– ವಿದ್ಯಾದಾಸ ಬಾಬಾನಿಂದ ಫಲ ಪಡೆದವರ ಕುತಂತ್ರವೇ?
– ಡಿಸಿ ವಿರುದ್ಧ ಅವಹೇಳನಕಾರಿ ಮಾತು
– ಅಭಿವೃದ್ಧಿ ಆಗುತ್ತಿರುವ ವೇಳೆ ಷಡ್ಯಂತ್ರ
ಕೊಪ್ಪಳ: ಖಾಸಗಿ ಟ್ರಸ್ಟ್ ಕೈವಶದಲ್ಲಿದ್ದ ಕೊಪ್ಪಳ ಜಿಲ್ಲೆ ಗಂಗಾವತಿಯ ಅಂಜನಾದ್ರಿ ದೇವಸ್ಥಾನವು ಮುಜರಾಯಿ ಇಲಾಖೆ ಸುಪರ್ದಿಗೆ ಹೋಗಿತ್ತು. ಅದನ್ನು ಮರಳಿ ಪಡೆಯುವ ಷ್ಯಡ್ಯಂತ್ರ ನಿರಂತರವಾಗಿ ನಡೆಯುತ್ತಲೇ ಇವೆ. ಈ ಹಿಂದೆ ಪದಚ್ಯುತಗೊಂಡಿದ್ದ ದೇವಸ್ಥಾನದ ಪ್ರಧಾನ ಅರ್ಚಕ ವಿದ್ಯಾದಾಸ ಬಾಬಾನನ್ನು ಛೂ ಬಿಟ್ಟು ಕಾಣದ ಕೈಗಳು ಕ್ರಿಯಾಶೀಲವಾಗಿವೆ ಎಂಬ ಮಾತುಗಳು ಕೇಳಿ ಬಂದಿವೆ.
ಹನುಮನ ಜನ್ಮಸ್ಥಳದಲ್ಲಿ ಈ ಹಿಂದೆ ಖಾಸಗಿಯಾಗಿ ರಚನೆಯಾಗಿದ್ದ ಟ್ರಸ್ಟ್ ಇಡೀ ದೇವಸ್ಥಾನದ ಪೂಜೆ, ಜಪ-ತಪ ಸೇರಿದಂತೆ ಎಲ್ಲವನ್ನೂ ನಿರ್ವಹಿಸುತ್ತಿತ್ತು. ಆದರೆ ಆ ಟ್ರಸ್ಟ್‌ನಿಂದ ಒಂದೇ ಒಂದು ಅಭಿವೃದ್ಧಿ ಕಾರ್ಯ ಮಾತ್ರ ಆಗಿರಲಿಲ್ಲ. ಹೊರತಾಗಿ ಟ್ರಸ್ಟ್‌ನಲ್ಲಿದ್ದವರು, ಕೆಲ ರಾಜಕಾರಣಿಗಳು, ಸಂಘಟನೆಗಳ ಪ್ರಮುಖರು ಅಭಿವೃದ್ಧಿಯಾಗಿದ್ದರು. ಆಗ ಬಾಬಾನ ಕುರಿತು ಒಂದು ಸೆಕ್ಸ್ ಸ್ಕ್ಯಾಂಡಲ್ ಹೊರ ಬಂದಾಗಲೇ ಎಲ್ಲಾ ವಿವಾದಕ್ಕೆ ಕಾರಣವಾಗಿ ದೇವಸ್ಥಾನದ ಹೆಸರಿನಲ್ಲಿದ್ದ ಎರಡ್ಮೂರು ಟ್ರಸ್ಟ್‌ನವರು ಬಾಬಾನನ್ನು ಹೊರ ಹಾಕಿದರು.
Advertisement
Advertisement
ಈ ವಿದಾದ ಹೆಚ್ಚಾಗುತ್ತಲೇ ಅಂದಿನ ಎಸ್‍ಪಿ ಅನೂಪ್ ಶಟ್ಟಿ ವರದಿ ನೀಡಿ ಆ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಒಳಪಡುವಂತೆ ಮಾಡಿದ್ದರು. ಅಂದಿನಿಂದ ಇಲ್ಲಿವರೆಗೆ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿವೆ. ಆದರೆ ವಿದ್ಯಾದಾಸ ಬಾಬಾ ಮತ್ತು ಆತನಿಂದ ಅದುವರೆಗೂ ಫಲಾನುಭವಿಗಳಾದ ಕೆಲವರು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಮತ್ತೆ ಕ್ರಿಯಾಶೀಲರಾಗಿದ್ದಾರೆ. ಅದರ ಮುಂದುವರಿದ ಭಾಗವೇ ಇದೀಗ ಬಾಬ ಜಿಲ್ಲಾಧಿಕಾರಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಮಾತನಾಡಿರುವುದು.
Advertisement
ಕಾಣದ ಕೈಗಳ ಕೆಲಸ?:
ವಿದ್ಯಾದಾಸ ಬಾಬಾ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿರುವವರೆಗೂ ಸುಮ್ಮನಿದ್ದ. ಯಾವಾಗ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತೋ ಅಂದಿನಿಂದ ಹಿಂದುತ್ವ ವಿಷಯ ಮುಂದಿಟ್ಟುಕೊಂಡು ದೇವಸ್ಥಾನವನ್ನು ಮತ್ತೆ ಟ್ರಸ್ಟ್‌ಗೆ ನೀಡುವಂತೆ ಸಚಿವರು, ಸಿಎಂ ಮೇಲೆ ಒತ್ತಡ ತಂದಿದ್ದಾನೆ. ಮುಜರಾಯಿ ಇಲಾಖೆ ಸಚಿವರು ಈತನ ಎಲ್ಲಾ ಕರ್ಮಕಾಂಡಗಳ ವರದಿ ನೋಡಿ ಉಗಿದು ಕಳುಹಿಸಿದ್ದಾರೆ. ಇಷ್ಟಿದ್ದರೂ ನಿರಂತರ ಪ್ರಯತ್ನ ಮಾಡುತ್ತಿರುವ ಬಾಬಾ, ಇದೀಗ ಕೇಂದ್ರ ಸರ್ಕಾರದ ಮಟ್ಟದಲ್ಲಿ ಈ ವಿಷಯವಾಗಿ ಸತತ ಯತ್ನ ನಡೆಸಿದ್ದಾನೆ ಎನ್ನುವ ಮಾಹಿತಿ ದೊರಕಿವೆ. ಇದರೆಲ್ಲದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎನ್ನುವುದು ಗಂಗಾವತಿ ಕ್ಷೇತ್ರದ ಜನತೆ ಮಾತು.
Advertisement
ನೌಕರರ ಸಂಘ ಪ್ರತಿಭಟನೆ:
ಡಿಸಿ ವಿರುದ್ಧ ಅವಹೇಳನಕಾರಿ ಮಾತನಾಡಿದ ಬಾಬಾನನ್ನು ಬಂಧಿಸಿ ಗಡಿಪಾರು ಮಾಡುವಂತೆ ಸರ್ಕಾರಿ ನೌಕರರ ಸಂಘ ಕೊಪ್ಪಳದಲ್ಲಿ ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಅತ್ತ ಗಂಗಾವತಿಯ ಕೆಲ ಮುಖಂಡರು ಬಾಬನ ವರ್ತನೆ, ಆತನ ವ್ಯವಹಾರ, ನಡೆತೆ, ಚಲನವಲನಗಳ ಬಗ್ಗೆ ಮಾತನಾಡಿ ಬಾಬಾನನ್ನು ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಒತ್ತಾಯಗಳು ಬಂದಿವೆ.
ಸರ್ಕಾರದ ಸುಪರ್ದಿಗೆ ಬಂದ ನಂತರ ದೇವಸ್ಥಾನಕ್ಕೆ 1.60 ಕೋಟಿ ರೂ. ಆದಾಯ ಬಂದಿದೆ. 30 ಲಕ್ಷ ರೂ. ಎಫ್‍ಡಿ ಮಾಡಿದ್ದರೆ, 30 ಲಕ್ಷ ರೂ. ದೇವಸ್ಥಾನದ ಅಕೌಂಟ್‍ನಲ್ಲಿದೆ. ಉಳಿದಂತೆ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಇಲ್ಲಿ ನಡೆದಿವೆ. ವಿಷಯ ಹೀಗಿರುವಾಗ ಕೆಲ ಕುತಂತ್ರಿಗಳು ವಿದ್ಯಾದಾಸ ಬಾಬಾನನ್ನು ಛೂ ಬಿಟ್ಟು ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ ಎನ್ನುವುದು ಓಪನ್ ಸೀಕ್ರೆಟ್. ಯಾವುದೇ ಕಾರಣಕ್ಕೂ ಸರ್ಕಾರ ಈ ದೇವಸ್ಥಾನವನ್ನು ಖಾಸಗಿಯವರಿಗೆ ನೀಡಬಾರದು ಎನ್ನುವುದು ಜಿಲ್ಲೆಯ ಜನತೆ ಒತ್ತಾಯ.
ಟ್ರಸ್ಟ್‌ಗೆ ನೋಟಿಸ್:
ಅಂಜನಾದ್ರಿ ದೇವಸ್ಥಾನ ಸರ್ಕಾರದ ಸುಪರ್ದಿಗೆ ಬಂದ ನಂತರ ಕೋಟಿ ಕೋಟಿ ಆದಾಯ ಬಂದಿದೆ. ಆದರೆ ಬರುವುದಕ್ಕೂ ಮೊದಲು ಅಷ್ಟು ವರ್ಷಗಳ ಕಾಲ ಎಷ್ಟು ಪ್ರಮಾಣದಲ್ಲಿ ಭಕ್ತರ ದೇಣಿಗೆ, ಕಾಣಿಕೆ, ತಟ್ಟೆಕಾಸು ಹರಿದುಬಂದಿದೆ ಎಂಬ ಲೆಕ್ಕ ಇದುವರೆಗೂ ಸಿಕ್ಕಿಲ್ಲ. ಟ್ರಸ್ಟ್ ರಿಜಿಸ್ಟ್ರೇಷನ್ ಕಾಯ್ದೆ ಪ್ರಕಾರ ನೋಂದಣಿಯಾದ ನಂತರದ ದಿನಗಳಿಂದ ಸರ್ಕಾರ ವಶಪಡಿಸಿಕೊಂಡ ದಿನದವರೆಗೂ ಲೆಕ್ಕಪತ್ರಗಳನ್ನು ಒಪ್ಪಿಸುವಂತೆ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಚಂದ್ರಮೌಳಿಯವರು ಶ್ರೀ ಆಂಜನೇಯ ಪರ್ವತ ಮತ್ತು ಪಬ್ಲಿಕ್ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷರಿಗೂ ಹಾಗೂ ವಿದ್ಯಾದಾಸ ಬಾಬಾಗೂ ನೋಟಿಸ್ ಜಾರಿ ಮಾಡಿದ್ದಾರೆ. ಒಂದುವೇಳೆ ಲೆಕ್ಕಪತ್ರ ಸಲ್ಲಿಸದಿದ್ದರೆ ಸಾರ್ವತ್ರಿಕ ಹಣದ ದುರುಪಯೋಗದ ಆರೋಪದ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಸಿದ್ದಾರೆ.