Connect with us

Corona

ಕೊರೊನಾ ಎಫೆಕ್ಟ್ – ಮಾಜಿ ಐಪಿಎಲ್ ಆಟಗಾರನಿಂದ ಪಿಂಚಣಿ, ಸಂಬಳ ದಾನ

Published

on

ಕೋಲ್ಕತಾ: ಕೊರೊನಾ ವೈರಸ್ ವಿರುದ್ಧ ಹೋರಾಡಲು ರಾಜ್ಯ ಸರ್ಕಾರಕ್ಕೆ ನೆರವಾಗುವ ನಿಟ್ಟಿನಲ್ಲಿ ಪಶ್ಚಿಮ ಬಂಗಾಳದ ಕ್ರೀಡಾ ಸಚಿವ ಹಾಗೂ ಮಾಜಿ ಕ್ರಿಕೆಟಿಗ ಲಕ್ಷ್ಮಿ ರತನ್ ಶುಕ್ಲಾ ಅವರು ತಮ್ಮ ಮೂರು ತಿಂಗಳ ಸಂಬಳ ಮತ್ತು ಬಿಸಿಸಿಐ ಪಿಂಚಣಿಯನ್ನು ದಾನ ಮಾಡಿದ್ದಾರೆ.

ಲಕ್ಷ್ಮಿ ರತನ್ ಶುಕ್ಲಾ ಅವರು ಭಾರತದ ಮಾಜಿ ಆಟಗಾನಾಗಿದ್ದು, ಈಗ ಪ್ರಸ್ತುತ ಪಶ್ಚಿಮ ಬಂಗಾಳದ ಕ್ರೀಡಾ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರ ಜೊತೆಗೆ ಐಪಿಎಲ್‍ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಪರವಾಗಿ ಆಟವಾಡಿದ್ದಾರೆ. ಹಾಗಾಗಿ ಈಗ ರಾಜ್ಯ ಕೊರೊನಾ ವೈರಸ್ ಭೀತಿಯನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಅವರು ಧನಸಹಾಯ ಮಾಡುವ ನಿರ್ಧಾರ ಮಾಡಿದ್ದಾರೆ.

ಈ ವಿಚಾರವಾಗಿ ಮಾತನಾಡಿರುವ ಅವರು, ನಾವೆಲ್ಲರೂ ನಮ್ಮ ಸಾಮಥ್ರ್ಯಕ್ಕೆ ಅನುಗುಣವಾಗಿ ನಮ್ಮ ಕೊಡುಗೆ ನೀಡುವ ಸಮಯ ಬಂದಿದೆ. ನಾನು ಈಗಾಗಲೇ ನನ್ನ ಶಾಸಕ ಸ್ಥಾನದ ಮೂರು ತಿಂಗಳ ಸಂಬಳವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದೇನೆ. ಅಲ್ಲದೆ ನನಗೆ ಬಿಸಿಸಿಐನಿಂದ ಪಿಂಚಣಿ ಬರುತ್ತದೆ. ನಾನು ಬಿಸಿಸಿಐ ಪಿಂಚಣಿಯ ಮೂಲಕ ಬರುವ ಮೂರು ತಿಂಗಳ ಹಣವನ್ನು ಸಹ ದೇಣಿಗೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ಶುಕ್ಲಾ ಅವರು 1999ರಲ್ಲಿ ಭಾರತಕ್ಕಾಗಿ ಮೂರು ಏಕದಿನ ಪಂದ್ಯಗಳನ್ನು ಆಡಿದ್ದರು. ಆದರೆ ನಂತರ ಪಾದದ ಗಾಯದಿಂದಾಗಿ ಅವರ ವೃತ್ತಿಜೀವನವನ್ನು ಮೊಟಕುಗೊಳಿಸಬೇಕಾಯಿತು. ಆದರೆ ಅವರು ದೇಶೀಯ ಕ್ರಿಕೆಟ್‍ನಲ್ಲಿ ಗೌರವಾನ್ವಿತ ಆಲ್‍ರೌಂಡರ್ ಆಗಿದ್ದರು. 100ಕ್ಕೂ ಹೆಚ್ಚು ಪ್ರಥಮ ದರ್ಜೆ ಪಂದ್ಯಗಳಲ್ಲಿ ಬಂಗಾಳ ಮತ್ತು ಪೂರ್ವ ವಲಯವನ್ನು ಪ್ರತಿನಿಧಿಸಿದ್ದರು. ಇದರ ಜೊತೆಗೆ ಐಪಿಎಲ್ ವಿಜೇತ ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲಿ ಆಡಿದ್ದರು.

ಕೊರೊನಾ ವೈರಸ್ ದೇಶದಲ್ಲಿ ಭಯದ ವಾತಾವರಣವನ್ನು ಸೃಷ್ಟಿ ಮಾಡಿದೆ. ಭಾರತದಲ್ಲಿ ಇಲ್ಲಿಯವರೆಗೆ ಸುಮಾರು 851 ಜನರು ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿದ್ದಾರೆ. ಜೊತೆಗೆ 20 ಜನ ಸಾವನ್ನಪ್ಪಿದ್ದಾರೆ. ಹಾಗೇಯೆ ಪಶ್ಚಿಮ ಬಂಗಾಳದಲ್ಲಿ 10 ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದರೆ, ಓರ್ವ ಇದರಿಂದ ಸಾವನ್ನಪ್ಪಿದ್ದಾನೆ. ವಿಶ್ವದಲ್ಲಿ 5 ಲಕ್ಷಕ್ಕೂ ಹೆಚ್ಚು ಕೊರೊನಾ ವೈರಸ್ ಸೋಂಕಿತರಿದ್ದು, ಸಾವನ್ನಪ್ಪಿದ್ದವರ ಸಂಖ್ಯೆ 24 ಸಾವಿರ ದಾಟಿದೆ.

Click to comment

Leave a Reply

Your email address will not be published. Required fields are marked *