– ನನಗೂ ಕೊಪ್ಪಳ ಜಿಲ್ಲೆಗೆ ಅವಿನಾಭಾವ ಸಂಬಂಧವಿದೆ
ಕೊಪ್ಪಳ: ಕೆರೆ ಹೂಳೆತ್ತುವ ಕೆಲಸ ಜಲಕ್ರಾಂತಿಗೆ ನಾಂದಿಯಾಗಲಿ ಎಂದು ರಾಕಿಂಗ್ ಸ್ಟಾರ್ ಯಶ್ ಕರೆ ನೀಡಿದ್ದಾರೆ.
ಗಂಗಾವತಿ ತಾಲೂಕಿನ ಆನೆಗೊಂದಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ ಅವರು, ಕೆರೆ ಹೂಳೆತ್ತುವ ಕೆಲವನ್ನು ನಾನು ಕೊಪ್ಪಳ ಜಿಲ್ಲೆಯಲ್ಲಿ ಮಾಡಿದ್ದೇನೆ. ಇದರ ಮುಖ್ಯ ಉದ್ದೇಶ ಜಲ ಕ್ರಾಂತಿಗೆ ನಾಂದಿ ಹಾಡುವುದಾಗಿತ್ತು ಎಂದು ಹೇಳಿದರು.
ಕಲ್ಲಿನ ಬೆಟ್ಟ ಗುಡ್ಡಗಳ ಮಧ್ಯೆ ಹಸಿರಿನಿಂದ ಕೂಡಿದ ಆನೆಗೊಂದಿಯು ವಿಭಿನ್ನವಾಗಿದೆ. ಹಾಗಾಗಿ ಮುಂದಿನ ದಿನಮಾನಗಳಲ್ಲಿ ಈ ಭಾಗದಲ್ಲಿ ಚಿತ್ರ ತೆಗೆಯುವ ಬಯಕೆ ಇದೆ. ನನಗೂ ಕೊಪ್ಪಳ ಜಿಲ್ಲೆಗೆ ಯಾವುದೋ ಒಂದು ಅವಿನಾಭಾವ ಸಂಬಂಧವಿದೆ. ನಾನು ಒಬ್ಬ ಸಾಮಾನ್ಯ ಮನುಷ್ಯ. ನನ್ನಿಂದ ಕೆರೆ ಹೂಳೆತ್ತುವ ಕೆಲಸ ಮಾಡುವುದಾದರೆ ತಮ್ಮಿಂದ ಯಾಕೆ ಸಾಧ್ಯ ಇಲ್ಲ. ನಾವು ಮನಸು ಮಾಡಿದರೆ ಏನಾದರು ಬೇಕಾದರೂ ಮಾಡಬಹುದು ಎಂದು ಜನರನ್ನು ಪ್ರೇರೆಪಿಸಿದರು.
ನಾನು ಕೆರೆ ಹೂಳೆತ್ತುತ್ತೇನೆ ಎಂದಾಗ ಬಹಳ ಜನ ಬೇಡ ಸರ್ ಎಂದರು. ಆದರೆ ನಾನು ಮಾಡಲೇಬೇಕೆಂಬ ವಿಚಾರ ತಲೆಯಲ್ಲಿ ಬಂದಾಗ ಕೆರೆ ಹೂಳೆತ್ತುವ ಕೆಲಸ ಮಾಡಿದೆ. ಅದು ಮುಂದೆ ಅನೇಕರಿಗೆ ಸ್ಫೂರ್ತಿಯಾಯಿತು. ಎಲ್ಲಾ ಸಾರ್ವಜನಿಕ ಕೆಲಸವನ್ನು ಕೇವಲ ಸರ್ಕಾರ ಮಾಡಲಿ ಅಂತ ಕುಳಿತರೆ ವ್ಯವಸ್ಥೆ, ಸಾಮಾಜಿಕ ಕೆಲಸಗಳು ಆಗುವುದಿಲ್ಲ. ಎಲ್ಲರೂ ಒಟ್ಟಿಗೆ ಸೇರಿ ಮಾಡಿದರೆ ಏನನ್ನಾದರು ಮಾಡಬಹುದು ಎಂದು ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ನಟ ಯಶ್ ಅವರನ್ನು ಶಾಸಕ ಪರಣ್ಣ ಮುನವಳ್ಳಿ ಹಾಗೂ ಜಿಲ್ಲಾಧಿಕಾರಿಗಳು ಸನ್ಮಾನಿಸಿದರು.