LatestNational

ಸಿಬಿಐ Vs ಮಮತಾ: ಅಧಿಕಾರಿಗಳನ್ನೇ ವಶಕ್ಕೆ ಪಡೆದ ಪೊಲೀಸರು – ದೀದಿ ಅಹೋರಾತ್ರಿ ಧರಣಿ

Advertisements

– ಇಂದು ಸುಪ್ರೀಂಗೆ ಸಿಬಿಐ
– ಕೋಲ್ಕತ್ತಾದಲ್ಲಿ ಭಾರೀ ಹೈಡ್ರಾಮ
– ಮಮತಾಗೆ ನಾಯಕರ ಬೆಂಬಲ
– ರಾಷ್ಟ್ರಪತಿ ಆಡಳಿತ ಜಾರಿಗೆ ಬಿಜೆಪಿ ಒತ್ತಾಯ

ಕೋಲ್ಕತ್ತಾ/ನವದೆಹಲಿ: ಇತಿಹಾಸವೇ ಕಂಡರಿಯದ ಕಾನೂನು ಹಾಗೂ ಬೀದಿ ಸಂಘರ್ಷಕ್ಕೆ ಪಶ್ಚಿಮ ಬಂಗಾಳ ಸಾಕ್ಷಿಯಾಗಿದೆ. ಕೋಲ್ಕತ್ತಾ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರನ್ನು ಪ್ರಶ್ನಿಸಲು ತೆರಳಿದ್ದ ಸಿಬಿಐ ಅಧಿಕಾರಿಗಳನ್ನೇ ಭಾನುವಾರ ರಾತ್ರಿ ವಶಕ್ಕೆ ಪಡೆದ ಪ್ರಕರಣ ಈಗ ರಾಜಕೀಯ ತಿರುವು ಪಡೆದುಕೊಂಡಿದೆ.

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಐತಿಹಾಸಿಕ ಮೆಟ್ರೋ ಸಿನಿಮಾ ಬಳಿ ಅಹೋರಾತ್ರಿ ಧರಣಿ ನಡಸಿದ್ದಾರೆ. ಕೋಲ್ಕತ್ತಾದಲ್ಲಿರುವ ಸಿಬಿಐ ಕಚೇರಿ ಬ್ಲಾಕ್ ಮಾಡಿ ಅಹೋರಾತ್ರಿ ಧರಣಿ ಕುಳಿತಿದ್ದು, ಮೋದಿ ತೊಲಗಿಸಿ, ದೇಶ ಉಳಿಸಿ ಆಂದೋಲನಕ್ಕೆ ಕರೆ ನೀಡಿದ್ದಾರೆ.

ರಾಜ್ಯಾದ್ಯಂತ ಟಿಎಂಸಿ ಕಾರ್ಯಕರ್ತರು ಬೀದಿಗಿಳಿದಿದ್ದು, ರೈಲ್ ರೋಕೋ ಚಳವಳಿ ನಡೆಸಿದ್ದಾರೆ. ಅಧಿಕಾರಿಗಳನ್ನು ವಶಕ್ಕೆ ಪಡೆದ ಬೆನ್ನಲ್ಲೆ ಸಿಬಿಐ ತನ್ನ ಸಿಬ್ಬಂದಿ ಭದ್ರತೆಗೆ ಸಿಆರ್‍ಪಿಎಫ್ ನಿಯೋಜಿಸಿದೆ. ರಾಜ್ಯಪಾಲರಾದ ಕೇಸರಿನಾಥ್ ತ್ರಿಪಾಠಿ ಈ ಪ್ರಕರಣದ ಸಂಪೂರ್ಣ ಮಾಹಿತಿಯನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ನೀಡಿದೆ.

ಪಶ್ಚಿಮ ಬಂಗಾಳ ಸರ್ಕಾರದ ಅಧಿಕಾರಿಗಳು ಬಹುಕೋಟಿ ಹಗರಣದ ವಿರುದ್ಧ ತನಿಖೆಗೆ ಸಹಕಾರ ನೀಡುತ್ತಿಲ್ಲ ಎಂದು ಆರೋಪಿರುವ ಸಿಬಿಐನ ಹಂಗಾಮಿ ನಿರ್ದೇಶಕ ಎಂ.ನಾಗೇಶ್ವರ ರಾವ್ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಬಿಜೆಪಿ ನಾಯಕರು ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸಂಜೆ ಏನಾಯ್ತು?
ಭಾನುವಾರ ಸಂಜೆ 6.30ರ ವೇಳೆಗೆ ಕೋಲ್ಕತ್ತಾ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ನಿವಾಸಕ್ಕೆ 40ಕ್ಕೂ ಹೆಚ್ಚು ಸಿಬಿಐ ಅಧಿಕಾರಿಗಳ ತಂಡ ಆಗಮಿಸಿದೆ. ಈ ತಂಡ ಮನೆ ಪ್ರವೇಶಿಸಲು ಅವಕಾಶ ನೀಡಲಿಲ್ಲ. ಸುದ್ದಿ ತಿಳಿಯುತ್ತಲೇ ಪಶ್ಚಿಮ ಬಂಗಾಳ ಪೊಲೀಸ್ ಮಹಾನಿರ್ದೇಶಕ ಸೇರಿದಂತೆ ಹಿರಿಯ ಅಧಿಕಾರಿಗಳು ಧಾವಿಸಿದರು. ಈ ವೇಳೆ ಸಿಬಿಐ ಅಧಿಕಾರಿಗಳು ಮತ್ತು ಕೋಲ್ಕತ್ತಾ ಪೊಲೀಸರ ನಡುವೆ ಮಾತಿನ ಚಕಮಕಿ, ತಳ್ಳಾಟವೂ ನಡೆಯಿತು. ಅಂತಿಮವಾಗಿ 40 ಮಂದಿ ಅಧಿಕಾರಿಗಳ ಪೈಕಿ 15 ಮಂದಿಯನ್ನು ಜೀಪ್‍ನಲ್ಲಿ ಕುಳ್ಳಿರಿಸಿಕೊಂಡು ಹೋದರು.

ಸಿಬಿಐ ಅಧಿಕಾರಿಗಳು ಬಂದ ವಿಚಾರ ತಿಳಿಯುತ್ತಲೇ ಕೋಪಗೊಂಡ ಮಮತಾ ಬ್ಯಾನರ್ಜಿ ರಾಜೀವ್ ಕುಮಾರ್ ನಿವಾಸಕ್ಕೆ ಆಗಮಿಸಿ ಸುದ್ದಿಗೋಷ್ಠಿ ನಡೆಸಿದರು. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಪಶ್ಚಿಮ ಬಂಗಾಳದಲ್ಲಿ ದಂಗೆಗೆ ಕಾರಣವಾಗುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಮಮತಾ ಬ್ಯಾನರ್ಜಿ ಪ್ರತಿಭಟನೆಯ ವೇಳೆ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಧರಣಿ ಸ್ಥಳದಲ್ಲಿಯೇ ಕುಳಿತಿದ್ದರು.

ಸಿಬಿಐ ಹೋಗಿದ್ದು ಯಾಕೆ?
ಬಂಗಾಳ ಶಾರದಾ ಮತ್ತು ರೋಸ್ ವ್ಯಾಲಿ ಹಗರಣದ ತನಿಖೆಗೆ ವಿಶೇಷ ಪೊಲೀಸ್ ತಂಡ ರಚನೆಯಾಗಿದ್ದು, ಈ ತಂಡದ ನೇತೃತ್ವವನ್ನು ರಾಜೀವ್ ಕುಮಾರ್ ವಹಿಸಿದ್ದರು. ತನಿಖೆ ವಿಳಂಬವಾಗಿದ್ದ ಕಾರಣ ಸಿಬಿಐ ರಾಜೀವ್ ಕುಮಾರ್ ಮೇಲೆಯೇ ಶಂಕೆ ವ್ಯಕ್ತಪಡಿಸಿತ್ತು. ವಿಚಾರಣೆಗೆ ಹಾಜರಾಗುವಂತೆ ಸಿಬಿಐ ರಾಜೀವ್ ಕುಮಾರ್ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಸಮನ್ಸ್ ಗೆ ಹಾಜರಾಗದ ಹಿನ್ನೆಲೆಯಲ್ಲಿ ಸಿಬಿಐ ರಾಜೀವ್ ಕುಮಾರ್ ಅವರನ್ನು ಬಂಧಿಸಲು ಭಾನುವಾರ ಅವರ ನಿವಾಸಕ್ಕೆ ತೆರಳಿತ್ತು.

ಸಿಬಿಐ ಹೇಳೋದು ಏನು?
ಸುಪ್ರೀಂ ಆದೇಶದ ಹಿನ್ನೆಲೆಯಲ್ಲಿ ಚಿಟ್‍ಫಂಡ್ ಹಗರಣದ ತನಿಖೆ ನಡೆದಿದೆ. ಈ ತನಿಖೆಗೆ ಯಾರ ಅನುಮತಿಯೂ ಬೇಕಿಲ್ಲ. ಸ್ಥಳೀಯ ಪೊಲೀಸರು ತನಿಖೆಗೆ ಸಹಕಾರ ನೀಡಬೇಕು. ಆದರೆ ನಮ್ಮ ಮನವಿಯನ್ನು ಪೊಲೀಸರು ನಿರಾಕರಿಸಿದ ಹಿನ್ನೆಲೆಯಲ್ಲಿ ಸಿಆರ್‍ಪಿಎಫ್ ಪಡೆಗಳನ್ನು ಭದ್ರತೆಗೆ ಕರೆಸಿಕೊಂಡಿದ್ದೇವೆ ಎಂದು ಸಿಬಿಐ ನಿರ್ದೇಶಕ ನಾಗೇಶ್ವರ ರಾವ್ ತಿಳಿಸಿದ್ದಾರೆ.

ನಾಯಕರಿಂದ ಬೆಂಬಲ:
ಮಮತಾ ಸುದ್ದಿಗೋಷ್ಠಿ ನಡೆಸಿದ ಬೆನ್ನಲ್ಲೇ ಮಾಜಿ ಪ್ರಧಾನಿ ದೇವೇಗೌಡ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು, ಎಸ್‍ಪಿ ಅಧ್ಯಕ್ಷ ಅಖೀಲೇಶ್ ಯಾದವ್ ಸೇರಿದಂತೆ ಪ್ರಮುಖರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published.

Back to top button