– 15 ಕಿ.ಮೀ ಚೇಸ್ ಮಾಡಿ ಲಾರಿ ಚಾಲಕನ ಬಂಧನ
ಕೋಲ್ಕತ್ತಾ: ಅತ್ಯಾಚಾರಿಗಳಿಂದ ಮಹಿಳೆಯನ್ನು ರಕ್ಷಿಸಲು ಪೊಲೀಸರು ಸಿನಿಮೀಯ ರೀತಿಯಲ್ಲಿ ಲಾರಿ ಚೇಸ್ ಮಾಡಿದ್ದು, ಸುಮಾರು 15 ಕಿ.ಮೀ. ದೂರ ಹಿಂಬಾಲಿಸಿ ಮಹಿಳೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪಶ್ಚಿಮ ಬಂಗಾಳದ ಪೂರ್ವ ಬುದ್ರ್ವಾನ್ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಪ್ರಾಥಮಿಕ ತನಿಖೆ ವೇಳೆ ಮಾಹಿತಿ ಬಹಿರಂಗವಾಗಿದ್ದು, 30 ವರ್ಷದ ಕಿವುಡ ಹಾಗೂ ಮೂಗ ಮಹಿಳೆಯ ಮೇಲೆ ಅತ್ಯಾಚಾರ ಎಸಗಲು ಕಿಡ್ನ್ಯಾಪ್ ಮಾಡಿದ್ದೆವು ಎಂದು ಲಾರಿ ಚಾಲಕ ಅಬ್ದುಲ್ ಶೇಖ್ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Advertisement
ಪೂರ್ವ ಬುದ್ರ್ವಾನ್‍ನ ಗುಸ್ಕರಾದಲ್ಲಿ ಸ್ವಯಂ ಸೇವಕ ಬಿಕಾಶ್ ಗೊರಾಯಿ ದ್ವಿಚಕ್ರ ವಾಹನದ ಮೂಲಕ ಗಸ್ತು ತಿರುಗುತ್ತಿದ್ದರು. ಈ ವೇಳೆ ಲಾರಿಯ ಕ್ಯಾಬೀನ್‍ನಿಂದ ಮಹಿಳೆ ಕಿರುಚುತ್ತಿದ್ದ ಧ್ವನಿ ಕೇಳಿಸಿದೆ. ಆಗ ಚಾಲಕನನ್ನು ಹೊರಗೆ ಬರುವಂತೆ ತಿಳಿಸಿದ್ದಾರೆ. ಚಾಲಕ ಇದ್ದಕ್ಕಿದ್ದಂತೆ ವಾಹನವನ್ನು ಚಲಾಯಿಸಿದ್ದಾನೆ. ಬಿಕಾಶ್ ಲಾರಿಯನ್ನು ಬಿಡದೆ ಹಿಂಬಾಲಿಸಿದ್ದಾರೆ. ಆದರೆ ದ್ವಿಚಕ್ರ ವಾಹನದಿಂದ ಇವರನ್ನು ಹಿಂಬಾಲಿಸಲು ಆಗುವುದಿಲ್ಲ ಎಂದು ಅರಿತು ಸ್ಥಳೀಯ ಪೊಲೀಸರಿಗೆ ಕರೆ ಮಾಡಿ, ಘಟನೆ ಕುರಿತು ವಿವರಿಸಿ, ವಾಹನದ ನೋಂದಣಿ ಸಂಖ್ಯೆಯನ್ನು ನೀಡಿದ್ದಾರೆ.
Advertisement
Advertisement
ಎಸ್‍ಯುವಿ(ಸ್ಪೋರ್ಟ್ ಯುಟಿಲಿಟಿ ವೆಹಿಕಲ್) ಕಾರಿನಲ್ಲಿ ಗಸ್ತಿನಲ್ಲಿದ್ದ ಪೊಲೀಸರಿಗೆ ಮಾಹಿತಿ ರವಾನೆಯಾಗಿದ್ದು, ಲಾರಿಯನ್ನು ಹಿಂಬಾಲಿಸಿದ್ದಾರೆ. ರಾಜ್ಯ ಹೆದ್ದಾರಿಯಲ್ಲಿ ಲಾರಿ ಸಾಗುತ್ತಿದ್ದು, ಚಾಲಕ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡುತ್ತಿದ್ದರಿಂದ ವಾಹನವನ್ನು ಓವರ್‍ಟೇಕ್ ಮಾಡಲು ಕಷ್ಟವಾಯಿತು. ಅಲ್ಲದೆ ಚಾಲಕ ರಸ್ತೆ ತುಂಬೆಲ್ಲ ಲಾರಿಯನ್ನು ತಿರುಗಿಸುತ್ತಿದ್ದ, ನಾವು ಓವರ್‍ಟೇಕ್ ಮಾಡಲು ಪ್ರಯತ್ನಿಸಿದಾಗಲೆಲ್ಲ ನಮ್ಮ ವಾಹನದ ಮೇಲೆ ಲಾರಿ ಹರಿಸಲು ಯತ್ನಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಅಗಲವಾದ ರಸ್ತೆ ಬರುವವರೆಗೆ ಲಾರಿಯನ್ನು ಓವರ್‍ಟೇಕ್ ಮಾಡಲು ಸಾಧ್ಯವಾಗಲಿಲ್ಲ. ನಂತರ ಲಾರಿಯನ್ನು ಓವರ್‍ಟೇಕ್ ಮಾಡಿ, ನಿಲ್ಲಿಸಿದೆವು. ಚಾಲಕನ ಕ್ಯಾಬಿನನ್ನು ಪರಿಶೀಲಿಸಿದ್ದು, ಈ ವೇಳೆ ಮಹಿಳೆಯನ್ನು ಡ್ರೈವರ್ ಸೀಟ್ ಹಿಂದೆ ಕೂರಿಸಲಾಗಿತ್ತು. ಮಹಿಳೆಯ ಕೈಕಾಲುಗಳನ್ನು ಕಟ್ಟಲಾಗಿತ್ತು ಎಂದು ಪೂರ್ವ ಬುದ್ರ್ವಾನ್‍ನ ಎಸ್‍ಪಿ ಭಾಸ್ಕರ್ ಮುಖರ್ಜಿ ವಿವರಿಸಿದ್ದಾರೆ.
ಲಾರಿ ಚಾಲಕ ಅಬ್ದುಲ್ ಶೇಖ್‍ನನ್ನು ಪೊಲೀಸರು ಬಂಧಿಸಿದ್ದು, ಅಪಹರಣ ಹಾಗೂ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಸುಮೊಟೋ ಪ್ರಕರಣವನ್ನು ದಾಖಲಿಸಲಾಗಿದೆ. ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಿಳೆ ಊರಿನವಳಲ್ಲ ಎಂಬುದನ್ನು ಅರಿತ ಲಾರಿ ಚಾಲಕ ಆಕೆಯನ್ನು ಹಿಂಬಾಲಿಸಿ, ನಂತರ ಲಾರಿಯೊಳಗೆ ಹತ್ತುವಂತೆ ಬಲವಂತ ಮಾಡಿದ್ದಾನೆ. ನಂತರ ಕೈ ಕಾಲುಗಳನ್ನು ಕಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.