ಕೊಪ್ಪಳ: ಬಾಲಕಿಗೆ ಹಿಗ್ಗಾಮುಗ್ಗಾ ಥಳಿಸಿದ್ದ ಅಂಗನವಾಡಿ ಕಾರ್ಯಕರ್ತೆಯನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.
ಕನಕಗಿರಿ ಯೋಜನೆಯ ಗುಂಡೂರು ಗ್ರಾಮದ ಅಂಗನವಾಡಿಯ ಸಂಗಮ್ಮ ವಸ್ತ್ರದ್ ಅಮಾನತುಗೊಂಡ ಕೇಂದ್ರದ ಕಾರ್ಯಕರ್ತೆ. ಸಂಗಮ್ಮ ಪುಟಾಣಿ ಬಾಲಕಿ ಮೇಲೆ ಅಮಾನವೀಯವಾಗಿ ಥಳಿಸಿದ್ದರು. ಈ ಸಂಬಂಧ ಪಬ್ಲಿಕ್ ಟಿವಿ ವರದಿ ಮಾಡಿತ್ತು. ಇದರಿಂದ ಎಚ್ಚೆತ್ತುಕೊಂಡ ಕನಕಗಿರಿಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆದರೆ ಸಂಗಮ್ಮ ಅಂಗನವಾಡಿಯಲ್ಲಿ ಹಾಗೂ ಗ್ರಾಮದಲ್ಲಿ ಇಲ್ಲದಿರುವ ಕುರಿತು ಅಂಗನವಾಡಿ ಸಹಾಯಕಿ ಹಾಗೂ ಗ್ರಾಮಸ್ಥರಿಂದ ತಿಳಿದು ಬಂದಿದೆ. ಬಳಿಕ ಅಧಿಕಾರಿಗಳು, ಕಾರ್ಯಕರ್ತೆಯನ್ನು ಅಂಗನವಾಡಿಗೆ ಹಾಜರು ಪಡಿಸಿಕೊಳ್ಳದಂತೆ ನಿರ್ಬಂಧ ವಿಧಿಸಿದ್ದಾರೆ.
Advertisement
Advertisement
ಬಾಲಕಿರ ಮನೆಗೆ ಭೇಟಿ ನೀಡಿದ ಅಧಿಕಾರಿಗಳು ವೈದ್ಯಕೀಯ ತಪಾಸಣೆ ಮಾಡಿಸಿ, ಆರೋಗ್ಯವಾಗಿರುವ ಬಗ್ಗೆ ಖಚಿತಪಡಿಸಿಕೊಂಡಿದ್ದಾರೆ. ಕುಟುಂಬದವರಿಗೆ ಸಾಂತ್ವನ ಹೇಳಿ ಮಗುವನ್ನು ಪುನಃ ಅಂಗನವಾಡಿಗೆ ಹಾಜರಾಗುವಂತೆ ಕ್ರಮವಹಿಸಲಾಗಿದೆ. ಅಂಗನವಾಡಿಯಲ್ಲಿ ಪಾಲಕರ ಸಭೆ ನಡೆಸಿ ನಿಯಮಾನುಸಾರ ಕ್ರಮವಹಿಸುವ ಕುರಿತು ಅಧಿಕಾರಿಗಳು ತಿಳಿಸಿದರು.
Advertisement
ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾರ್ಯಕರ್ತೆಯನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ. ಜಿಲ್ಲೆಯ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತಮ್ಮ ಕರ್ತವ್ಯವನ್ನು ಎಚ್ಚರಿಕೆಯಿಂದ ನಿರ್ವಹಿಸಲು ಸೂಚನೆ ನೀಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಹೇಳಿದರು.