ಕೋಲ್ಕತ್ತಾ: ಇಲ್ಲಿನ (Kolkata) ಆರ್‌ಜಿ ಕರ್ ಆಸ್ಪತ್ರೆಯಲ್ಲಿ ನಡೆದಿದ್ದ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ (RG Kar Hospital Case) ಸಂಬಂಧಿಸಿದಂತೆ ಕೋಲ್ಕತ್ತಾದ ಸೀಲ್ದಾ ನ್ಯಾಯಾಲಯವು (Court) ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಮತ್ತು ತಾಲಾ ಪೊಲೀಸ್ ಠಾಣೆಯ ಮಾಜಿ ಅಧಿಕಾರಿ ಅಭಿಜಿತ್ ಮೊಂಡಲ್‌ಗೆ ಜಾಮೀನು ಮಂಜೂರು ಮಾಡಿದೆ.
ಕೋಲ್ಕತ್ತಾ ಹೈಕೋರ್ಟ್‌ನಿಂದ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಿಲಾಗಿತ್ತು. ಸಿಬಿಐ 90 ದಿನಗಳ ಅವಧಿಯಲ್ಲಿ ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ವಿಫಲವಾಗಿದೆ. ಇದು ಆರೋಪಗಳಿಗೆ ಜಾಮೀನು ಸಿಗಲು ಕಾರಣವಾಯಿತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂತ್ರಸ್ತ ವೈದ್ಯೆಯ ತಾಯಿ, ಸಿಬಿಐ ತನಿಖೆಯನ್ನು ಚುರುಕುಗೊಳಿಸುತ್ತದೆ ಮತ್ತು ನ್ಯಾಯ ಸಿಗುವಂತೆ ಮಾಡುತ್ತದೆ ಎಂದು ನಾವು ಭಾವಿಸಿದ್ದೆವು. ಆದರೆ ಈಗ, ಆರೋಪಿಗಳಿಗೆ ಜಾಮೀನು ನೀಡಿರುವುದರಿಂದ, ವ್ಯವಸ್ಥೆ ನಮ್ಮನ್ನು ವಿಫಲಗೊಳಿಸುತ್ತಿದೆ ಎಂದು ಭಾಸವಾಗುತ್ತಿದೆ. ಅಲ್ಲದೇ ಪ್ರತಿದಿನ ಪ್ರಭಾವಶಾಲಿಗಳು ಶಿಕ್ಷೆಯಿಲ್ಲದೆ ತಪ್ಪಿಸಿಕೊಳ್ಳುವ ಮತ್ತೊಂದು ಪ್ರಕರಣ ಇದಾಗಲಿದೆಯೇ ಎಂದು ವಿಷಾಧ ವ್ಯಕ್ತಪಡಿಸಿದ್ದಾರೆ.
ಬಂಧಿತ ಪೊಲೀಸ್ ಅಧಿಕಾರಿಯು ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲು ವಿಳಂಬ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಸಂದೀಪ್ ಘೋಷ್ ಸಾಕ್ಷ್ಯವನ್ನು ನಾಶಗೊಳಿಸಿದ ಆರೋಪವನ್ನು ಎದುರಿಸುತ್ತಿದ್ದಾರೆ. ಇಬ್ಬರನ್ನೂ ಸಿಬಿಐ ಬಂಧಿಸಿತ್ತು.
ನ್ಯಾಯಾಲಯದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮೊಂಡಾಲ್ ಅವರ ವಕೀಲರು, ಶೀಘ್ರದಲ್ಲೇ ಅವರನ್ನು ನ್ಯಾಯಾಂಗ ಬಂಧನದಿಂದ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಆರ್‌ಜಿ ಕರ್ ಆಸ್ಪತ್ರೆಯಲ್ಲಿ ಹಣಕಾಸು ಅವ್ಯವಹಾರದ ಪ್ರತ್ಯೇಕ ಪ್ರಕರಣದಲ್ಲಿ ಆರೋಪಿಯಾಗಿರುವ ಸಂದೀಪ್ ಘೋಷ್, ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿದ್ದರೂ ಸಹ ಬಂಧನದಲ್ಲಿಯೇ ಇರಲಿದ್ದಾರೆ ಎಂದು ಅವರ ವಕೀಲರು ತಿಳಿಸಿದ್ದಾರೆ.
ಏನಿದು ಕೇಸ್?
ಈ ವರ್ಷ ಆಗಸ್ಟ್‌ನಲ್ಲಿ ಕೋಲ್ಕತ್ತಾದ ಸರ್ಕಾರಿ ಆರ್‌ಜಿ ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಮಹಿಳಾ ಸ್ನಾತಕೋತ್ತರ ತರಬೇತಿ (ಪಿಜಿಟಿ) ವೈದ್ಯೆಯ ಶವ ಅರೆನಗ್ನ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆ ನಡೆಸಿದಾಗ ಮಹಿಳಾ ವೈದ್ಯೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ಸಂಜಯ್ ರಾಯ್ ಎಂಬಾತನನ್ನು ಬಂಧಿಸಲಾಗಿತ್ತು. ಅಲ್ಲದೇ ಕೆಲವು ಪ್ರಮುಖ ಆರೋಪಿಗಳನ್ನು ಸಿಬಿಐ ಬಂಧಿಸಿದ್ದು, ತನಿಖೆ ನಡೆಸುತ್ತಿದೆ.