ಕೋಲಾರ: ಕೋಟಿಲಿಂಗ ಕ್ಷೇತ್ರದ ಧರ್ಮಾಧಿಕಾರಿ ಗದ್ದುಗೆಗಾಗಿ ನಡೆಯುತ್ತಿರುವ ಎರಡು ಗುಂಪುಗಳ ನಡುವಿನ ವೈಷಮ್ಯದ ಹಿನ್ನಲೆ ಪ್ರತಿಷ್ಠಿತ ಕೋಲಾರದ ಕಮ್ಮಸಂದ್ರದ ಕೋಟಿಲಿಂಗ ದೇವಸ್ಥಾನದಲ್ಲಿ ಅನ್ನಸಂತರ್ಪಣೆಯನ್ನು ನಿಲ್ಲಿಸಲಾಗಿದೆ.
ಆಸ್ತಿ ವಿಚಾರಕ್ಕೆ ಸಂಬಂಧಿದಂತೆ ಮೃತ ಸಾಂಭಶಿವಮೂರ್ತಿ ಮಗ ಶಿವಪ್ರಸಾದ್ ಹಾಗೂ ಕಾರ್ಯದರ್ಶಿಯಾಗಿದ್ದ ಕುಮಾರಿ ಅವರ ನಡುವಿನ ವ್ಯಾಜ್ಯ ನ್ಯಾಯಾಲಯ ಮೆಟ್ಟಿಲೇರಿದೆ. ಈ ಹಿನ್ನಲೆ ನ್ಯಾಯಾಲಯದ ಆದೇಶದಂತೆ ಕೋಟಿಲಿಂಗ ದೇವಾಲಯವನ್ನು ಸರ್ಕಾರದ ವಶಕ್ಕೆ ನೀಡಿರುವ ನ್ಯಾಯಾಲಯ ತಾತ್ಕಾಲಿಕ ಕಮಿಟಿ ರಚನೆ ಮಾಡಿದೆ. ಈ ಕಮಿಟಿ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಮುಂಜಾಗೃತ ಕ್ರಮವಾಗಿ ಅನ್ನಸಂತರ್ಪಣೆಗೆ ಬ್ರೇಕ್ ಹಾಕಿದ್ದಾರೆ.
ಅಲ್ಲದೆ ಸುಳ್ವಾಡಿ ಚಿಂತಾಮಣಿ ದೇವಾಲಯಗಳಲ್ಲಿ ನಡೆದ ಪ್ರಸಾದ ದುರಂತವನ್ನು ಗಮನದಲ್ಲಿರಿಸಿಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ತಾತ್ಕಾಲಿಕ ಕಮಿಟಿ ಅಧ್ಯಕ್ಷ ಜೆ.ಮಂಜುನಾಥ್ ಎರಡು ಗುಂಪುಗಳ ನಡುವಿನ ವೈಯುಕ್ತಿಕ ದ್ವೇಷದಿಂದ ಪ್ರಸಾದಕ್ಕೆ ವಿಷ ಬೆರೆಸುವ ಅನುಮಾನದಿಂದ ಅನ್ನದಾನವನ್ನು ಸ್ಥಗಿತಗೊಳಿಸಲಾಗಿದೆ ಎಂದರು.
ಅಲ್ಲದೆ ವೈಷಮ್ಯಗಳಿಂದಾಗಿ ಬೇರೆ ಭಾಗಗಳಲ್ಲಿ ತೊಂದರೆಯಾಗಿರುವ ನಿದರ್ಶನಗಳು ಇದ್ದು, ಹೀಗಾಗಿ ಭಕ್ತಾದಿಗಳಿಗೆ ಯಾವುದೇ ತೊಂದರೆಯಾಗಬಾರದು ಎನ್ನುವ ನಿಟ್ಟಿನಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ದೇವಾಲಯದಲ್ಲಿ ಅಂಗಡಿಗಳ ಬಾಡಿಗೆ, ಪಾರ್ಕಿಂಗ್ ಸೇರಿದಂತೆ ಹಲವಾರು ಗೊಂದಲಗಳಿದ್ದು, ಈ ಕುರಿತು ನ್ಯಾಯಾಲಯಕ್ಕೂ ಸಹ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.