– ನಾಳೆ ಸಂಜೆಯೊಳಗೆ ಕರ್ತವ್ಯಕ್ಕೆ ಹಾಜರಾಗಲು ವೈದ್ಯರಿಗೆ ಸೂಚನೆ
ನವದೆಹಲಿ: ಔಪಚಾರಿಕ ಕೋರಿಕೆ ಇಲ್ಲದೇ ಟ್ರೈನಿ ವೈದ್ಯೆಯ ಮೃತದೇಹದ ಮರಣೋತ್ತರ ಪರೀಕ್ಷೆ ಹೇಗೆ ನಡೆಸಲಾಯಿತು ಎಂದು ಪಶ್ಚಿಮ ಬಂಗಾಳ (West Bengal) ಸರ್ಕಾರಕ್ಕೆ ಸುಪ್ರೀಂ ಕೋರ್ಟ್ (Supreme Court) ಚಾಟಿ ಬೀಸಿದೆ.
Advertisement
ಶವವನ್ನು ಮರಣೋತ್ತರ ಪರೀಕ್ಷೆಗೆ ನೀಡುವಾಗ ಒಪ್ಪಿಗೆ ಪತ್ರ ಅಗತ್ಯವಾಗಿಬೇಕು. ಅದಿಲ್ಲದೇ ವೈದ್ಯರು ಶವವನ್ನು ಪಡೆಯುವುದಿಲ್ಲ ಈ ನಿಯಮಗಳ ಮಧ್ಯೆ ಔಪಚಾರಿಕ ಅನುಮತಿ ಇಲ್ಲದೇ ಮರಣೋತ್ತರ ಪರೀಕ್ಷೆ ಹೇಗೆ ನಡೆಸಲಾಯಿತು ಎಂದು ಕೋರ್ಟ್ ಪ್ರಶ್ನಿಸಿದೆ.
Advertisement
ಕೊಲ್ಕತ್ತಾದ ಆರ್.ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ (RG Kar Hospital) ಟ್ರೈನಿ ವೈದ್ಯೆ ಮೇಲೆ ನಡೆದ ಅತ್ಯಚಾರ ಮತ್ತು ಕೊಲೆ ಪ್ರಕರಣದ (Kolkata horror) ವಿಚಾರಣೆ ಮುಂದುವರಿಸಿದ ಸಿಜೆಐ ಡಿ.ವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠ, ಕೊಲೆ ಪ್ರಕರಣದಲ್ಲಿ ಅಸ್ವಾಭಾವಿಕ ಸಾವಿನ ವರದಿಯ ಸಮಯದ ಬಗ್ಗೆ ಸ್ಪಷ್ಟೀಕರಣವನ್ನು ಕೇಳಿತು.
Advertisement
ವಿಚಾರಣೆ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಪ್ರಕರಣದ ಮಧ್ಯಂತರ ವರದಿಯನ್ನು ಸಲ್ಲಿಸಿತು. ಸಿಬಿಐ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಫೋರೆನ್ಸಿಕ್ಸ್ ವರದಿ ಮಾದರಿಗಳನ್ನು ದೆಹಲಿಯಲ್ಲಿರುವ ಆಲ್ ಇಂಡಿಯಾ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‍ಗೆ ಕಳುಹಿಸಲು ಯೋಜಿಸಿದೆ. ಸಾಕ್ಷ್ಯಾಧಾರಗಳ ನಿರ್ವಹಣೆಯಲ್ಲಿನ ವ್ಯತ್ಯಾಸಗಳಾಗಿವೆ. ರಕ್ತದ ಮಾದರಿಗಳನ್ನು ಅಗತ್ಯವಿರುವ 4 ಡಿಗ್ರಿ ಸೆಲ್ಸಿಯಸ್‍ನಲ್ಲಿ ಸಂಗ್ರಹಿಸಲಾಗಿಲ್ಲ. ಅತ್ಯಾಚಾರ ಮತ್ತು ಕೊಲೆ ತನಿಖೆಯಲ್ಲಿ ಮೊದಲ ಕೆಲವು ಗಂಟೆಗಳ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು.
Advertisement
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಅದಕ್ಕಾಗಿಯೇ ನಿಮ್ಮ ಬಳಿ ಸಂಪೂರ್ಣ ಸಿಸಿಟಿವಿ ದೃಶ್ಯಾವಳಿ ಇದೆಯೇ ಅಥವಾ ಇಲ್ಲವೇ ಎಂದು ಕೇಳಿದರು. ಆರೋಪಿಗಳು ಹೊರಬಂದ ನಂತರ ಬೇರೆ ಯಾರು ಪ್ರವೇಶಿಸಿದರು? ಎಂದರು. ಇದಕ್ಕೆ ಉತ್ತರಿಸಿದ ಬಂಗಾಳ ಸರ್ಕಾರ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಸಾಕ್ಷಿಯಾಗಿ ಎಲ್ಲವನ್ನೂ ವಿಡಿಯೋ ರೆಕಾರ್ಡ್ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡರು.
ವೈದ್ಯರು ಮುಷ್ಕರ ನಡೆಸಿದ್ದರಿಂದ 23 ಜನರು ಸಾವನ್ನಪ್ಪಿದ್ದಾರೆ ಎಂದು ಸಿಬಲ್ ನ್ಯಾಯಾಲಯಕ್ಕೆ ತಿಳಿಸಿದ್ದು, ರಾಜ್ಯ ಆರೋಗ್ಯ ಇಲಾಖೆ ನೀಡಿದ ವರದಿಯನ್ನು ಕೋರ್ಟ್‍ಗೆ ಸಲ್ಲಿಸಲಾಯಿತು. ಇದೇ ವೇಳೆ ವೈದ್ಯರಿಕೆ ಬೆದರಿಕೆ ಬರುತ್ತಿವೆ ಎಂದು ಹಿರಿಯ ವಕೀಲೆ ಗೀತಾ ಲೂತ್ರಾ ಪ್ರಸ್ತಾಪಿಸಿದರು. ಅಲ್ಲದೇ ವೈದ್ಯರು ಕರ್ತವ್ಯಕ್ಕೆ ಬರಲು ಹೆದರುತ್ತಿದ್ದಾರೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ, ವೈದ್ಯರು ಕರ್ತವ್ಯಕ್ಕೆ ಮರಳದಿದ್ದರೆ ಕ್ರಮ ಕೈಗೊಳ್ಳುವುದು ತಡೆಯಲು ಸಾಧ್ಯವಿಲ್ಲ. ಕರ್ತವ್ಯಕ್ಕೆ ಮರಳುವ ವೈದ್ಯರ ವಿರುದ್ಧ ಕ್ರಮ ತೆಗೆದುಕೊಳ್ಳದಂತೆ ಸೂಚಿಸಿದೆ. ಒಂದು ವೇಳೆ ಕರ್ತವ್ಯಕ್ಕೆ ಮರಳದಿದ್ದರೆ ರಾಜ್ಯ ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ. ನಾವು ಇದನ್ನು ತಡೆಯಲು ಸಾಧ್ಯವಾಗುವುದಿಲ್ಲ. ನಾಳೆ ಸಂಜೆ 5 ಗಂಟೆಯೊಳಗೆ ವೈದ್ಯರು ಕೆಲಸಕ್ಕೆ ಮರಳಬೇಕು. ರಾಜ್ಯ ಸರ್ಕಾರ ಅವರ ವಿರುದ್ಧ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಬಾರದು. ಒಂದು ವೇಳೆ ಕೆಲಸಕ್ಕೆ ಗೈರುಹಾಜರಾದರೆ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬಹುದು ಎಂದು ಎಚ್ಚರಿಕೆ ನೀಡಿತು.
ಆರ್.ಜಿ ಕರ್ ಕಾಲೇಜಿಗೆ ಭದ್ರತೆ ನೀಡುವ ದೃಷ್ಠಿಯಿಂದ ಬಂಗಾಳ ಗೃಹ ಇಲಾಖೆಯ ಅಧಿಕಾರಿ ಮತ್ತು ಸಿಐಎಸ್‍ಎಫ್ ಹಿರಿಯ ಅಧಿಕಾರಿ ಸಭೆ ನಡೆಸಬೇಕು ಮತ್ತು ಕೂಡಲೇ ವ್ಯವಸ್ಥಿತ ಭದ್ರತೆ ಒದಗಿಸಬೇಕು ಎಂದು ಪೀಠ ಸೂಚಿಸಿತು.