ನವದೆಹಲಿ: ಕಳೆದ 2 ಪಂದ್ಯಗಳಲ್ಲಿ ಸತತ ಸೋಲುಕಂಡಿದ್ದ ಕೆಕೆಆರ್ ತಂಡ ಆಲ್‌ರೌಂಡರ್ ಆಟ ಪ್ರದರ್ಶಿಸಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ 14 ರನ್‌ಗಳ ಜಯಗಳಿಸಿತು.
ಡೆಲ್ಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ 20 ಓವರ್‌ನಲ್ಲಿ 9 ವಿಕೆಟ್ ನಷ್ಟಕ್ಕೆ 204 ರನ್ ಕಲೆಹಾಕಿತ್ತು. ನಂತರ ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್‌ನಲ್ಲಿ 190ರನ್ ಗಳಿಸಿ ಕೆಕೆಆರ್ ತಂಡಕ್ಕೆ ಶರಣಾಯಿತು.
205 ರನ್ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಆಟಗಾರ ಫಾಫ್ ಡು ಪ್ಲೆಸಿಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. 45 ಬಾಲ್‌ಗೆ 62 ರನ್ (7 ಬೌಂಡರಿ, 2 ಸಿಕ್ಸ್) ಸಿಡಿಸುವ ಮೂಲಕ ಆಕರ್ಷಕ ಅರ್ಧಶತಕ ಬಾರಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಬ್ಯಾಟರ್‌ಗಳು ಕೆಕೆಆರ್ ಬೌಲರ್‌ಗಳ ದಾಳಿಗೆ ತತ್ತರಿಸಿದರು.
ಕರುಣ್ ನಾಯರ್ ಕೇವಲ 15 ರನ್ ಗಳಿಸಿ ಔಟಾದರೆ, ಕನ್ನಡಿಗ ಕೆ.ಎಲ್ ರಾಹುಲ್ 7 ರನ್‌ಗಳಿಸಿ ರನೌಟ್ ಆಗಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಬಳಿಕ ಬಂದ ತಂಡದ ನಾಯಕ ಅಕ್ಷರ್ ಪಟೇಲ್ ತಂಡದ ಮೊತ್ತವನ್ನು ಹೆಚ್ಚಿಸುವಲ್ಲಿ ಶ್ರಮಿಸಿದರು. ಅಕ್ಷರ್ 23 ಬಾಲ್‌ಗೆ 43 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು. ವಿಪ್ರಜ್ ನಿಗಮ್ 19 ಬಾಲ್‌ಗೆ 38ರನ್ ಸಿಡಿಸಿದರು.
ಸುನಿಲ್ ನರೈನ್ 3 ವಿಕೆಟ್ ಕಬಳಿಸಿದರೆ, ವರುಣ್ ಚಕ್ರವರ್ತಿ 2 ವಿಕೆಟ್ ಕಿತ್ತರು. ಅನುಕುಲ್ ರಾಯ್ ಹಾಗೂ ವೈಭವ್ ಅರೋರ ತಲಾ 1 ವಿಕೆಟ್ ಪಡೆಯುವ ಮೂಲಕ ಡೆಲ್ಲಿ ತಂಡವನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು.
ಟಾಸ್ ಸೋತು ಮೊದಲು ಕ್ರೀಸ್‌ಗಿಳಿದ ಕೆಕೆಆರ್ ತಂಡವು ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತ್ತು. ಆರಂಭಿಕ ಆಟಗಾರರಾದ ರೆಹಮಾನುಲ್ಲ ಗುರ್ಬಾಜ್(26) ಮತ್ತು ಸುನಿಲ್ ನರೈನ್(27) ರನ್ ಗಳಿಸುವ ಮೂಲಕ ಉತ್ತಮ ಆರಂಭ ನೀಡಿದರು.
ಬಳಿಕ ಬಂದ ನಾಯಕ ಅಜಿಂಕ್ಯ ರಹಾನೆ(26) ರನ್ ಕಲೆ ಹಾಕಿ ಔಟಾದರು. ಅಂಗ್‌ಕ್ರಿಶ್ ರಘುವಂಶಿ 32 ಬಾಲ್‌ಗೆ 44 ರನ್ (3 ಬೌಂಡರಿ, 2ಸಿಕ್ಸ್) ಬಾರಿಸುವ ಮೂಲಕ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದರು. ರಿಂಕು ಸಿಂಗ್ 36 ರನ್ ಸಿಡಿಸಿ ಪೆವಿಲಿಯನ್ ಸೇರಿದರು. ಅಂತಿಮ ಓವರ್‌ಗಳಲ್ಲಿ ಅಬ್ಬರಿಸಿದ ಆಂಡ್ರೆ ರಸೆಲ್(17) ತಂಡದ ಮೊತ್ತ 200ರ ದಾಟಿ ದಾಟುವಲ್ಲಿ ನೆರವಾದರು.
ಡೆಲ್ಲಿ ಬೌಲರ್‌ಗಳಾದ ಮಿಚೆಲ್ ಸ್ಟಾರ್ಕ್ 3, ವಿಪ್ರಾಜ್ ನಿಗಮ್ ಮತ್ತು ಅಕ್ಷರ್ ಪಟೇಲ್ ತಲಾ 2 ವಿಕೆಟ್ ವಿಕೆಟ್‌ಕಿತ್ತರು.