ಕೋಲ್ಕತ್ತಾ: ಮಳೆಯ ಅವಾಂತರ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ವಿವಿಧ ರಾಜ್ಯಗಳಲ್ಲೂ ಮುಂದುವರಿದಿದೆ. ಕೋಲ್ಕತ್ತಾದಲ್ಲಿ (Kolkata) ಭಾರೀ ಮಳೆಗೆ ನೇತಾಜಿ ಸುಭಾಸ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (NSCBI) ಸಂಪೂರ್ಣ ಜಲಾವೃತಗೊಂಡಿದೆ.
ಪಶ್ಚಿಮ ಬಂಗಾಳದ (West Bengal) ರಾಜಧಾನಿ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗಿದ್ದರಿಂದ ವಿಮಾನ ನಿಲ್ದಾಣದಲ್ಲೂ ನೀರು ತುಂಬಿಕೊಂಡಿದೆ. ವಿಮಾನ ನಿಲ್ದಾಣದ ರನ್‌ವೇ (Runway) ಹಾಗೂ ಟ್ಯಾಕ್ಸಿವೇಗಳಲ್ಲಿ ಮೊಣಕಾಲುದ್ದ ನೀರು ತುಂಬಿಕೊಂಡಿರುವ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿವೆ. ಅಲ್ಲದೇ ಹೌರಾ, ಸಾಲ್ಟ್ ಲೇಕ್ ಮತ್ತು ಬ್ಯಾರಕ್‌ಪುರ ಸೇರಿದಂತೆ ಕೋಲ್ಕತ್ತಾ ಮತ್ತು ಅದರ ನೆರೆಯ ಪ್ರದೇಶಗಳು ನಿರಂತರ ಮಳೆಯಿಂದ ಮುಳುಗಿ ಹೋಗಿದೆ. ಇದನ್ನೂ ಓದಿ: ಒಲಿಂಪಿಕ್ಸ್ ಪದಕ ಗೆದ್ದ ಬೆನ್ನಲ್ಲೇ ಮನು ಭಾಕರ್‌ಗೆ ಭರ್ಜರಿ ಆಫರ್ – ಬ್ರ್ಯಾಂಡ್ ಮೌಲ್ಯ 6 ಪಟ್ಟು ಹೆಚ್ಚಳ
ಹವಾಮಾನ ಇಲಾಖೆ ಪ್ರಕಾರ, ಬಂಗಾಳದಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆಯಿದೆ. ಹೌರಾ, ಪಶ್ಚಿಮ ಬರ್ಧಮಾನ್, ಬಿರ್ಭುಮ್, ಪುರ್ಬಾ ಬರ್ಧಮಾನ್, ಹೂಗ್ಲಿ, ನಾಡಿಯಾ ಮತ್ತು ಉತ್ತರ ಮತ್ತು ದಕ್ಷಿಣ 24 ಪರಗಣಗಳು ಸೇರಿದಂತೆ ದಕ್ಷಿಣ ಜಿಲ್ಲೆಗಳಲ್ಲಿ ತುಂತುರು ಮಳೆಯಾಗಲಿದೆ. ಮಾನ್ಸೂನ್ ಕಾರಣದಿಂದ ಕೆಲವೆಡೆ ಮಳೆಯ ಆರ್ಭಟ ಇನ್ನೂ ಹೆಚ್ಚಾಗಲಿದೆ. ಈ ಪರಿಸ್ಥಿತಿ ಉತ್ತರ ಪ್ರದೇಶ, ಬಿಹಾರಕ್ಕೂ ತಲುಪಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಇನ್ನೂ ಕೋಲ್ಕತ್ತಾದ ಹಲವು ಭಾಗಗಳಲ್ಲಿ ಅಪಾಯದ ಮಟ್ಟ ಮೀರಿ ನೀರು ಹರಿಯುತ್ತಿದೆ. ಹಾಗಾಗಿ ಸದ್ಯಕ್ಕೆ ಪರಿಸ್ಥಿತಿ ಹತೋಟಿಗೆ ತರುವುದು ಕಷ್ಟ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: Wayanad LandSlides | ಕರ್ನಾಟಕದಿಂದ 100 ಮನೆ ನಿರ್ಮಾಣ: ಸಿದ್ದರಾಮಯ್ಯಗೆ ಕೃತಜ್ಞತೆ ಸಲ್ಲಿಸಿದ ರಾಹುಲ್
ಕಳೆದ ಶುಕ್ರವಾರದಿಂದ ಈವರೆಗೆ ಪುರುಲಿಯಾ, ಮುರ್ಷಿದಾಬಾದ್, ಮಾಲ್ಡಾ, ಕೂಚ್‌ಬೆಹಾರ್, ಜಲ್ಪೈಗುರಿ, ಡಾರ್ಜಿಲಿಂಗ್ ಮತ್ತು ಕಾಲಿಂಪಾಂಗ್ ಪ್ರದೇಶಗಳಲ್ಲಿ 11 ಸೆಂ.ಮೀ. ನಷ್ಟು ಮಳೆಯಾಗಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿರುವುದಾಗಿ ಕೋಲ್ಕತ್ತಾ ಸರ್ಕಾರ ತಿಳಿಸಿದೆ.