ಕೋಲಾರ: ದೆಹಲಿಯ ಗಣರಾಜ್ಯೋತ್ಸವ (Republic Day) ಕಾರ್ಯಕ್ರಮದಲ್ಲಿ ಚಿನ್ನದ ನಾಡಿನ ಹುಡುಗಿ ಕೋಲಾರದ ಯುವತಿಯೊಬ್ಬಳು ಅವಕಾಶ ಗಿಟ್ಟಿಸಿಕೊಳ್ಳುವ ಮೂಲಕ ಸಾಧನೆ ಮಾಡಿದ್ದಾಳೆ.
ಜ.26 ರಂದು ಗಣರಾಜ್ಯೋತ್ಸವದ ದಿನ ದೇಶದ ಗಮನ ಸೆಳೆಯುವ ಗಣರಾಜ್ಯೋತ್ಸವ ಪರೇಡ್ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಈ ವರ್ಷ ಚಿನ್ನದ ನಾಡಿನ ಗಾಯಕಿ ಎನ್‌ಸಿಸಿ ಕೆಡೆಟ್ ಕೋಲಾರದ ಕೆ.ಎಂ.ಶ್ರುತಿ ಆಯ್ಕೆಯಾಗಿದ್ದಾರೆ. ಗಣರಾಜ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಶಿಬಿರದಲ್ಲಿ ಮುಖ್ಯ ಗಾಯಕಿ ಅಂದರೆ ಲೀಡ್ ಸಿಂಗರ್ ಆಗಿ ಶ್ರುತಿಗೆ ಅವಕಾಶ ಸಿಕ್ಕಿದೆ.
Advertisement
Advertisement
ಶ್ರುತಿ ಎನ್‌ಸಿಸಿ ಬೆಂಗಳೂರು ಗ್ರೂಪ್ ಎ ನಿಂದ ಆಯ್ಕೆಯಾಗಿದ್ದು, ಇವರು ಕರ್ನಾಟಕ ಗೋವಾ ಎನ್‌ಸಿಸಿ ನಿರ್ದೇಶನಾಲಯವನ್ನು ಪ್ರತಿನಿಧಿಸಲಿದ್ದಾರೆ. ಕೆ.ಎಂ.ಶ್ರುತಿ ಕೋಲಾರದ ಎನ್.ಮಹದೇವ್ ಹಾಗೂ ಸಿ.ಎನ್.ಕಸ್ತೂರಿ ಅವರ ಮಗಳು. ಸಂಗೀತ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ ಕಸ್ತೂರಿ ಅವರ ಮೊದಲ ಪುತ್ರಿ. ಸದ್ಯ ಬೆಂಗಳೂರಿನ ನಾಗರಬಾವಿಯಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಬಿ.ಇ. ಐದನೇ ಸೆಮಿಸ್ಟರ್ ಓದುತ್ತಿದ್ದಾರೆ. ಅದರ ಜೊತೆಗೆ ಎನ್‌ಸಿಸಿ ಕೆಡೆಟ್ ಕೂಡಾ ಆಗಿದ್ದಾರೆ.
Advertisement
ಕಳೆದ ಆರು ತಿಂಗಳಿಂದ ವಿವಿಧೆಡೆ ಒಂಬತ್ತು ಶಿಬಿರಗಳಲ್ಲಿ ಪಾಲ್ಗೊಂಡು ತರಬೇತಿ ಪಡೆದ ನಂತರ ಈ ಅವಕಾಶ ಶ್ರುತಿ ಅವರ ಪಾಲಿಗೆ ಒಲಿದು ಬಂದಿದೆ. ರಾಜ್ಯದಲ್ಲಿ ಸುಮಾರು 80 ಸಾವಿರ ಎನ್‌ಸಿಸಿ ಕೆಡೆಟ್‌ಗಳಿದ್ದಾರೆ. ಅವರಲ್ಲಿ ಶ್ರುತಿ ಕರ್ನಾಟಕ ಗೋವಾ ಎನ್‌ಸಿಸಿ ನಿರ್ದೇಶನಾಲಯ ಪ್ರತಿನಿಧಿಸಿಯಾಗಿ ಗಣರಾಜ್ಯೋತ್ಸವ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ. ಕರ್ನಾಟಕ-ಗೋವಾ ಎನ್‌ಸಿಸಿ ನಿರ್ದೇಶನಾಲಯದಿಂದ ಶ್ರುತಿ ಸೇರಿದಂತೆ ಒಟ್ಟು 124 ಕೆಡೆಟ್‌ಗಳು ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ.
Advertisement
ಶ್ರುತಿ ಅವರಿಗೆ ತಾಯಿ ಕಸ್ತೂರಿ ಅವರೇ ಗುರು. ತಾಯಿ ಸಂಗೀತ ಶಿಕ್ಷಕಿಯಾಗಿದ್ದು, ತಾಯಿಯ ಪ್ರೇರಣೆಯಿಂದಲೇ ತಾನು ಸಂಗೀತದಲ್ಲಿ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಸಂಗೀತದಲ್ಲಿ ಜೂನಿಯರ್ ಹಾಗೂ ಸೀನಿಯರ್ ಮಾಡಿರುವ ಶ್ರುತಿ, ಸದ್ಯ ವಿದ್ವತ್ ಕಲಿಯುತ್ತಿದ್ದಾರೆ. ಸದ್ಯ ಕಾರ್ಯಕ್ರಮದ ನಿಮಿತ್ತ ಈಗಾಗಲೇ ಶ್ರುತಿ ದೆಹಲಿಗೆ ಪ್ರಯಾಣ ಬೆಳೆಸಿದ್ದು, ಅಲ್ಲಿ ನಡೆಯುವ ಪೂರ್ವಬಾವಿ ತಾಲೀಮು ಹಾಗೂ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.