ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ಅವರ ಬತ್ತಳಿಕೆಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಮುಂಬರುವ ವರ್ಷಗಳಿಗೂ ಈಗಾಗಲೇ ತಲೈವಾ ಅವರ ಕಾಲ್ಶೀಟ್ ಬುಕ್ ಆಗಿದೆ. ಹೀಗಿರುವಾಗ ತಲೈವಾ ನಟನೆಯಿಂದ ನಿವೃತ್ತಿ ಪಡೆಯುತ್ತಾರೆ ಎಂಬ ಸುದ್ದಿ ಸದ್ದು ಮಾಡ್ತಿದೆ.
ಈಗ ರಜನೀಕಾಂತ್ ಅವರಿಗೆ 72 ವರ್ಷ ವಯಸ್ಸು, ಸಿನಿಮಾ ರಂಗಕ್ಕೆ ಬಂದು 2023ಕ್ಕೆ 48 ವರ್ಷವಾಯಿತು. ಈ ವರ್ಷವೂ ಅವರ ಡೇಟ್ಸ್ಗಳು ಈಗಾಗಲೇ ಬುಕ್ ಆಗಿವೆ. ಒಂದು ಸಿನಿಮಾ ಬಿಡುಗಡೆಗೆ ತಯಾರಾಗಿದ್ದರೆ, ಇನ್ನೊಂದು ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಮತ್ತೊಂದು ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಆದರೆ ಇನ್ನು ಕೆಲವು ಸಿನಿಮಾಗಳ ಬಳಿಕ ತಲೈವಾ ಬಣ್ಣದ ಬದುಕಿಗೆ ಗುಡ್ ಬೈ ಹೇಳುತ್ತಾರಂತೆ. ಇದನ್ನೂ ಓದಿ:ಹಾಲಿವುಡ್ಗೆ ಕಾಲಿಟ್ಟ ಎರಡನೇ ಮೈಸೂರು ಸೆಲೆಬ್ರಿಟಿ
ಕೆ. ಬಾಲಚಂದರ್ (K.Balachandar) ಅವರ ನಿರ್ದೇಶನದಲ್ಲಿ ಮೊದಲ ಸಿನಿಮಾದಲ್ಲಿ ನಟಿಸಿದ್ದ ರಜನೀಕಾಂತ್ ಕೊನೆಯ ಸಿನಿಮಾವನ್ನು ಲೋಕೇಶ್ ಕನಗರಾಜ್ (Lokesh Kangaraj) ನಿರ್ದೇಶನದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಅದು ಅವರ 171ನೇ ಸಿನಿಮಾ ಆಗಿರಲಿದೆ. ಇದಾದ ಬಳಿಕ ರಜನೀಕಾಂತ್ ನಟನೆಯಿಂದ ಹಿಂದೆ ಸರಿಯುತ್ತಾರೆ ಎನ್ನಲಾಗುತ್ತಿದೆ. ಹಾಗಾಗಿ ಲೋಕೇಶ್ ಸಹ ಚಿತ್ರವನ್ನ ಭರ್ಜರಿಯಾಗಿ ತಯಾರು ಮಾಡಿಕೊಳ್ಳುತ್ತಿದ್ದಾರೆ. ಕೊನೆಯ ಸಿನಿಮಾದಲ್ಲಿ ರಜನೀಕಾಂತ್ ಅಭಿಮಾನಿಗಳಿಗೆ ಹಬ್ಬದೂಟ ಬಡಿಸಲು ಬೇಕಾದ ತಯಾರಿ ಮಾಡ್ತಿದ್ದಾರೆ. ಈ ಸುದ್ದಿ ಅದೆಷ್ಟರ ಮಟ್ಟಿಗೆ ನಿಜಾ ಎಂಬುದನ್ನ ತಲೈವಾ ಅಧಿಕೃತವಾಗಿ ಹೇಳುವವರೆಗೂ ಕಾಯಬೇಕಿದೆ.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಟ ನಿರ್ದೇಶಕ ಮಿಸ್ಕಿನ್, ಲೋಕೇಶ್ ಕನಗರಾಜ್ ಜೊತೆ ತಲೈವಾ ಕೆಲಸ ಮಾಡಲಿದ್ದಾರೆ. ಅದು ಅವರ ಕೊನೆಯ ಸಿನಿಮಾ ಆಗುವ ಸಾಧ್ಯತೆ ಇದೆ ಎಂದು ಮಾತನಾಡಿದ್ದಾರೆ. ಅಂದಹಾಗೆ ಮಿಸ್ಕಿನ್, ಲೋಕೇಶ್ ಕನಕರಾಜ್ರ ಪ್ರಸ್ತುತ ಸಿನಿಮಾ ಲಿಯೋನಲ್ಲಿ ನಟಿಸುತ್ತಿದ್ದಾರೆ.
ತಲೈವಾ ನಟಿಸಿರುವ ಜೈಲರ್, ಲಾಲ್ ಸಲಾಮ್ ಮುಂಬರುವ ಚಿತ್ರಗಳು ಇದಾಗಿದೆ. ನೆಲ್ಸನ್ ಮತ್ತು ಲೋಕೇಶ್ ಕನಗರಾಜ್ ಜೊತೆ ರಜನಿಕಾಂತ್ ಸಿನಿಮಾ ಮಾಡಲಿದ್ದಾರೆ. ಒಂದಿಷ್ಟು ಚಿತ್ರಗಳು ಮಾತುಕತೆಯಲ್ಲಿದೆ.