ಕೋಲ್ಕತ್ತಾ: ರ‍್ಯಾಗಿಂಗ್ (Raggin), ಬೆದರಿಕೆ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ( RG Kar Hospital) ವೈದ್ಯರು (Doctors) ಹಾಗೂ ವಿದ್ಯಾರ್ಥಿಗಳು ಸೇರಿದಂತೆ 59 ಮಂದಿಯನ್ನು ಅಮಾನತುಗೊಳಿಸಲಾಗಿದೆ.
ರ‍್ಯಾಗಿಂಗ್, ಮನಿ ಲಾಂಡರಿಂಗ್ ಮತ್ತು ಬೆದರಿಕೆ ಆರೋಪಗಳ ತನಿಖೆಯ ನಂತರ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆಡಳಿತ ಮಂಡಳಿಯು ಸಂಸ್ಥೆಯ 10 ವೈದ್ಯರನ್ನು ಹೊರಹಾಕಿದೆ. ಆಸ್ಪತ್ರೆಯಲ್ಲಿ ಕಿರುಕುಳ ನೀಡುವುದು, ಭಯದ ವಾತಾವರಣ ಸೃಷ್ಟಿಸುವುದು ಸೇರಿದಂತೆ ಹಲವು ಆರೋಪಗಳನ್ನು ವೈದ್ಯರು ಎದುರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಕಾಲೇಜು ಕೌನ್ಸಿಲ್ ಸಭೆಯಲ್ಲಿ ಈ ವೈದ್ಯರನ್ನು ಹಾಸ್ಟೆಲ್‌ನಿಂದ ಶಾಶ್ವತವಾಗಿ ಹೊರಹಾಕಲು ನಿರ್ಧರಿಸಲಾಯಿತು. ಅವರ ಮನೆಗಳಿಗೂ ನೋಟಿಸ್ ಕಳುಹಿಸಲಾಯಿತು. 10 ವೈದ್ಯರ ಉಚ್ಚಾಟನೆಯೊಂದಿಗೆ, ಇಂಟರ್ನಿಗಳು, ವಿದ್ಯಾರ್ಥಿಗಳು ಮತ್ತು ಗೃಹ ಸಿಬ್ಬಂದಿ ಸೇರಿದಂತೆ ಒಟ್ಟು 59 ಜನರನ್ನು ಅಮಾನತುಗೊಳಿಸಲಾಗಿದೆ.
ಉಚ್ಚಾಟಿತ ವೈದ್ಯರಲ್ಲಿ ಸೌರಭ್ ಪಾಲ್, ಆಶಿಶ್ ಪಾಂಡೆ (ಇವರನ್ನು ಸಿಬಿಐ ಬಂಧಿಸಿದೆ), ಅಭಿಷೇಕ್ ಸೇನ್, ಆಯುಶ್ರೀ ಥಾಪಾ, ನಿರ್ಜನ್ ಬಾಗ್ಚಿ, ಸರೀಫ್ ಹಸನ್, ನೀಲಾಗ್ನಿ ದೇಬನಾಥ್, ಅಮರೇಂದ್ರ ಸಿಂಗ್, ಸತ್ಪಾಲ್ ಸಿಂಗ್ ಮತ್ತು ತನ್ವೀರ್ ಅಹ್ಮದ್ ಕಾಜಿ ಸೇರಿದ್ದಾರೆ. ಹಾಸ್ಟೆಲ್‌ಗಳನ್ನು ಖಾಲಿ ಮಾಡಲು ಅವರಿಗೆ 72 ಗಂಟೆಗಳ ಕಾಲಾವಕಾಶ ನೀಡಲಾಗಿದೆ.
ಹೆಚ್ಚುವರಿಯಾಗಿ, ಅವರ ಹೆಸರುಗಳನ್ನು ರಾಜ್ಯ ವೈದ್ಯಕೀಯ ಮಂಡಳಿಗೆ ರವಾನಿಸಲಾಗುತ್ತದೆ. ಅದು ಅವರ ವೈದ್ಯಕೀಯ ನೋಂದಣಿ ಪ್ರಮಾಣಪತ್ರಗಳನ್ನು ಪರಿಶೀಲಿಸಬಹುದು ಮತ್ತು ರದ್ದುಗೊಳಿಸಬಹುದು ಎಂದು ಕಾಲೇಜಿನ ಆಡಳಿತ ಮಂಡಳಿ ತಿಳಿಸಿದೆ.
ರ‍್ಯಾಗಿಂಗ್, ಬೆದರಿಕೆಗಳು, ದೈಹಿಕ ಮತ್ತು ಮಾನಸಿಕ ಕಿರುಕುಳದ ಬಗ್ಗೆ ಹಲವರಿಂದ ದೂರುಗಳು ಬಂದ ಬಳಿಕ ತನಿಖೆ ನಡೆಸಲಾಗಿತ್ತು. ಈ ವೇಳೆ ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಸೇರುವಂತೆ ಒತ್ತಡ, ಕೆಲವು ಮೆರವಣಿಗೆ ಮತ್ತು ಸಭೆಗಳಲ್ಲಿ ಭಾಗವಹಿಸದಂತೆ ಕಿರುಕುಳ ನೀಡಿದ್ದಾರೆ ಎಂದು ಹಲವಾರು ವಿದ್ಯಾರ್ಥಿಗಳು ಆರೋಪಿಸಿದ್ದರು.
ಆಗಸ್ಟ್ 9 ರಂದು RG ಕರ್ ಆಸ್ಪತ್ರೆಯಲ್ಲಿ ಮಹಿಳಾ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯ ನಂತರ ರಾಜ್ಯದಾದ್ಯಂತ ಹಲವಾರು ಸರ್ಕಾರಿ ಆಸ್ಪತ್ರೆಗಳಲ್ಲಿ ರ‍್ಯಾಗಿಂಗ್ ಬಗ್ಗೆ ದೂರುಗಳು ದಾಖಲಾಗಿದ್ದವು.