ಕೊಪ್ಪಳ: ಈ ಬಾರಿ ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದರಿಂದ ವರ್ಷಕ್ಕೆ 2 ಬೆಳೆ ಬೆಳೆಯಬಹುದು ಅಂತ ರೈತರು ಸಂತಸದಲ್ಲಿದ್ದರು. ರೈತರ ಖುಷಿಗೆ ಡ್ಯಾಂ ಅಧಿಕಾರಿಗಳು ತಣ್ಣೀರೆರಚಿದ್ದಾರೆ. ಕೊಪ್ಪಳ, ಬಳ್ಳಾರಿ, ರಾಯಚೂರು, ಜನರ ಜೀವನಾಡಿ ಆಗಿರುವ ಟಿಬಿ ಡ್ಯಾಂನ ನೀರಿಗೆ ಆಂಧ್ರದ ಅಧಿಕಾರಿಗಳು ಕನ್ನ ಹಾಕ್ತಿದ್ದಾರೆ. ಅಕ್ರಮವಾಗಿ ಆಂಧ್ರಕ್ಕೆ ನೀರು ಹರಿಸಲು ಡ್ಯಾಂನ ಆಡಳಿತ ಮಂಡಳಿಯ ಅಧಿಕಾರಿಗಳೇ ಶಾಮೀಲಾಗಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಕೊಪ್ಪಳ, ಬಳ್ಳಾರಿ, ರಾಯಚೂರು, ಜನರ ಜೀವನಾಡಿ ಆಗಿರುವ ತುಂಗಭದ್ರಾ ಜಲಾಶಯದಲ್ಲಿ ಆಂಧ್ರದ ಅಧಿಕಾರಿಗಳು ನೀರಿಗೆ ಕನ್ನ ಹಾಕುತ್ತಿದ್ದಾರೆ. ಸುಮಾರು ವರ್ಷಗಳಿಂದ ತುಂಗಭದ್ರಾ ಜಲಾಶಯದ ನೀರು ಅಕ್ರಮವಾಗಿ ಆಂಧ್ರಪ್ರದೇಶದ ಪಾಲಾಗುತ್ತಿದೆ. ಇದರಲ್ಲಿ ಖುದ್ದು ಜಲಾಶಯದ ಆಡಳಿತ ಮಂಡಳಿಯ ಅಧಿಕಾರಿಗಳೇ ಶಾಮೀಲಾಗಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.
Advertisement
Advertisement
ಈ ರೀತಿ ಆರೋಪ ಕೇಳಿ ಬರುವುದಕ್ಕೂ ಒಂದು ಕಾರಣ ಇದೆ. ತುಂಗಾಭದ್ರಾ ಜಲಾಶಯದ ಸಾಮರ್ಥ್ಯ 133 ಟಿ.ಎಂ.ಸಿ ಹೊಂದಿದ್ದು, ಜಲಾಶಯದಲ್ಲಿ 33 ಟಿ.ಎಂ.ಸಿ ಹೂಳು ತುಂಬಿರುವುದರಿಂದ 100 ಟಿ.ಎಂ.ಸಿ ಯಷ್ಟು ನೀರು ಸಂಗ್ರಹವಾಗುತ್ತದೆ. ಪ್ರತಿ ಸಾರಿ 100 ಟಿ.ಎಂ.ಸಿ ನೀರು ಜಲಾಶಯದಲ್ಲಿ ಸಂಗ್ರಹವಾದಾಗ ರೈತನ ಮೊಗದಲ್ಲಿ ಮಂದಹಾಸ ಮೂಡುತ್ತದೆ. ಯಾಕಂದ್ರೆ ಒಂದು ವರ್ಷದಲ್ಲಿ ಆತ 2 ಸಾರಿ ಭತ್ತ ಬೆಳೆಯಲು ಕಾಲುವೆಗೆ ನೀರು ಬಿಡಲಾಗುತ್ತಿತ್ತು. ಆದ್ರೆ ಈ ಬಾರಿ ಜಲಾಶಯ ಭರ್ತಿಯಾಗಿದ್ದರು 2 ನೇ ಬೆಳೆಗೆ ನೀರು ಬಿಡುವುದು ಅನುಮಾನ ಎಂದು ಹೇಳಲಾಗುತ್ತಿದೆ.
Advertisement
ಇದೇ ಮೊದಲ ಸಾರಿ ಕೃಷಿ ಚಟುವಟಿಕೆ ಆರಂಭವಾಗಿ ಒಂದು ತಿಂಗಳವೆರೆಗೂ ಜಲಾಶಯ ಭರ್ತಿಯಲ್ಲಿತ್ತು. ಒಳ ಹರಿವಿನ ಪ್ರಮಾಣವು ಹೆಚ್ಚಾಗಿತ್ತು. ಅಂದಿನ ಲೆಕ್ಕಾಚಾರ ನೋಡಿದ್ರೆ ಮುಂದಿನ ಬೆಳೆಗೆ ಸಲೀಸಾಗಿ ನೀರು ಬಿಡಬಹುದಿತ್ತು. ಆದ್ರೆ ಇದೀಗ ಒಮ್ಮಿಂದೊಮ್ಮಲೆ ಜಲಾಶಯ ಆಡಳಿತ ಮಂಡಳಿ ಸುಳ್ಳು ಲೆಕ್ಕಾಚಾರ ಸೃಷ್ಟಿಸಿ ರಾಜ್ಯದ ರೈತರಿಗೆ ಅನ್ಯಾಯ ಮಾಡಲು ಮುಂದಾಗಿದೆ. ರಾತ್ರೋರಾತ್ರಿ ಆಂಧ್ರದ ಕಾಲುವೆಗಳಿಗೆ ನೀರು ಬಿಟ್ಟು, ಮುಂದಿನ ಬೆಳೆಗಳಿಗೆ ನೀರು ಅನುಮಾನ ಎಂದು ಹೇಳುತ್ತಿದೆ ಎಂದು ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಎಚ್. ಆರ್. ಶ್ರೀನಾಥ್ ಹೇಳುತ್ತಾರೆ.
Advertisement
ತುಂಗಭದ್ರಾ ಜಲಾಶಯ ಆಡಳಿತ ಮಂಡಳಿಯಲ್ಲಿ ಎಲ್ಲಾ ಆಂಧ್ರ ಮೂಲದ ಅಧಿಕಾರಿಗಳು ಇದ್ದಾರೆ. ಅವರು ಹೇಳಿದ್ದನ್ನೇ ಸರ್ಕಾರ ಕೇಳುವಂತೆ ಆಗಿದೆ. ಆಂಧ್ರ ಮೇಲಿನ ಪ್ರೇಮಕ್ಕೊ ಅಥವಾ ಕಮಿಷನ್ ದಂಧೆಗೊ ಅಧಿಕಾರಿಗಳು ರಾಜ್ಯಕ್ಕೆ ಮೋಸ ಮಾಡುತ್ತಿದ್ದಾರೆ. ಈ ಕುರಿತು ಎಷ್ಟೇ ಸಭೆಗಳು ಈ ಹಿಂದೆ ನೆಡೆದರು ಅವೆಲ್ಲ ವಿಫಲ ಕಂಡಿದ್ದು 3 ಜಿಲ್ಲೆಗಳ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ಗಂಗಾವತಿ ಶಾಸಕ ಪರಣ್ಣ ಮನುವಳ್ಳಿ ಅವರು ಸಹ ಅನುಮಾನ ವ್ಯಕ್ತಪಡಿಸಿ, ಜಲಾಶಯ ಭರ್ತಿಯಾಗಿದ್ದರೂ 2 ನೇ ಬೆಳೆಗೆ ನೀರಿಲ್ಲ ಅನ್ನುತ್ತಿರುವ ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡಿದ್ದಾರೆ. ಎಲ್ಲ ಆಂಧ್ರ ಮೂಲದ ಅಧಿಕಾರಿಗಳು ಇರೋದ್ರಿಂದ ಇಂತಹ ಸಮಸ್ಯೆ ಆಗುತ್ತಿದೆ. ಆಡಳಿತ ಮಂಡಳಿಯನ್ನು ಬದಲಿಸುವ ಕುರಿತು ಸರ್ಕಾರಕ್ಕೆ ಮನವಿಯನ್ನ ಮಾಡುತ್ತೇನೆ. ನಮ್ಮ ರೈತರಿಗೆ ಅನ್ಯಾಯ ಆಗಬಾರದು ಎಂದು ಹೇಳುತ್ತಾರೆ.
ತುಂಗಭದ್ರಾ ಜಲಾಶಯದ ನೀರು ಆಂಧ್ರ ಮೂಲದ ಅಧಿಕಾರಿಗಳಿಂದ ರಾತ್ರೋ ರಾತ್ರಿ ಕಾಲುವೆಗೆ ನೀರನ್ನು ಬಿಡಲಾಗ್ತಿದೆ ಅನ್ನೋ ಆರೋಪ ಸತ್ಯಕ್ಕೆ ಸನಿಹವಾಗಿದೆ. ಇನ್ನೂ ರಾಜಕೀಯ ಪಕ್ಷಗಳು ಸಹ ಹೊಡೆದಾಟ ಬಿಟ್ಟು ಆಗುತ್ತಿರುವ ಅನ್ಯಾಯದ ಬಗ್ಗೆ ತನಿಖೆ ನೆಡೆಸಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ. ಇಲ್ಲಾಂದ್ರೆ ಮುಂದಿನ ದಿನಗಳಲ್ಲಿ ಮತ್ತೆ ರೈತರು ಬೀದಿಗೆ ಇಳಿದು ನೀರಿಗೋಸ್ಕರ ಹೋರಾಟ ಮಾಡುವ ಪರಿಸ್ಥಿತಿ ಉಂಟಾಗೋದ್ರಲ್ಲಿ ಅನುಮಾನವಿಲ್ಲಾ. ಒಟ್ನಲ್ಲಿ 2ನೇ ಬೆಳೆಗೆ ನಿರು ಬರುತ್ತೆ ಅಂತಾ ಕನಸು ಕಂಡಿದ್ದ 3 ಜಿಲ್ಲೆಯ ರೈತರಿಗೆ ಸರ್ಕಾರ ಮಧ್ಯಸ್ಥಿಕೆ ವಹಿಸಿ ನ್ಯಾಯ ಕೊಡಿಸುತ್ತಾ ಅನ್ನೋದನ್ನು ಕಾದುನೋಡಬೇಕಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews