1380 ರೂ. ದರ ನಿಗದಿ ಮಾಡಿದೆ. ಆದರೆ ದಲ್ಲಾಳಿಗಳು ಮತ್ತು ವ್ಯಾಪಾರಸ್ಥರು 1200 ರೂ. ನೀಡಿ ಖರೀದಿಸುತ್ತಿದ್ದಾರೆ. ಗುಣಮಟ್ಟ ಮತ್ತು ವಿವಿಧ ಕಾರಣಗಳನ್ನು ನೀಡಿ ಇನ್ನೂ ಕಡಿಮೆ ಬೆಲೆಗೆ ಕೇಳುತ್ತಿರುವುದರಿಂದ ರೈತರ ಸಂಕಷ್ಟ ತೀವ್ರವಾಗಿದೆ. ಅಷ್ಟೇ ಅಲ್ಲದೆ ಯಾದಗಿರಿ ಸೇರಿದಂತೆ ವಿವಿಧ ಭಾಗಗಳಿಂದ ಹೆಚ್ಚು ಪ್ರಮಾಣದಲ್ಲಿ ಭತ್ತ ಆವಕವಾಗುತ್ತಿದೆ. ಇದರಿಂದ ಭತ್ತಕ್ಕೆ ಬೆಲೆ ಕಡಿಮೆಯಾಗಿದ್ದು, ರೈತರು ಬೆಂಬಲ ಬೆಲೆ ಮತ್ತು ಖರೀದಿ ಕೇಂದ್ರ ಆರಂಭಿಸುವಂತೆ ಒತ್ತಾಯಿಸುತ್ತಿದ್ದಾರೆ.
Advertisement
ಕೊಪ್ಪಳ ತಾಲೂಕಿನ ಹಿಟ್ನಾಳ ಹೋಬಳಿ ಮತ್ತು ಗಂಗಾವತಿ, ಕಾರಟಗಿ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭತ್ತ ಬೆಳೆದಿದ್ದಾರೆ. ಭತ್ತದ ಪ್ರಮುಖ ಮಾರುಕಟ್ಟೆ ಕೇಂದ್ರವಾಗಿರುವ ಗಂಗಾವತಿ ತಾಲೂಕಿನಲ್ಲಿ 100ಕ್ಕೂ ಹೆಚ್ಚು ಅಕ್ಕಿ ಮಿಲ್‍ಗಳು ಕಾರ್ಯ ನಿರ್ವಹಿಸುತ್ತಿದ್ದು, ಎಲ್ಲಾ ಭಾಗದಿಂದ ಭತ್ತ ಮಾರಾಟಕ್ಕೆ ರೈತರು ಇಲ್ಲಿಗೆ ಬರುತ್ತಿದ್ದಾರೆ. ಇದರಿಂದ ತೀವ್ರ ಪೈಪೋಟಿ ಎದುರಾಗಿದ್ದು, ಬೆಲೆ ಕಡಿಮೆಯಾಗಿದೆ.