– ಗ್ರಾಮದಲ್ಲಿ ಆತಂಕದ ವಾತಾವರಣ
ಕೋಲಾರ: ಜೋಡೆತ್ತು ಕಳುವಿನಿಂದ ಎರಡು ಕುಟುಂಬದ ನಡುವೆ ಆರಂಭವಾಗಿದ್ದ ಜಗಳ ಆತ್ಮಹತ್ಯೆಯಲ್ಲಿ ಅಂತ್ಯವಾದ ಘಟನೆ ಶ್ರೀನಿವಾಸಪುರ ತಾಲೂಕಿನ ಯದರೂರು ಗ್ರಾಮದಲ್ಲಿ ನಡೆದಿದೆ.
ಯದರೂರು ಗ್ರಾಮದ ವೆಂಕಟೇಶಪ್ಪ ಆತ್ಮಹತ್ಯೆ ಶರಣಾದ ವ್ಯಕ್ತಿ. ಈ ಘಟನೆಯಿಂದಾಗಿ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಗ್ರಾಮದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.
Advertisement
Advertisement
ವೆಂಕಟೇಶಪ್ಪ ಅವರ ಜೋಡೆತ್ತುಗಳು ಒಂದೂವರೆ ವರ್ಷದ ಹಿಂದೆ ಕಳ್ಳತನವಾಗಿದ್ದವು. ಹೀಗಾಗಿ ಅವರು ಸಾಕಷ್ಟು ಹುಡುಕಾಡಿದ್ದರೂ ಸಿಕ್ಕಿರಲಿಲ್ಲ. ಈ ಸಂಬಂಧ ವೆಂಕಟೇಶಪ್ಪ ಶ್ರೀನಿವಾಸಪುರ ಪೊಲೀಸ್ ಠಾಣೆಗೂ ದೂರು ನೀಡಿದ್ದರು. ಆದರೆ ಅದೇ ಗ್ರಾಮದ ಕೆಂಚಪ್ಪ ಹಾಗೂ ಆಂಜಪ್ಪ ಅವರ ಮನೆಯಲ್ಲಿ ಹನ್ನೆರಡು ದಿನಗಳ ಹಿಂದೆಯಷ್ಟೇ ಎತ್ತುಗಳು ಪ್ರತ್ಯಕ್ಷವಾಗಿದ್ದವು. ಹೀಗಾಗಿ ವೆಂಕಟೇಶಪ್ಪ ಅವರು ಕೆಂಚಪ್ಪನ ಮನೆಗೆ ಹೋಗಿ, ಇವು ನಮ್ಮ ಎತ್ತುಗಳು ಎಂದು ಕೇಳಿದ್ದರು.
Advertisement
ವೆಂಕಟೇಶಪ್ಪ ಮಗೆ ಬಂದು ಎತ್ತು ನಮ್ಮವು ಎಂದಿದ್ದಕ್ಕೆ ಕೋಪಗೊಂಡ ಕೆಂಚಪ್ಪ ಹಾಗೂ ಮನೆಯವರು ಮನಬಂದಂತೆ ಥಳಿಸಿ ಕಳಿಸಿದ್ದರು. ಈ ಸಂಬಂಧ ವೆಂಕಟೇಶಪ್ಪ ಶ್ರೀನಿವಾಸಪುರ ಪೊಲೀಸ್ ಠಾಣೆಗೆ ದೂರು ನೀಡಿ, ನಂತರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಸೋಮವಾರ ರಾತ್ರಿ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
Advertisement
ಮೃತ ವೆಂಕಟೇಶಪ್ಪ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಆದರೆ ಕೆಂಚಪ್ಪ ಕುಟುಂಬದವರು, ನಾವು ಹಣಕೊಟ್ಟು ಜೋಡೆತ್ತುಗಳನ್ನು ಖರೀದಿ ಮಾಡಿದ್ದೇವೆ. ವೆಂಕಟೇಶಪ್ಪ ಅವರ ಕಳೆದು ಹೋದ ಜೋಡೆತ್ತುಗಳು ಇವಲ್ಲ. ಇದನ್ನು ಸಾಕಷ್ಟು ಬಾರಿ ಅವರಿಗೆ ಹೇಳಿದರೂ ಕೇಳದೆ ವಿನಾಕಾರಣ ವಿವಾದ ಸೃಷ್ಟಿ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಪೊಲೀಸರು ತನಿಖೆ ಮಾಡಲಿ. ನಾವು ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸುವುದಕ್ಕೆ ಸಿದ್ಧರಿದ್ದೇವೆ. ಹೀಗಾಗಿ ಎರಡೂ ಕುಟುಂಬಗಳಿಂದ ಶ್ರೀನಿವಾಸಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ಗ್ರಾಮದಲ್ಲಿ ಎರಡೂ ಕುಟುಂಬಗಳ ನಡುವೆ ಜೋಡೆತ್ತು ವಿವಾದದಿಂದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.