– 400 ಜನ ಮಹಿಳೆಯರಿಗೆ ಉದ್ಯೋಗ
ಕೊಪ್ಪಳ: ದಿನ ಬಳಕೆಯಲ್ಲಿ ಪ್ಲಾಸ್ಟಿಕ್ ವಸ್ತುಗಳ ಸಂಖ್ಯೆ ಹೆಚ್ಚಾಗಿರುವ 21ನೇ ಶತಮಾನದಲ್ಲಿಯೂ ಗ್ರಾಮೀಣ ಮಹಿಳೆಯರು ಬಾಳೆ ಗಿಡದ ನೂಲಿನಿಂದ ಗೃಹ ಬಳಕೆ ವಸ್ತುಗಳನ್ನು ತಯಾರಿಸಿ, ದೇಶ ಸೇರಿದಂತೆ ವಿದೇಶದಲ್ಲಿ ಕೂಡ ಮಾರಾಟ ಮಾಡುವ ಮೂಲಕ ಸೈ ಎನಿಸಿಕೊಂಡಿದ್ದಾರೆ.
ವಿಜಯನಗರ ಕಾಲದ ಇತಿಹಾಸವನ್ನು ಹೇಳುವ ತಾಲೂಕಿನ ಆನೆಗೊಂದಿ ಗ್ರಾಮದಲ್ಲಿನ ಮಹಿಳೆಯರು ಸ್ಥಳೀಯವಾಗಿಯೇ ಸ್ವಯಂ ದುಡಿಮೆಯನ್ನು ಕಂಡುಕೊಂಡು, ಸ್ವಾವಲಂಬಿ ಜೀವನವನ್ನು ನಡೆಸುತ್ತಿದ್ದಾರೆ. ಈ ಮಹಿಳೆಯರು ಕೃಷಿಯಲ್ಲಿ ದೊರೆಯುವ ಕಚ್ಚ ವಸ್ತುಗಳನ್ನು ಬಳಕೆ ಮಾಡಿಕೊಂಡು ಕಸದಿಂದ ರಸ ತೆಗೆಯುವ ಕಾಯಕಕ್ಕೆ ಮುಂದಾಗಿದ್ದಾರೆ.
Advertisement
Advertisement
ಆನೆಗೊಂದಿ ಗ್ರಾಮದ ಶಮಾ ಪವಾರ್ ಅವರು ಕಿಷ್ಕಿಂದ್ ಟ್ರಸ್ಟ್ ಕಟ್ಟಿಕೊಂಡು, ಕಳೆದ 24 ವರ್ಷಗಳಿಂದ ಗ್ರಾಮೀಣ ಮಹಿಳೆಯರಿಗೆ ಉದ್ಯೋಗವನ್ನು ಒದಗಿಸುತ್ತಿದ್ದಾರೆ. ಬಾಳೆ ಗಿಡದ ನೂಲಿನಿಂದ ಗೃಹ ಬಳಕೆ ವಸ್ತುಗಳನ್ನು ತಯಾರಿಸುವ ಕುರಿತು ಮಹಿಳೆಯರಿಗೆ ತರಬೇತಿಯನ್ನು ನೀಡಲಾಗುತ್ತಿದೆ. ತರಬೇತಿಯನ್ನು ಪಡೆದುಕೊಂಡ ಮಹಿಳೆಯರಿಗೆ ಅವರ ಸಂಸ್ಥೆಯಲ್ಲಿಯೇ ಉದ್ಯೋಗವನ್ನು ನೀಡುತ್ತಿದ್ದಾರೆ.
Advertisement
1997ರಲ್ಲಿ ಈ ಸಂಸ್ಥೆಯು ಸ್ಥಾಪನೆಯಾಗಿದ್ದು, ಇಲ್ಲಿಯವರೆಗೆ ಸುಮಾರು ನೂರಾರು ಮಹಿಳೆಯರಿಗೆ ಉದ್ಯೋಗವನ್ನು ನೀಡಿದ್ದಾರೆ. ಸದ್ಯ 400 ಜನ ಮಹಿಳೆಯರು ಈ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹೊಸಪೇಟೆ ತಾಲೂಕಿನ ಬುಕ್ಕಸಾಗರ, ರಾಮಸಾಗರ, ಆನೆಗೊಂದಿ, ಸಣಾಪೂರ, ಹನುಮನಹಳ್ಳಿ ಸೇರಿದಂತೆ ನಾನಾ ಗ್ರಾಮಗಳ 200ಕ್ಕೂ ಅಧಿಕ ಕುಟುಂಬಗಳು ಗೃಹ ಬಳಕೆ ವಸ್ತುಗಳ ತಯಾರಿಕೆಗೆ ಬೇಕಾಗುವ ಬೆಳೆ ಗಿಡದ ನೂಲು ತಯಾರಿಕೆಯಲ್ಲಿ ಕೆಲಸದಲ್ಲಿ ನಿರತವಾಗಿವೆ.
Advertisement
ಯಾವ ವಸ್ತುಗಳ ತಯಾರಿಕೆ:
ಬಾಳೆ ನೂಲಿನಿಂದ ದಿನ ಬಳಕೆಗೆ ಅವಶ್ಯಕವಾಗಿರುವ ಕ್ಯಾಟ್ ಬ್ಯಾಗ್, ವಾಟರ್ ಬ್ಯಾಗ್, ಮೊಬೈಲ್ ಪಾಕೇಟ್, ಮೇಕಪ್ ಕಿಟ್, ಹ್ಯಾಂಡ್ ಬ್ಯಾಂಡ್‍ಗಳನ್ನು ಕೈಯಿಂದ ತಯಾರಿಸಿ ಅವುಗಳಿಗೆ ನೈಸರ್ಗಿಕವಾಗಿರುವ ಬಣ್ಣಗಳಿಂದ ಆಧುನಿಕ ಸ್ಪರ್ಶವನ್ನು ನೀಡಲಾಗುತ್ತಿದೆ. ಗೃಹ ಬಳಕೆಗೆ ಅವಶ್ಯಕವಾಗಿರುವ ಮ್ಯಾಟ್, ವಾಲ್ ಡಿಸೈನ್ಸ್, ಟೇಬಲ್ ಮ್ಯಾಟ್, ಪೆನ್ಸಿಲ್ ಬಾಕ್ಸ್, ಕೈ ಚೀಲಗಳು, ಬುಟ್ಟಿ, ಶೋಕೆಸ್ ಗೊಂಬೆಗಳ ಜೊತೆಗೆ ಮಕ್ಕಳಿಗೆ ಪ್ರಿಯವಾಗಿರುವ ಆಟಿಕೆ ಸಾಮಾನುಗಳನ್ನು ಸಹ ಇಲ್ಲಿ ಬಾಳೆ ನೂಲಿನಿಂದ ತಯಾರು ಮಾಡಲಾಗುತ್ತದೆ.
ಹೇಗೆ ತಯಾರಿಕೆ:
ಆನೆಗೊಂದಿ, ರಾಮಸಾಗರ, ಬುಕ್ಕಸಾಗರ, ಸಣಾಪೂರ ಗ್ರಾಮಗಳ ಸುತ್ತಮುತ್ತಲಿನಲ್ಲಿ ಬಾಳೆ ಬೆಳೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಬಾಳೆ ಪೈರು ಮುಗಿದ ನಂತರ ಬಾಳೆ ಗಿಡಗಳು ರೈತರು ಉಪಯೋಗವನ್ನು ಮಾಡದೆ ಬಿಸಾಡುತ್ತಾರೆ. ಅಂತಹ ಬಾಳೆ ಗಿಡಗಳನ್ನು ತೆಗೆದುಕೊಂಡು ಬಾಳೆ ಬೊಂಬುನಲ್ಲಿರುವ ಪದರುಗಳನ್ನು ವಿಂಗಡನೆಯನ್ನು ಮಾಡಿ, ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. ನಂತರ ಸ್ವಲ್ಪ ಪ್ರಮಾಣದಲ್ಲಿ ನೀರಿನಲ್ಲಿ ನೆನೆಸಿ, ಒಂದೊಂದಾಗಿ ನಾರು ತೆಗೆಯಲಾಗುತ್ತದೆ. ಮಹಿಳೆಯರು ನಾರು ರೂಪದಲ್ಲಿ ಕಚ್ಚಾ ವಸ್ತುವನ್ನು ನೂಲಿನ ರೂಪಕ್ಕೆ ಸಿದ್ಧಪಡಿಸುತ್ತಾರೆ. ನಂತರ ನೂಲಿನ್ನು ಸೂಜಿಯ ಸಹಾಯಕದಿಂದ ಗೃಹ ಬಳಕೆಗೆ ಅವಶ್ಯಕತೆ ಇರುವ ಗ್ರಾತಕ್ಕೆ ವಿವಿಧ ಬಗೆಯ ವಸ್ತುಗಳನ್ನು ತಯಾರಿಸಲಾಗುತ್ತಿದೆ.
ದೇಶ, ವಿದೇಶಗಳಲ್ಲಿ ಮಾರಾಟ:
ನೈಸರ್ಗಿಕವಾಗಿ ದೊರೆಯುವ ಕೃಷಿ ಉಪಕರಣಗಳನ್ನು ಬಳಸಿಕೊಂಡಿ ತಯಾರಿಕೆ ಮಾಡುವ ಈ ವಸ್ತುಗಳ ಮಾರಾಟಕ್ಕಾಗಿಯೇ ಕಿಷ್ಕಿಂದ್ ಟ್ರಸ್ಟ್ ಹೆಸರಲ್ಲಿ ವೆಬ್ ಕ್ರೀಯೆಟ್ ಮಾಡಲಾಗಿದೆ. ಅದರಲ್ಲಿ ಇಲ್ಲಿ ದೊರೆಯುವ ವಸ್ತುಗಳ ಜೊತೆಗೆ ಇವುಗಳಿಗೆ ಬಳಕೆ ಮಾಡವುದರಿಂದ ಆಗುವ ಉಪಯೋಗಗಳ ಕುರಿತು ವಿವರಣೆಯನ್ನು ನೀಡಲಾಗಿದೆ. ಸಾಮಾನ್ಯವಾಗಿ ಆನ್‍ಲೈನ್‍ನಲ್ಲಿ ಬುಕ್ ಮಾಡಿ, ತೆಗೆದುಕೊಳ್ಳುವವರೆ ಹೆಚ್ಚಾಗಿದ್ದಾರೆ. ಸ್ಪೇನ್, ಪ್ರಾನ್ಸ್, ನ್ಯೂಜಿಲ್ಯಾಂಡ್, ಜರ್ಮನಿ, ಅಮೆರಿಕ ದೇಶದವರು ಈ ವಸ್ತುಗಳನ್ನು ಅತಿ ಹೆಚ್ಚು ಖರೀದಿ ಮಾಡುತ್ತಿದ್ದಾರೆ. ಹಾಗಾಗಿಯೇ ವಿದೇಶದಲ್ಲಿ ಈ ವಸ್ತುಗಳಿಗೆ ಸದ್ಯದ ಮಟ್ಟಿಗೆ ಬೇಡಿಕೆ ಕೂಡ ಹೆಚ್ಚಳವಾಗಿದೆ. ದೇಶದಲ್ಲಿ ವ್ಯಾಪಾರಿಗಳು ಇಲ್ಲಿಂದ ಖರೀದಿ ಮಾಡಿ, ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಬೆಂಗಳೂರು, ದೆಹಲಿ, ಮುಂಬೈ, ಗೋವಾ, ಹುಬ್ಬಳ್ಳಿ, ತಮಿಳುನಾಡು, ಕೇರಳ, ಹೈದ್ರಾಬಾದ್ ಸೇರಿದಂತೆ ನಾನಾ ಕಡೆಗಳಲ್ಲಿ ಕಳುಹಿಸಲಾಗುತ್ತಿದೆ.