-ಕೊಲ್ಲೂರಲ್ಲಿ ಸಾಂಪ್ರದಾಯಿಕ ರಥಾರೋಹಣ ಸಂಪನ್ನ
ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಿಯ ದೇವಸ್ಥಾನದ ವಾರ್ಷಿಕ ರಥೋತ್ಸವಕ್ಕೆ ಕೊರೊನಾ ವೈರಸ್ ಅಡ್ಡಿಯಾಗಿದೆ. ಕರ್ನಾಟಕದಲ್ಲಿ ಕೊರೊನಾ ಹೈ ಅಲರ್ಟ್ ಇರುವುದರಿಂದ ಈ ಬಾರಿ ಅದ್ಧೂರಿ ರಥೋತ್ಸವ ನಡೆಯಲಿಲ್ಲ. ಸಾಂಪ್ರದಾಯಿಕ ಉತ್ಸವ ಮತ್ತು ರಥಾರೋಹಣ ನಡೆಸಿ ಈ ಬಾರಿ ವಾರ್ಷಿಕ ಜಾತ್ರೆಯನ್ನು ಮುಗಿಸಲಾಯಿತು.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿರುವ ಮೂಕಾಂಬಿಕೆಯ ಕ್ಷೇತ್ರ ದಕ್ಷಿಣ ಭಾರತದ ದೇವಿ ದೇವಸ್ಥಾನಗಳಲ್ಲಿ ಬಹಳ ಪ್ರಸಿದ್ಧಿ ಕ್ಷೇತ್ರ. ಮೂಕಾಂಬಿಕೆಯ ವಾರ್ಷಿಕ ರಥೋತ್ಸವಕ್ಕೆ ಸಾವಿರಾರು ಮಂದಿ ಸ್ಥಳೀಯ, ರಾಜ್ಯದ ಬೇರೆ ಬೇರೆ ಭಾಗದ ಮತ್ತು ಹೊರ ರಾಜ್ಯದ ಭಕ್ತರು ಸೇರುತ್ತಾರೆ. ರಾಜ್ಯದಲ್ಲಿ ಕೊರೊನಾ ಎಮರ್ಜೆನ್ಸಿ ಇರೋದ್ರಿಂದ ಸರಳವಾಗಿ ದೇವಿಯ ಉತ್ಸವ ನಡೆಸಲು ಜಿಲ್ಲಾಧಿಕಾರಿ ಸೂಚಿಸಿದ್ದರು. ಅದರಂತೆ ಇಂದು ಆರಂಭದಲ್ಲಿ ದೇಗುಲದ ಒಳ ಸುತ್ತುಪೌಳಿಯಲ್ಲಿ ಬಲಿ ಉತ್ಸವ, ನೆರವೇರಿಸಲಾಯಿತು.
Advertisement
Advertisement
ದೇವಸ್ಥಾನದ ಅರ್ಚಕರು, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಸುತ್ತಮುತ್ತಲಿನ ಮನೆಯವರು ಸಾಂಪ್ರದಾಯಿಕ ಉತ್ಸವದಲ್ಲಿ ಪಾಲ್ಗೊಂಡರು. ದೇವಸ್ಥಾನಕ್ಕೆ ಇಂದು ಎಂದಿನಂತೆ ಎಲ್ಲರಿಗೂ ಪ್ರವೇಶ ಇರಲಿಲ್ಲ. ಸರ್ಕಾರದ ಸೂಚನೆಯಂತೆ ಕಡಿಮೆ ಜನ ಧಾರ್ಮಿಕ ವಿಧಿವಿಧಾನದಲ್ಲಿ ಪಾಲ್ಗೊಂಡರು. ಉತ್ಸವ ಮೂರ್ತಿಯನ್ನು ರಥಾರೋಹಣ ಮಾಡಿ ಆರತಿಯೆತ್ತಿ ಪೂಜೆ ಸಲ್ಲಿಸಲಾಯಿತು. ದೇವಸ್ಥಾನದ ಸಿಬ್ಬಂದಿ, ಭಕ್ತರು ನಿಲ್ಲಿಸಿದ್ದ ರಥವನ್ನು 20 ಮೀ.ನಷ್ಟು ದೂರ ಎಳೆದು ಸಾಂಪ್ರದಾಯಕ್ಕೆ ಚ್ಯುತಿ ಬಾರದಂತೆ ಉತ್ಸವ ನೆರವೇರಿಸಿದರು.
Advertisement
Advertisement
ಭಗವದ್ಬಕ್ತರು ಮನೆಯಲ್ಲೇ ಇದ್ದು ಪ್ರಾರ್ಥನೆ ಮಾಡಿ ಭೂಮಿಗೆರಗಿದ ಕಂಟಕಗಳು ನಿವಾರಣೆಯಾದ ಮೇಲೆ ದೇವಸ್ಥಾನ ಪೂಜೆ, ಉತ್ಸವದಲ್ಲಿ ಪಾಲ್ಗೊಳ್ಳಿ ಎಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ವಿನಂತಿಸಿದೆ. ವ್ಯವಸ್ಥಾಪನಾ ಮಂಡಳಿ ಅಧ್ಯಕ್ಷ ಶೆಟ್ಟಿ ಮಾತನಾಡಿ, ದೇವಸ್ಥಾನದ ಇತಿಹಾಸದಲ್ಲಿ ಹೀಗಾಗಿದ್ದಿಲ್ಲ ಎಂದು ತಿಳಿದಿದ್ದೇವೆ. ಸಂಪ್ರದಾಯ ಕಟ್ಟು ಕಟ್ಟಳೆಗೆ ಅಪಚಾರ ಆಗದಂತೆ ನಾವು ಉತ್ಸವಾದಿ ಪ್ರಕ್ರಿಯೆ ಮಾಡಿದ್ದೇವೆ. ಭಕ್ತರ ಸಹಕಾರಕ್ಕೆ ಪಬ್ಲಿಕ್ ಟಿವಿ ಮೂಲಕ ಧನ್ಯವಾದ ಅರ್ಪಿಸುತ್ತೇನೆ ಎಂದರು.