ನವದೆಹಲಿ: ಪ್ರಯಾಣಿಕರ ಅನುಕೂಲಕ್ಕಾಗಿ ಹಲವು ಸೌಲಭ್ಯಗಳನ್ನು ಕಲ್ಪಿಸಲು ರೈಲ್ವೆ ಇಲಾಖೆ ಮುಂದಾಗಿದೆ. ಇದರಲ್ಲಿ ಸದ್ಯ ಕೊಂಕಣ ರೈಲ್ವೆ ನಿಗಮದ(ಕೆಆರ್‌ಸಿಎಲ್) ಅಡಿಯಲ್ಲಿ ಬರುವ ನಿಲ್ದಾಣಗಳಲ್ಲಿ ನೀರಿನ ಎಟಿಎಂ ಅಳವಡಿಸುವ ಸೌಲಭ್ಯ ಕೂಡ ಒಂದಾಗಿದೆ.
Advertisement
ಹೌದು. ಕೊಂಕಣ ರೈಲ್ವೆ ನಿಗಮದಿಂದ ರೈಲು ನಿಲ್ದಾಣಗಳಲ್ಲಿ ನೀರಿನ ಎಟಿಎಂಗಳನ್ನು ಅಳವಡಿಸಲಾಗುತ್ತಿದೆ. ದೆಹಲಿ ಮೂಲದ `ಜನಜಲ್’ ಕಂಪನಿಯ ಸಹಯೋಗದೊಂದಿಗೆ ಈ ವಿನೂತನ ಪ್ರಯತ್ನಕ್ಕೆ ಕೊಂಕಣ ರೈಲ್ವೇ ನಿಗಮ ಕೈಹಾಕಿದೆ. ತನ್ನ ವ್ಯಾಪ್ತಿಯಲ್ಲಿರುವ ಎಲ್ಲಾ ರೈಲು ನಿಲ್ದಾಣಗಳಲ್ಲಿ ನೀರಿನ ಎಟಿಎಂಗಳನ್ನು ಕೆಆರ್‌ಸಿಎಲ್ ಅಳವಡಿಸುತ್ತಿದೆ. ಕರ್ನಾಟಕ, ಗೋವಾ, ಮಹಾರಾಷ್ಟ್ರದಲ್ಲಿನ 59 ರೈಲ್ವೆ ನಿಲ್ದಾಣಗಳಲ್ಲಿ 61 `ಜನಜಲ್’ ನೀರಿನ ಎಟಿಎಂಗಳ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
Advertisement
ನೀರಿನ ಎಟಿಎಂ ಅಳವಡಿಕೆ ಮಾಡುವುದರಿಂದ ಪ್ರತಿದಿನ 75 ಲಕ್ಷ ಪ್ರಯಾಣಿಕರಿಗೆ ಹಾಗೂ ನಿಲ್ದಾಣಗಳ ಸುತ್ತಮುತ್ತ ವಾಸಿಸುವ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯ ಸಿಗುತ್ತದೆ ಎಂದು ಜನಜಲ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಪರಾಗ್ ಅಗರ್ವಾಲ್ ಹೇಳಿದ್ದಾರೆ.
Advertisement
5 ತಿಂಗಳಲ್ಲಿ ರೈಲು ನಿಲ್ದಾಣಗಳಲ್ಲಿ ನೀರಿನ ಎಟಿಎಂಗಳು ಕಾರ್ಯರೂಪಕ್ಕೆ ಬರಲಿದೆ. ಅತ್ಯುತ್ತಮ ಆಧುನಿಕ ತಂತ್ರಜ್ಞಾನದ ಮೂಲಕ ನೀರಿನ ಶುದ್ಧೀಕರಣ ಮಾಡುವ ವ್ಯವಸ್ಥೆಯನ್ನು ಕಂಪನಿ ಮಾಡುತ್ತದೆ ಎಂದು ಭರವಸೆ ನೀಡಿದ್ದಾರೆ.
ನೀರಿನ ಎಟಿಎಂನಿಂದಾಗಿ ನೀರು ಪೋಲಾಗುವುದನ್ನು ಕಡಿಮೆ ಮಾಡಬಹುದು. ಇದರಿಂದ ಸಾಮಾನ್ಯವಾಗಿ ಒಮ್ಮೆ ಉಪಯೋಗಿಸಿ ಬಿಸಾಡುವ ಪ್ಲಾಸ್ಟಿಕ್ ಬಾಟಲಿಗಳ ಬಳಕೆಗೆ ಕಡಿವಾಣ ಹಾಕಬಹುದಾಗಿದೆ ಎಂದು ಪರಾಗ್ ಅಗರ್ವಾಲ್ ವಿವರಿಸಿದ್ದಾರೆ.
ಈ ಹಿಂದೆಯೇ ಇದೇ ರೀತಿ ನೀರಿನ ಎಟಿಎಂ ಯೋಜನೆಯನ್ನು ಜನಜಲ ಕಂಪನಿ ವಹಿಸಿಕೊಂಡು ಯಶಸ್ವಿಯಾಗಿ ನಿರ್ವಹಿಸಿದೆ. ಮಹಾರಾಷ್ಟ್ರದಲ್ಲಿ ಕೇಂದ್ರೀಯ ರೈಲ್ವೇ, ಪಶ್ಚಿಮ ವಲಯದ ರೈಲ್ವೇ ಹಾಗೂ ಹಾರ್ಬರ್ ಲೈನ್‍ನಲ್ಲಿ ಸುಮಾರು 101 ನೀರಿನ ಎಟಿಎಂಗಳನ್ನು ಕಂಪನಿ ಅಳವಡಿಸಿದೆ. ಅಲ್ಲದೆ ಮುಂಬೈನ ಅನೇಕ ಪೊಲೀಸ್ ಠಾಣೆಗಳಲ್ಲಿ ಸುಮಾರು 100 ನೀರಿನ ಎಟಿಎಂಗಳನ್ನು ಜನಜಲ್ ಕಂಪನಿ ಸ್ಥಾಪಿಸಿದೆ.