CoronaCrimeLatestMain PostNational

ಮಾಸ್ಕ್ ಧರಿಸಿಲ್ಲವೆಂದು ವಿಕಲಚೇತನ ಮಗನನ್ನೇ ಕೊಲೆಗೈದ ತಂದೆ

ಕೋಲ್ಕತ್ತಾ: ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ಮನೆಯಿಂದ ಹೊರಹೋಗುವಾಗ ಎಲ್ಲರೂ ಮಾಸ್ಕ್ ಬಳಕೆ ಮಾಡುತ್ತಿದ್ದಾರೆ. ಅಂತೆಯೇ ತಂದೆಯೊಬ್ಬ ತನ್ನ ಮಗ ಮಾಸ್ಕ್ ಧರಿಸಿಲ್ಲವೆಂದು ಸಿಟ್ಟುಗೊಂಡು ಆತನನ್ನು ಕೊಲೆ ಮಾಡಿದ ಘಟನೆ ಉತ್ತರ ಕೋಲ್ಕತ್ತಾದಲ್ಲಿ ನಡೆದಿದೆ.

ಸಿರ್ಷೆಂದು ಮಲ್ಲಿಕ್(45) ಎಂಬ ವಿಕಲಚೇತನ ಮಗನನ್ನು ಬನ್ಶಿಧರ್ ಮಲ್ಲಿಕ್(78) ಕೊಲೆ ಮಾಡಿದ್ದಾನೆ. ಬಳಿಕ ತಾನೇ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದು, ಪೊಲೀಸರು ಬಂಧಿಸಿದ್ದಾರೆ. ಆರೋಪಿಯ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಈ ಸಂಬಂಧ ಕೋಲ್ಕತ್ತಾದ ಹಿರಿಯ ಪೊಲೀಸ್ ಅಧಿಕಾರಿ ಮಾತನಾಡಿ, ಶನಿವಾರ ಸಂಜೆ 7 ಗಂಟೆ ಸುಮಾರಿಗೆ ಆರೋಪಿ ಶ್ಯಾಂಪುಕರ್ ಪೊಲೀಸ್ ಠಾಣೆಗೆ ಬಂದಿದ್ದು, 5.30ರ ವೇಳೆಗೆ ನಾನು ನನ್ನ ಮಗನನ್ನು ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ. ಮಗ ವಿಕಲಚೇತನನಾಗಿದ್ದಾನೆ. ಆತನನ್ನು ಬಟ್ಟೆಯಿಂದ ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ. ಕೂಡಲೇ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಮೃತದೇಹವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಬನ್ಶಿಧರ್ ಸದ್ಯ ನಿವೃತ್ತಿ ಹೊಂದಿದ್ದಾನೆ. ಈತನ ಮಗ ಕೆಲಸಕ್ಕೆ ತೆರಳುತ್ತಿರಲಿಲ್ಲ. ತಂದೆ-ಮಗನ ಜೊತೆ ಹೊಂದಾಣಿಕೆಯಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಕೆಲ ದಿನಗಳಿಂದ ಮಾಸ್ಕ್ ಹಾಕಿಕೊಳ್ಳದೆ ಹೊರಗಡೆ ಹೋಗುತ್ತಿರುವುದಕ್ಕೆ ತಂದೆ-ಮಗನ ಮಧ್ಯೆ ಆಗಾಗ ಜಗಳವಾಗುತ್ತಿತ್ತು. ಆದರೂ ಮಗ ತಂದೆಯ ಮಾತನ್ನು ಲೆಕ್ಕಿಸದೇ ಮಾಸ್ಕ್ ಧರಿಸದೆಯೇ ಮನೆಯಿಂದ ಹೊರ ಹೋಗುತ್ತಿದ್ದನು. ಇದರಿಂದ ಸಿಟ್ಟುಕೊಂಡ ತಂದೆ, ಶನಿವಾರ ಸಂಜೆ ಮಗನನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.

ಮಾರ್ಚ್ 12ರಿಂದ ಬಂಗಾಳ ಸರ್ಕಾರ ಎಲ್ಲಾ ನಾಗರಿಕರು ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಿತ್ತು. ಅದರಲ್ಲೂ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೆ ಹೋಗಬಾರದೆಂದು ಕಡ್ಡಾಯ ಮಾಡಿ ಆದೇಶಿಸಿದೆ.

Leave a Reply

Your email address will not be published. Required fields are marked *

Back to top button